Karnataka HC and CBI 
ಸುದ್ದಿಗಳು

ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್‌ ಕೊಲೆ ಪ್ರಕರಣ: ಸಿಬಿಐಗೆ ತನಿಖೆ ವಹಿಸಿದ ಹೈಕೋರ್ಟ್‌

ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದಲ್ಲಿ 2023 ಅಕ್ಟೋಬರ್‌ 24ರಂದು ಕಾಂಗ್ರೆಸ್ ಮುಖಂಡ ಎಂ ಶ್ರೀನಿವಾಸ್ ಅವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

Bar & Bench

ಕೋಲಾರ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸ್ ಕೊಲೆ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೃತರ ಪತ್ನಿ ಡಾ.ಎಸ್  ಚಂದ್ರಕಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಪುರಸ್ಕರಿಸಿದೆ.

“ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ತನಿಖೆಯ ಗುಣಮಟ್ಟ ಕಳಪೆಯಾಗಿದ್ದು, ಸಾಕಷ್ಟು ಲೋಪದೋಷಗಳಿವೆ. ಕೊಲೆಯಲ್ಲಿ ಪ್ರಮುಖ ರಾಜಕಾರಣಿಯ ಕೈವಾಡವಿದೆ ಎಂಬುದಾಗಿ ಮೃತನ ಪತ್ನಿ ಆರೋಪ ಮಾಡಿದ್ದಾರೆ. ಹೀಗಾಗಿ, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸರ್ಕಾರಿ ಅಭಿಯೋಜಕರಾಗಿದ್ದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರೇ ವಾದಿಸಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ತನಿಖೆಯನ್ನು ಸಿಬಿಐಗೆ ವಹಿಸುವುದು ಸೂಕ್ತ” ಎಂದು ಅಭಿಪ್ರಾಯಪಟ್ಟಿದೆ.

ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಾದ ಹಂತದಿಂದಲೇ ಪ್ರಕರಣ ಕುರಿತು ಹೊಸದಾಗಿ ತನಿಖೆ ನಡೆಸಬೇಕು. ಮುಂದಿನ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು ಎಂದು ಸಿಬಿಐಗೆ ನಿರ್ದೇಶಿಸಿರುವ ಪೀಠವು ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಿಬಿಐಗೆ ಅಗತ್ಯ ಸಹಕಾರ ನೀಡಬೇಕು ಎಂದು ನಿರ್ದೇಶಿಸಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದಲ್ಲಿ 2023 ಅಕ್ಟೋಬರ್‌ 24ರಂದು ಕಾಂಗ್ರೆಸ್ ಮುಖಂಡ ಎಂ ಶ್ರೀನಿವಾಸ್ ಅವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತದ ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದರು.

ಮೃತರ ಪತ್ನಿ ಚಂದ್ರಕಲಾ ಅವರು “ಇದೊಂದು ನಿಗೂಢ ಕೊಲೆ. ಯಾರು? ಏತಕ್ಕಾಗಿ? ಈ ಕೃತ್ಯ ಎಸಗಿದ್ದಾರೆ ಎಂಬೆಲ್ಲಾ ಸಂಗತಿಗಳು ರಹಸ್ಯವಾಗಿವೆ. ಪ್ರಕರಣವನ್ನು ಮೊದಲು ಸ್ಥಳೀಯ ಪೊಲೀಸರು 37 ದಿನಗಳ ಕಾಲ ತನಿಖೆ ನಡೆಸಿದ್ದರು. ನಂತರ ರಾಜ್ಯ ಸರ್ಕಾರವು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಪೊಲೀಸರು 50 ದಿನಗಳ ಕಾಲ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಇದು ಸುಪಾರಿ ಕೊಲೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಆರೋಪ ಪಟ್ಟಿಯಲ್ಲಿ ವಿವರಣೆ ನೀಡಿಲ್ಲ. ಪ್ರಕರಣ ಸಂಬಂಧ ತಮಗೆ ಇಂತವರ ಮೇಲೆ ಸಂದೇಹವಿರುವುದಾಗಿ ಸಿಐಡಿಗೆ ತಿಳಿಸಿದ್ದರೂ ಆ ಕುರಿತು ತನಿಖೆ ನಡೆಸಿಲ್ಲ" ಎಂದು ಆರೋಪಿಸಿದ್ದರು.

ಅಲ್ಲದೇ, ಘಟನೆ ಸಂಭವಿಸಿದ ಐದು ದಿನದ ಬಳಿಕ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿಲ್ಲ. ಆರೋಪಿಗಳ ಪೋನ್‌ ಸಂಭಾಷಣೆ (ಸಿಡಿಆರ್) ಕಲೆ ಹಾಕಿಲ್ಲ. ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿಲ್ಲ. ಇದೊಂದು ಅತ್ಯಂತ ಕಳಪೆ ಆರೋಪ ಪಟ್ಟಿಯಾಗಿದ್ದು, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು.

ಇದೇ ವೇಳೆ ಸರ್ಕಾರ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರಾಗಿದ್ದ ಹಿರಿಯ ವಕೀಲ ಸಿ ಎಚ್ ಹನುಂತರಾಯ ಅವರೇ ಆರೋಪ ಪಟ್ಟಿಯಲ್ಲಿ ನೂರಾರು ಗೊಂದಲಗಳಿವೆ. ಕೊಲೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿರುವುದಾಗಿ ಅರ್ಜಿದಾರರೇ ಆರೋಪಿಸಿದ್ದರು. ಆ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಯಾರೋ ಪರದೇ ಹಿಂದೆ ನಿಂತು ಕೊಲೆ ನಡೆಸಿದ್ದಾರೆ ಎಂಬುದು ಆರೋಪ ಪಟ್ಟಿ ನೋಡಿದರೆ ತಿಳಿಯಲಿದೆ. ಸಿಬಿಐಗೆ ತನಿಖೆ ನಡೆಸಲು ಅವಕಾಶ ನೀಡಿದರೆ, ಪರದೇ ಹಿಂದೆ ಅಡಗಿಕೂತವರು ಯಾರು ಎಂದು ತಿಳಿಯಬಹುದು ಎಂದು ವಾದಿಸಿದ್ದರು.