Bhavani Revanna and Karnataka HC 
ಸುದ್ದಿಗಳು

ಭವಾನಿ ರೇವಣ್ಣ ಹಾಸನ, ಮೈಸೂರು ಭೇಟಿಗೆ 15 ದಿನ ಕಾಲಾವಕಾಶ ನೀಡಿದ ಹೈಕೋರ್ಟ್‌

ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತು ಉಲ್ಲಂಘಿಸಬಾರದು.  ಒಂದೊಮ್ಮೆ ಷರತ್ತು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದ ಪೀಠ.

Bar & Bench

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ ಆರ್‌ ನಗರದ ಮಹಿಳೆಯನ್ನು ಅಪಹರಿಸಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ಅವರಿಗೆ ಹಾಸನ ಮತ್ತು ಮೈಸೂರಿಗೆ ಭೇಟಿ ನೀಡಲು ಕರ್ನಾಟಕ ಹೈಕೋರ್ಟ್‌ 15 ದಿನಗಳ ಕಾಲಾವಕಾಶ ನೀಡಿ ಆದೇಶಿಸಿದೆ.

ಭವಾನಿ ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಭವಾನಿ ಪರ ವಕೀಲರು “ಹೈಕೋರ್ಟ್‌ ಈ ಹಿಂದೆ ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶ ಮಾಡದಂತೆ ಷರತ್ತು ವಿಧಿಸಿದೆ. ಭವಾನಿ ಅವರು ತಮ್ಮ ತವರೂರಿಗೆ ಹೋಗಬೇಕಿದೆ. ಆದ್ದರಿಂದ, ಆ ಷರತ್ತು ಸಡಿಲಿಸಬೇಕು” ಎಂದು ಕೋರಿದರು.

ಅದಕ್ಕೆ ಪೀಠವು “ಷರತ್ತು ಸಡಿಲಿಸುವ ಕುರಿತು ಮುಂದಿನ ವಿಚಾರಣೆ ವೇಳೆ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.

ಈ ಮಧ್ಯೆ, 15 ದಿನಗಳ ಕಾಲ ಭವಾನಿ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಭೇಟಿ ನೀಡಬಹುದು. ಆದರೆ, ಪ್ರಕರಣದ ಸಂತ್ರಸ್ತೆ, ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನಿಸುವುದು ಸೇರಿದಂತೆ ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತು ಉಲ್ಲಂಘಿಸಬಾರದು.  ಒಂದೊಮ್ಮೆ ಷರತ್ತು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿತು.