ವರ್ಗಾವಣೆ ಸಂಬಂಧಿತ ಮಾರ್ಗಸೂಚಿ ಇಲ್ಲದೆ, ನೌಕರರಿಂದ ಕೋರಿಕೆಯೂ ಇಲ್ಲದೆ ಇದ್ದರೂ ಸಿಬ್ಬಂದಿಯೊಬ್ಬರನ್ನು ವರ್ಗಾವಣೆ ಮಾಡಿದ್ದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕ್ರಮವನ್ನು ಖಂಡಿಸಿರುವ ಹೈಕೋರ್ಟ್ ಮೂರು ತಿಂಗಳಲ್ಲಿ ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸಲು ನಿಗಮಕ್ಕೆ ನಿರ್ದೇಶನ ನೀಡಿದೆ.
ಸದ್ಯ ಕೆಲಸ ನಿರ್ವಹಿಸುತ್ತಿರುವ ನಿಗಮದಿಂದ ಮತ್ತೊಂದು ನಿಗಮಕ್ಕೆ ತಮ್ಮನ್ನು ವರ್ಗಾವಣೆ ಮಾಡಿರುವ ಆದೇಶ ರದ್ದು ಕೋರಿ ಚಂದ್ರಕಾಂತ್ ವೈ ತೊರವಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಧಾರವಾಡ ಪೀಠದ ನ್ಯಾ.ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯಪೀಠ, ‘‘ಪ್ರಸ್ತುತ ಮಾರ್ಗಸೂಚಿ ಇಲ್ಲದೆ ಇರುವುದರಿಂದ ಮಾರ್ಗಸೂಚಿ ರೂಪಿಸುವವರೆಗೆ ಆಡಳಿತಾತ್ಮಕ ಆಧಾರದ ಮೇಲೆ ವರ್ಗಾವಣೆಗಳನ್ನು ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ’’ ಎಂದಿತು.
ತನ್ನ ಆದೇಶದಲ್ಲಿ ಪೀಠವು, ‘‘ನಿಗಮದ ಪರ ವಕೀಲರು, 2015ರ ಸುತ್ತೋಲೆ ಆಧರಿಸಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಮಾರ್ಗಸೂಚಿಯಿಲ್ಲದೆ ವರ್ಗಾವಣೆ ಮಾಡುವುದು ಏಕಪಕ್ಷೀಯ ಕ್ರಮವಾಗುತ್ತದೆ’’ ಎಂದು ಹೇಳಿತು.
ಮುಂದುವರೆದು, Tಅರ್ಜಿದಾರರು ಕಳೆದ 13 ವರ್ಷಗಳಿಂದ ಚಿಕ್ಕೋಡಿ ವಿಭಾಗದ ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ಡಿ ದರ್ಜೆ ಉದ್ಯೋಗಿಯಾಗಿದ್ದಾರೆ. ಡಿ ದರ್ಜೆಯ ನೌಕರರ ಸಾಮಾನ್ಯ ವರ್ಗಾವಣೆಗಳು ಕೋರಿಕೆ ಮೇರೆಗೆ ನಡೆಯುತ್ತವೆ. ಆದರೆ ಕೋರಿಕೆಯ ಮೇರೆಗೆ ವರ್ಗಾವಣೆಯನ್ನು ಕೋರಿದ್ದ 43 ಉದ್ಯೋಗಿಗಳೊಂದಿಗೆ, ಅರ್ಜಿದಾರರನ್ನೂ ವರ್ಗಾಯಿಸಲಾಗಿದೆ. ಅರ್ಜಿದಾರರು ವರ್ಗಾವಣೆಗೆ ಯಾವುದೇ ವಿನಂತಿ ಮಾಡಿಲ್ಲ. ಅವರ ವರ್ಗಾವಣೆಯ ಹಿಂದೆ ಆಡಳಿತಾತ್ಮಕ ಕಾರಣವಿದೆ ಎಂದು ಭಾವಿಸಿದರೂ, ವರ್ಗಾವಣೆ ಆದೇಶವು ಕಾರಣಗಳನ್ನು ಒಳಗೊಂಡಿಲ್ಲ ಎಂದು ಆಕ್ಷೇಪಿಸಿರುವ ಪೀಠವು ವರ್ಗಾವಣೆಯನ್ನು ರದ್ದುಪಡಿಸಿದೆ.
‘‘ನಿಗಮದ ವಕೀಲರು ಅವಲಂಬಿಸಿರುವ ಸುತ್ತೋಲೆಯು ಮನವಿ ಮೇರೆಯ ವರ್ಗಾವಣೆಗಳಿಗೆ ಅನ್ವಯಿಸುತ್ತದೆ. ಆದರೆ, ವಿನಂತಿಸದೆ ಇರುವ ಅರ್ಜಿದಾರರನ್ನು ಏಕೆ ವರ್ಗಾಯಿಸಲಾಗಿದೆ ಮತ್ತು ಅದಕ್ಕೆ ಕಾರಣಗಳು ಮತ್ತು ತುರ್ತುಸ್ಥಿತಿಗಳು ಯಾವುವು ಎಂಬುದರ ಕುರಿತು ಯಾವುದೇ ವಿವರಗಳನ್ನೂ ವರ್ಗಾವಣೆ ಆದೇಶ ಒಳಗೊಂಡಿಲ್ಲ. ಹಾಗಾಗಿ ಆದೇಶ ರದ್ದುಗೊಳಿಸಲಾಗುತ್ತಿದೆ’’ ಎಂದು ನ್ಯಾಯಾಲಯ ಹೇಳಿದೆ.
ಅಂತಿಮವಾಗಿ, ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಕೇವಲ ಆಡಳಿತಾತ್ಮಕ ಔಪಚಾರಿಕತೆಗಿಂತ ಅಗತ್ಯವಾಗಿದೆ. ನಿಗಮದ ಸಿಬ್ಬಂದಿ ತಮ್ಮ ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಹಿನ್ನೆಲೆ: ಅರ್ಜಿದಾರರು 2006ರ ಮೇ.30ರಂದು ಚಾಲಕ ಕಮ್ ನಿರ್ವಾಹಕರಾಗಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಅವರ ಸೇವೆಯನ್ನು 2012ರಲ್ಲಿ ಕಾಯಂಗೊಳಿಸಲಾಗಿತ್ತು. 13 ವರ್ಷಗಳಿಂದ ಅವರು ಚಿಕ್ಕೋಡಿ ವಿಭಾಗದಲ್ಲಿಕಾರ್ಯನಿರ್ವಹಿಸುತ್ತಿದ್ದರು. ಉತ್ತಮ ಸೇವೆಗಾಗಿ ಹಲವು ಪ್ರಶಸ್ತಿಗಳನ್ನೂ ಸಹ ಪಡೆದಿದ್ದರು. ಅವರು ಯಾವುದೇ ಮನವಿ ಮಾಡದಿದ್ದರೂ ಸಹ 2014ರ ನ.30 ರಂದು ಅವರನ್ನು ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದರು.