High Court of Karnataka 
ಸುದ್ದಿಗಳು

ಅತ್ಯಾಚಾರ, ಕೊಲೆ ಅಪರಾಧಿಗೆ ಅಪ್ರಾಪ್ತ ಪುತ್ರಿ ನೋಡಲು ಒಂದು ತಿಂಗಳು ಪೆರೋಲ್‌ ನೀಡಿದ ಹೈಕೋರ್ಟ್‌

ಪುತ್ರಿಗೆ ಎರಡು ತಿಂಗಳಿದ್ದಾಗ ಪತಿ ಜೈಲು ಪಾಲಾಗಿದ್ದು, ಈವರೆಗೂ ಪುತ್ರಿ ಕಾಣಲು ಅವಕಾಶವಾಗಿಲ್ಲ. ಆದ್ದರಿಂದ, ಪುತ್ರಿಯನ್ನು ಕಾಣಲು ಜೀವಿತಾವಧಿ ಸಜಾ ಬಂಧಿಯಾಗಿರುವ (ಕೈದಿ) ತನ್ನ ಪತಿಗೆ ತಿಂಗಳ ಕಾಲ ಪೆರೋಲ್‌ ನೀಡುವಂತೆ ಕೋರಿದ್ದ ಪತ್ನಿ.

Bar & Bench

ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಹತ್ಯೆಗೈದು ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬನಿಗೆ ತನ್ನ ಅಪ್ರಾಪ್ತ ಪುತ್ರಿಯನ್ನು ಕಾಣಲು ಒಂದು ತಿಂಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಪುತ್ರಿಗೆ ಎರಡು ತಿಂಗಳಿದ್ದಾಗ ಪತಿ ಜೈಲು ಪಾಲಾಗಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಿಲ್ಲ. ಆದ್ದರಿಂದ, ಪುತ್ರಿಯನ್ನು ಕಾಣಲು ಮೈಸೂರು ಕೇಂದ್ರ ಕಾರಗೃಹದಲ್ಲಿ ಜೀವಿತಾವಧಿ ಸಜಾ ಬಂಧಿಯಾಗಿರುವ (ಕೈದಿ) ತನ್ನ ಪತಿ ಶಮೀವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್‌ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮ್ರೀನ್‌ ತಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅರ್ಜಿದಾರೆಯ ಪತಿ ಶಮೀವುಲ್ಲಾ 30 ದಿನಗಳ ಕಾಲ ಪೆರೋಲ್‌ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ, ಪೆರೋಲ್‌ ನೀಡಲು ನಿರಾಕರಿಸಿ 2023ರ ಸೆಪ್ಟೆಂಬರ್‌ 5ರಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರು ನೀಡಿದ್ದ ಹಿಂಬರಹವನ್ನು ರದ್ದುಪಡಿಸಲಾಗಿದೆ. ಅರ್ಜಿದಾರೆಯ ಮನವಿಯಂತೆ ಶಮೀವುಲ್ಲಾ ಅವರನ್ನು 2023ರ ನವೆಂಬರ್‌ 6ರಿಂದ ಡಿಸೆಂಬರ್‌ 5ರವರೆಗೆ ಪೆರೋಲ್‌ ಮೇಲೆ ಬಿಡುಗಡೆ ಮಾಡುವ ಸಂಬಂಧ ಅಧೀಕ್ಷಕರು ಸೂಕ್ತ ಆದೇಶ ಹೊರಡಿಸಬೇಕು. ಈ ವೇಳೆ ಶಮೀವುಲ್ಲಾ ಕಾರಾಗೃಹಕ್ಕೆ ವಾಪಸ್‌ ಆಗುವ ನಿಟ್ಟಿನಲ್ಲಿ ಅಧೀಕ್ಷಕರು ಸೂಕ್ತ ಷರತ್ತು ವಿಧಿಸಲು ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಪೆರೋಲ್‌ ಅವಧಿಯಲ್ಲಿನ ಶಮೀವುಲ್ಲಾ ನಡವಳಿಕೆ ಆಧಾರದ ಮೇಲೆ ಪೆರೋಲ್‌ ವಿಸ್ತರಣೆಗೆ ಕೋರುವ ಅವಕಾಶವನ್ನು ಸಹ ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದಲ್ಲಿ ಶಮೀವುಲ್ಲಾನನ್ನು ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆ ಅಡಿ ದೋಷಿಯಾಗಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಮಾನಿಸಿತ್ತು. ಆತನಿಗೆ ಜೀವಿತಾವಧಿಯ ಕಾಲ ಜೈಲು ಶಿಕ್ಷೆ ಮತ್ತು 4.5 ಲಕ್ಷ ರೂಪಾಯಿ ದಂಡ ವಿಧಿಸಿ 2020ರ ಅಕ್ಟೋಬರ್‌ 27ರಂದು ಆದೇಶಿಸಿತ್ತು. ಇದರಿಂದ ಶಮೀವುಲ್ಲಾ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಕಳೆದ ಆಗಸ್ಟ್‌ 30ರಂದು ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದ ಶಮೀವುಲ್ಲಾ ಪತ್ನಿ ಅಮ್ರೀನ್‌ ತಾಜ್‌, ತನ್ನ ಪತಿಯನ್ನು 2018ರಲ್ಲಿ ವಶಕ್ಕೆ ಪಡೆಯಲಾಗಿದೆ. ಆಗ ಪುತ್ರಿಗೆ ಎರಡು ತಿಂಗಳ ವಯಸ್ಸು ಆಗಿತ್ತು. ಕಳೆದ ಐದು ವರ್ಷಗಳಿಂದ ಪತಿ ಜೈಲಿನಲ್ಲಿದ್ದು, ಈವರೆಗೂ ಪುತ್ರಿಯನ್ನು ಕಾಣಲು ಅವಕಾಶವಾಗಲಿಲ್ಲ. ಪುತ್ರಿಯನ್ನು ಕಾಣಲು ಶಮೀವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್‌ ಮಂಜೂರು ಮಾಡಬೇಕು ಎಂದು ಕೋರಿ ಅಮ್ರ್ರೀನ್‌ ತಾಜ್‌ ಜೈಲು ಅಧೀಕ್ಷಕರಿಗೆ ಕೋರಿದ್ದರು.

ಗಂಭೀರ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಶಮೀವುಲ್ಲಾಗೆ ಜೀವಿತಾವಧಿ ಕಾಲದ ಜೈಲು ಶಿಕ್ಷೆ ವಿಧಿಸಿದೆ. ಇದರಿಂದ ಕರ್ನಾಟಕ ಕಾರಾಗೃಹಗಳ ಕೈಪಿಡಿ-2021ರ ನಿಯಮ 641ರ ಉಪನಿಯಮ 1ರ ಅನ್ವಯ ಪೆರೋಲ್‌ ರಜೆಗೆ ಆತ ಅರ್ಹನಾಗಿರುವುದಿಲ್ಲ ಎಂದು ತಿಳಿಸಿ ಅಧೀಕ್ಷಕರು 2023ರ ಆಗಸ್ಟ್‌ 31ರಂದು ಹಿಂಬರಹ ನೀಡಿದ್ದರು. ಇದರಿಂದ ಅಮ್ರೀನ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ಪರವಾಗಿ ವಕೀಲ ಎಸ್‌ ಸುನೀಲ್‌ ಕುಮಾರ್‌ ವಾದಿಸಿದ್ದರು.

Amreen Taj Vs State of Karnataka.pdf
Preview