A1
ಸುದ್ದಿಗಳು

ಒಸಿಐ ಮಾನ್ಯತೆ ರದ್ದು: ನಟ ಚೇತನ್‌ಗೆ ಷರತ್ತುಬದ್ಧ ಪರಿಹಾರ ನೀಡಿದ ಹೈಕೋರ್ಟ್

ನ್ಯಾಯಾಂಗದ ಬಗ್ಗೆ ಟ್ವೀಟ್ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನಟ ಚೇತನ್ ಅವರಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

Bar & Bench

ಒಸಿಐ (ಸಾಗರೋತ್ತರ ಭಾರತೀಯ ಪ್ರಜೆ) ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಭಾರತದಿಂದ ಗಡೀಪಾರಾಗುವ ಭೀತಿಯಲ್ಲಿದ್ದ ನಟ ಚೇತನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಷರತ್ತುಬದ್ಧ ಪರಿಹಾರ ನೀಡಿದೆ.

“ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭಗಳನ್ನು ಗಮನಿಸಿ ಮುಂದಿನ ವಿಚಾರಣೆ ನಡೆಯುವ 02.06.2023ರವರೆಗೆ ಒಸಿಐ ಕಾರ್ಡ್‌ಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವುದು ಸೂಕ್ತ” ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ಇದೇ ವೇಳೆ ನ್ಯಾಯಾಂಗದ ಬಗ್ಗೆ ಟ್ವೀಟ್‌ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನಟ ಚೇತನ್‌ ಅವರಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

ಕೇಂದ್ರ ಸರ್ಕಾರ 2018ರಲ್ಲಿ ನಟ ಚೇತನ್‌ ಅವರಿಗೆ ಒಸಿಐ ಕಾರ್ಡ್‌ ನೀಡಿತ್ತು. ಸಮುದಾಯಗಳ ವಿರುದ್ಧ ದ್ವೇಷ, ಸಾಮರಸ್ಯ ಕದಡುವಿಕೆ, ಕೋವಿಡ್‌ ನಿಯಾಮವಳಿಗಳ ಉಲ್ಲಂಘನೆ, ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ವಲಸೆ ಬ್ಯೂರೋ, ನಟ ಚೇತನ್‌ ಅವರಿಗೆ ಈ ಹಿಂದೆ ಶೋಕಾಸ್‌ ನೋಟಿಸ್‌ ನೀಡಿತ್ತು. 1955ರ ಪೌರತ್ವ ಕಾಯಿದೆಯ ಸೆಕ್ಷನ್ 7 ಡಿ(ಬಿ) ಮತ್ತು 7ಡಿ (ಇ) ಅಡಿ ಕಾರ್ಡ್ ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿತ್ತು. ನೋಟಿಸ್‌ಗೆ ನಟ ಚೇತನ್‌ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕಾರ್ಡ್‌ ಅನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು.

ಇದನ್ನು ಪ್ರಶ್ನಿಸಿ ನಟ ಚೇತನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಅರ್ಜಿದಾರರಿಗೆ ಶೋಕಾಸ್‌ ನೋಟಿಸ್‌ ನೀಡಿರುವುದರ ಹೊರತಾಗಿ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿತ್ತು. ಅವರ ವಾದ ಆಲಿಸದೆ ಕಾರ್ಡ್‌ ರದ್ದುಪಡಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ಕೃತ್ಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಹಾನಿಕರ ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಪ್ರತಿವಾದಿಗಳು ಆಕ್ಷೇಪಣಾ ಹೇಳಿಕೆಗಳನ್ನು ದಾಖಲಿಸುವ ಮೂಲಕ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಕಾರ್ಡ್‌ ರದ್ದುಪಡಿಸಿದ ಆದೇಶಕ್ಕೆ ನ್ಯಾಯಾಲಯ ತಡೆ ನೀಡದಿದ್ದರೆ ಅರ್ಜಿದಾರರು ಗಡೀಪಾರಾಗುವ ಸಾಧ್ಯತೆ ಇದೆ. ಒಸಿಐ ಕಾರ್ಡ್‌ ರದ್ದುಗೊಳ್ಳುವುದರಿಂದ ಅವರು ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಆದ್ದರಿಂದ ಮುಂದಿನ ವಿಚಾರಣಾ ದಿನದವರೆಗೆ ರಕ್ಷಣೆ ನೀಡಬೇಕೆಂದು ಕೋರಿದ್ದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಭಾರತದ ಉಪ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌ ಮತ್ತು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರುಣ್‌ ಶ್ಯಾಂ ಅವರು  ಒಸಿಐ ಕಾರ್ಡ್‌ ಕುರಿತು ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳನ್ನು ನಿರ್ಬಂಧಿಸುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನ್ಯಾಯಾಂಗದ ವಿರುದ್ಧವೂ ನಟನಿಗೆ ಟ್ವೀಟ್‌ ಮಾಡುವ ಅಭ್ಯಾಸ ಇರುವುದರಿಂದ ಯಾವುದೇ ಮಧ್ಯಂತರ ರಕ್ಷಣೆ ನೀಡಬಾರದು ಎಂದಿತ್ತು.

ಈ ಹಿನ್ನೆಲೆಯಲ್ಲಿ ಪೀಠ, ʼನ್ಯಾಯಾಂಗದ ವಿರುದ್ಧ ಮತ್ತು ವಿಚಾರಣೆ ಬಾಕಿ ಇರುವಂತಹ ಪ್ರಕರಣಗಳ ಬಗ್ಗೆ ಟ್ವೀಟ್‌ಗಳನ್ನು ನಟ ಮಾಡುವಂತಿಲ್ಲ ಮತ್ತು ಮಾಡಿರುವ ಟ್ವೀಟ್‌ಗಳನ್ನು ಅಳಿಸಿ ಹಾಕಿ ಈ ಬಗೆಗಿನ ಅಫಡವಿಟ್‌ ಅನ್ನು ಈ ಆದೇಶದ ಪ್ರಮಾಣೀಕೃತ ಪ್ರತಿಯ ಸ್ವೀಕೃತಿಯೊಂದಿಗೆ ಮುಂದಿನ ನಾಲ್ಕು ದಿನದೊಳಗೆ ಸಲ್ಲಿಸಬೇಕುʼ ಎಂದು ಸೂಚಿಸಿತು.

ಈ ಮೇಲಿನ ಎಲ್ಲಾ ಆದೇಶಗಳು ಪ್ರಕರಣದ ಅಂತಿಮ ಆದೇಶಕ್ಕೆ ಒಳಪಟ್ಟಿವೆ. ಷರತ್ತುಗಳನ್ನು ಉಲ್ಲಂಘಿಸಿದರೆ ನೀಡಲಾಗಿರುವ ಮಧ್ಯಂತರ ರಕ್ಷಣೆ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದು ನ್ಯಾಯಾಲಯ ಹೇಳಿತು.