Karnataka High Court 
ಸುದ್ದಿಗಳು

ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ ಪದಾಧಿಕಾರಿಗಳ ವಿರುದ್ಧದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಸದಸ್ಯತ್ವದ ಅರ್ಜಿಯ ನಮೂನೆ ಪರಿಶೀಲಿಸಿದರೆ ಸದಸ್ಯರ ಜಾತಿ ಹೆಸರು ಕೇಳುವಂತಹ ಯಾವುದೇ ಕಾಲಂ ಇಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂಬ ಕಾರಣಕ್ಕೆ ತನಗೆ ಸದಸ್ಯತ್ವ ನೀಡಿಲ್ಲ ಎಂಬುದು ಕೇವಲ ದೂರುದಾರರ ಕಲ್ಪನೆಯಾಗಿದೆ ಎಂದಿರುವ ನ್ಯಾಯಾಲಯ.

Bar & Bench

ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ನಾಲ್ವರು ಪದಾಧಿಕಾರಿಗಳ ವಿರುದ್ಧ ಮಾಜಿ ಸದಸ್ಯರೊಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿ ದಾಖಲಿಸಿದ್ದ ದೂರನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಮಾಜಿ ಸದಸ್ಯ ಎ ಎಂ ಸುರೇಶ್ ರಾಜ್ ಎಂಬುವರು ದಾಖಲಿಸಿದ್ದ ದೂರು ರದ್ದುಪಡಿಸಲು ಕೋರಿ ಡಾ. ಎಂ ಜಿ ಭಟ್ ಸೇರಿದಂತೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ನಾಲ್ವರು ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಅರ್ಜಿದಾರರು ಎಸಗಿದ್ದಾರೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದ ಕೃತ್ಯಗಳು ಸಭಾ ಕೊಠಡಿಯಲ್ಲಿ ನಡೆದಿದೆ. ದೂರಿನ ಪ್ರಕಾರ ಅರ್ಜಿದಾರರಿದ್ದ ಕೊಠಡಿಗೆ ದೂರುದಾರರೇ ಹೋಗಿದ್ದಾರೆ. ಹೀಗಾಗಿ, ಸಭಾ ಕೋಠಡಿ ಜನರಿದ್ದ ಜಾಗ ಅಥವಾ ಸಾರ್ವಜನಿಕ ಸ್ಥಳವಲ್ಲ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿಯ ಅಪರಾಧ ಕೃತ್ಯವು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು. ಇನ್ನೂ ಸಿಸಿಟಿವಿ ದೃಶ್ಯಗಳು ನೋಡಿದರೆ, ಅರ್ಜಿದಾರರು ದೂರುದಾರ ಮೇಲೆ ಯಾವುದೇ ನಿಂದನೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ತಮಗೆ ಆಜೀವ ಸದಸ್ಯತ್ವ ನೀಡದೆ ಹೋದರೆ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಅರ್ಜಿದಾರರಿಗೆ ದೂರುದಾರರೇ ಬೆದರಿಕೆ ಹಾಕಿರುವುದು ತಿಳಿಯಲಿದೆ.

ಇನ್ನು ಸದಸ್ಯತ್ವದ ಅರ್ಜಿಯ ನಮೂನೆ ಪರಿಶೀಲಿಸಿದರೆ ಸದಸ್ಯರ ಜಾತಿ ಹೆಸರು ಕೇಳುವಂತಹ ಯಾವುದೇ ಕಾಲಂ ಇಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂಬ ಕಾರಣಕ್ಕೆ ತನಗೆ ಸದಸ್ಯತ್ವ ನೀಡಿಲ್ಲ ಎಂಬುದು ಕೇವಲ ದೂರುದಾರರ ಕಲ್ಪನೆಯಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ” ಎಂದು ತಿಳಿಸಿ ನ್ಯಾಯಾಲಯವು ದೂರನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರಾದ ಎ ಎಂ ಸುರೇಶ್ ರಾಜ್ ಅವರು 2014ರಿಂದ ಅಸೋಸಿಯೇಷನ್‌ನ ತಾತ್ಕಾಲಿಕ ಸದಸ್ಯರಾಗಿದ್ದರು. 2019ರಲ್ಲಿ ನಡೆದ ಘಟನೆಯೊಂದರ ವಿಚಾರಣೆ ನಡೆಸಿ ಸುರೇಶ್ ರಾಜ್ ಅವರ ಸದಸ್ಯತ್ವವನ್ನು 2019ರ ಮಾರ್ಚ್‌ 13ರಂದು ಅಮಾನತುಪಡಿಸಲಾಗಿತ್ತು. ಈ ನಡುವೆ 2018ರ ಸೆಪ್ಟೆಂಬರ್‌ 1ರಂದು ಅಸೋಸಿಯೇಷನ್ ಆಜೀವ ಸದಸ್ಯತ್ವ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. 2020ರ ಅಕ್ಟೋಬರ್‌ 14ರಂದು ಆಜೀವ ಸದಸ್ಯತ್ವ ಪಡೆಯಲು ಅಗತ್ಯವಾದಷ್ಟು ಮತಗಳನ್ನು ಪಡೆದಿಲ್ಲ ಎಂದು ತಿಳಿಸಿ ಸುರೇಶ್ ರಾಜ್‌ಗೆ ಅಸೋಸಿಯೇಷನ್ ಪತ್ರ ಬರೆದಿತ್ತು.

ಇದನ್ನು ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್ ಮುಂದೆ ಪ್ರಶ್ನಿಸಿದ್ದರು. ಹೊಸದಾಗಿ ಪದಾಧಿಕಾರಿಗಳ ಸಭೆ ನಡೆಸಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಅಸೊಸಿಯೇಷನ್‌ಗೆ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ 2022ರ ಮೇ 19ರಂದು ಸೂಚಿಸಿದ್ದರು. ಪ್ರಕರಣ ಸಂಬಂಧ ಮುಂದೆ ಯಾವ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಚರ್ಚಿಸಲು ಅಸೋಸಿಯೇಷನ್ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು 2022ರ ಜೂನ್‌ 14ರಂದು ಸಭೆ ನಡೆಸುವಾಗ ದೂರುದಾರ ಸುರೇಶ್ ರಾಜ್ ಅವರು ಸಭೆಯ ಕೊಠಡಿಗೆ ಏಕಾಏಕಿ ನುಗ್ಗಿ ಉಪನೋಂದಣಾಧಿಕಾರಿಗಳ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಅಸೋಷಿಯೇಷನ್ ಪದಾಧಿಕಾರಿಗಳಾದ ಅರ್ಜಿದಾರರು, ಸದ್ಯ ಸಭೆ ಮುಕ್ತಾಯವಾಗಿದೆ. ಉಪ ನೋಂದಣಾಧಿಕಾರಿಗಳ ಆದೇಶದ ತಲುಪಿದ ನಂತರ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.

ಇದಾದ ಬಳಿಕ ದೂರುದಾರರು ಜೀವನ್‌ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಜೀವ ಬೆದರಿಕೆ, ಹಲ್ಲೆ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ದೂರು ಸಲ್ಲಿಸಿದ್ದರು. ಈ ದೂರು ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.