ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ (ಜೀವಿಸುವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ) ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವ ಭೀತಿ ಎದುರಾದಾಗ ವ್ಯಕ್ತಿಯ ಬಂಧನ ಪೂರ್ವ ಹಂತದಲ್ಲಿಯೂ ಸಹ ಉಚ್ಚ ನ್ಯಾಯಾಲಯಗಳು ತಮ್ಮ ರಿಟ್ ನ್ಯಾಯವ್ಯಾಪ್ತಿ ಚಲಾಯಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ಆದರೆ ಮೂಲಭೂತ ಹಕ್ಕುಗಳಿಗೆ ಬೆದರಿಕೆ ಇದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿದ್ದಲ್ಲಿ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
"... ಮೂಲಭೂತ ಹಕ್ಕುಗಳ ಉಲ್ಲಂಘನೆಯ ಅಪಾಯವಿದ್ದಲ್ಲಿ ಬಂಧನಪೂರ್ವ ಹಂತದಲ್ಲಿಯೂ ಸಹ ಹೈಕೋರ್ಟ್‌ಗೆ ತನ್ನ ರಿಟ್ ನ್ಯಾಯವ್ಯಾಪ್ತಿ ಚಲಾಯಿಸಲು ಸಂವಿಧಾನದ 226 ನೇ ವಿಧಿ ಅಧಿಕಾರ ನೀಡಿದೆ ಎಂದು ನ್ಯಾಯಾಲಯ ಕಂಡುಕೊಂಡಿದೆ. ಸಂವಿಧಾನದ 21 ನೇ ವಿಧಿ ಉಲ್ಲಂಘನೆಯ ಅಪಾಯವಿದೆ ಎಂದು ಸ್ವತಃ ಅರಿಯಲು ನ್ಯಾಯಾಲಯ ತನ್ನ ಮುಂದೆ ಕೆಲ ಪುರಾವೆಗಳನ್ನು ಹೊಂದಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ನ್ಯಾಯಾಲಯ ಇದು ಕೇವಲ ಆತಂಕಗಳನ್ನು ಆಧರಿಸದೇ ಕೆಲವು ಪ್ರತ್ಯಕ್ಷ ಕ್ರಿಯೆಗಳ ಆಧಾರದಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದು " ಎಂದು ನ್ಯಾಯಾಲಯ ಹೇಳಿದೆ.
ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ನ ಹಲವು ಕಾನೂನುಗಳನ್ನು ಉಲ್ಲೇಖಿಸಿದ, ನ್ಯಾಯಮೂರ್ತಿ ವೆಂಕಟೇಶ್ ಅವರು ಬಂಧನ ಪೂರ್ವ ಹಂತದಲ್ಲಿ ಸೆರೆ ಆದೇಶಗಳ ವಿರುದ್ಧ ಹೈಕೋರ್ಟ್ ತನ್ನ ರಿಟ್ ಅಧಿಕಾರ ಚಲಾಯಿಸಲು ಇರುವ ವಿಶಾಲ ನೆಲೆಗಳನ್ನು ವಿವರಿಸಿದ್ದಾರೆ. ಅವುಗಳೆಂದರೆ:
ಕಾಯಿದೆಯಡಿ ಆದೇಶ ಜಾರಿ ಮಾಡಬೇಕು ಎಂಬ ಗುರಿ ಇದ್ದರೂ ಅದನ್ನು ಜಾರಿಗೆ ತರದೇ ಇದ್ದಲ್ಲಿ.
ತಪ್ಪು ವ್ಯಕ್ತಿಯ ವಿರುದ್ಧ ಬಂಧನ ಆದೇಶ ಜಾರಿಗೊಳಿಸಲು ಪ್ರಯತ್ನಿಸಿದರೆ;
ತಪ್ಪು ಉದ್ದೇಶಕ್ಕಾಗಿ ಬಂಧನ ಆದೇಶ ಜಾರಿಗೊಳಿಸಿದಲ್ಲಿ;
ಅಸ್ಪಷ್ಟ, ಅನ್ಯ ಮತ್ತು ಅಪ್ರಸ್ತುತ ಆಧಾರದ ಮೇಲೆ ಬಂಧನ ಆದೇಶ ಜಾರಿಗೊಳಿಸಿದ್ದಲ್ಲಿ; ಅಥವಾ
ಬಂಧನ ಆದೇಶ ಜಾರಿಗೊಳಿಸಿದ ಅಧಿಕಾರಿಗೆ ಹಾಗೆ ಮಾಡಲು ಅಧಿಕಾರವಿಲ್ಲದಿದ್ದಾಗ.
1982 ರ ತಮಿಳುನಾಡು ಗೂಂಡಾ ಕಾಯಿದೆಯಡಿ ಬಂಧನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ ಮೇಲಿನ ಅಂಶಗಳನ್ನು ತಿಳಿಸಿದೆ. ಹಣಕಾಸು ವಂಚನೆ ಪ್ರಕರಣದಲ್ಲಿ ಅರ್ಜಿದಾರ ಎರಡನೇ ಆರೋಪಿಯಾಗಿದ್ದು ಈಗಾಗಲೇ ಆತ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಮೊದಲ ಆರೋಪಿಯನ್ನು ಗೂಂಡಾ ಕಾಯಿದೆಯಡಿ ಬಂಧಿಸಲಾಗಿದ್ದು ತನ್ನನ್ನೂ ಬಂಧಿಸಬಹುದೆಂಬ ಭೀತಿಯಲ್ಲಿ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು.
ಸಹ ಆರೋಪಿಗಳನ್ನು ಬಂಧಿಸಿರುವುದರಿಂದ ಅರ್ಜಿದಾರರ ಮನದಲ್ಲಿ ತನ್ನನ್ನೂ ಬಂಧಿಸಬಹುದೆಂಬ ಭೀತಿಯಷ್ಟೇ ಇದೆ ಎಂಬ ನೆಲೆಯಲ್ಲಿ ಪ್ರಸ್ತುತ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.