High Court of Karnataka 
ಸುದ್ದಿಗಳು

ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಜಾಕ್‌ವೆಲ್ ನಿರ್ಮಾಣ ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ

ನದಿ ಸಮೀಪದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಾಕ್‌ವೆಲ್ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಆದ್ದರಿಂದ ಕಾಮಗಾರಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

Bar & Bench

ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಕೈಗೊಂಡಿರುವ ಜಾಕ್‌ವೆಲ್ ನಿರ್ಮಾಣ ಕಾಮಗಾರಿಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಕಾಳಿ ಬ್ರಿಗೇಡ್ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ಕಾಮಗಾರಿಯನ್ನು ತಡೆಹಿಡಿಯಲು ನಿರಾಕರಿಸಿತು.

ನದಿ ಸಮೀಪದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಾಕ್‌ವೆಲ್ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಆದ್ದರಿಂದ ಕಾಮಗಾರಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಜಾಕ್‌ವೆಲ್ ನಿರ್ಮಾಣದಿಂದ ನದಿ ಜಲಾನಯನ ಪ್ರದೇಶ ಮತ್ತು ಸ್ಥಳೀಯ ಪರಿಸರ ಹಾಳಾಗುತ್ತದೆ ಎಂಬುದಾಗಿ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಹಾಗಾಗಿ, ಅರ್ಜಿದಾರರು ತಮ್ಮ ಕುಂದುಕೊರತೆ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಥವಾ ಇತರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಪೀಠ ಆದೇಶಿಸಿದೆ.

ಅಲ್ಲದೇ, ಅರ್ಜಿದಾರರು ಆರೋಪಿಸಿದಂತೆ ಜಾಕ್‌ವೆಲ್ ನಿರ್ಮಾಣದಿಂದ ನದಿ ಮತ್ತು ಸ್ಥಳೀಯ ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೆ, ಯೋಜನೆ ಅನುಮತಿ ಪಡೆಯುವ ವಿಚಾರದಲ್ಲಿ ಯಾವುದಾದರೂ ಅಕ್ರಮ ನಡೆದಿದ್ದರೆ ಅಥವಾ ನಿಯಮಗಳು ಉಲ್ಲಂಘನೆಯಾಗಿದ್ದರೆ ಸರ್ಕಾರಿ ಪ್ರಾಧಿಕಾರಿಗಳು ಅಗತ್ಯ ಅನುಮತಿ ಪಡೆಯುವುದರ ಮೂಲಕ ನಿಯಮಗಳನ್ವಯವೇ ಯೋಜನೆ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಹಾಗೆಯೇ, ಅರ್ಜಿದಾರರ ಮನವಿ ಪತ್ರವನ್ನು ಪರಿಗಣಿಸಿ ಕಾನೂನು ಪ್ರಕಾರ ತ್ವರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.