Justice M Nagaprasanna and Karnataka HC 
ಸುದ್ದಿಗಳು

ಡಿಆರ್‌ಡಿಒಗೆ ಕಳಪೆ ಸಾಧನ ಪೂರೈಕೆ: ಅಮೆರಿಕಾ ಕಂಪನಿಯ ಮುಖ್ಯಸ್ಥರ ವಿರುದ್ಧ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

“ಆರೋಪಪಟ್ಟಿಯ ಸಾರಾಂಶ, ಪ್ಯಾರಾಗಳು & ಸಾಕ್ಷಿಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಅರ್ಜಿದಾರರ ಪಾತ್ರವು ಸ್ಪಷ್ಟವಾಗಿದೆ. ಸಾಕ್ಷಿ ಹೇಳಿಕೆಗಳು ಅರ್ಜಿದಾರರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ” ಎಂದು ಹೇಳಿದೆ.

Bar & Bench

ರಕ್ಷ ಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ರಕ್ಷಣಾ ಏವಿಯೋನಿಕ್ಸ್‌ ಸಂಶೋಧನಾ ಸಂಸ್ಥೆಗಳಿಗೆ (ಡಿಎಆರ್‌ಇ) ದೋಷಪೂರಿತ ಸಾಧನ ಪೂರೈಕೆ ಮಾಡಿ ವಂಚನೆ ಎಸಗಿದ್ದ ಆರೋಪ ಎದುರಿಸುತ್ತಿರುವ ಅಮೆರಿಕಾ ಮೂಲದ ಮೆಸರ್ಸ್‌ ಅಕಾನ್‌ ಕಂಪನಿಯ  ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯ ಸರೀನ್‌ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಪ್ರಕರಣ ರದ್ದತಿ 76 ವರ್ಷದ ಸೂರ್ಯ ಸರೀನ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠವು ಅರ್ಜಿದಾರರ ವಿರುದ್ಧದ ವಂಚನೆ ಆರೋಪವನ್ನು ದೃಢಪಡಿಸುವ ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದಿವೆ ಎಂದಿದೆ.

“ಅರ್ಜಿದಾರರ ವಿರುದ್ಧ ಐಪಿಸಿಯ ಸೆಕ್ಷನ್‌ 420 ಮತ್ತು 120ಬಿ ಅಡಿಯಲ್ಲಿ ಮೇಲ್ನೋಟಕ್ಕೆ ದಾಖಲಾಗಿರುವ ಅಪರಾಧಕ್ಕೆ ಈ ಪ್ರಕರಣವು ಒಂದು ಉತ್ತಮ ಉದಾಹರಣೆಯಾಗಿದೆ. ಇಡೀ ವಿಷಯವು ಸತ್ಯಗಳು, ಕೆಲವು ವಿವಾದಿತ ಮತ್ತು ದಾಖಲೆಯಲ್ಲಿರುವ ಕೆಲವು ವಿಷಯಗಳ ಸುತ್ತ ಸುತ್ತುತ್ತದೆ. ಆದ್ದರಿಂದ, ವಿಚಾರಣೆಯ ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಆರೋಪಪಟ್ಟಿಯ ಸಾರಾಂಶ, ಪ್ಯಾರಾಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಅರ್ಜಿದಾರರ ಪಾತ್ರವು ಸ್ಪಷ್ಟವಾಗಿದೆ. ಸಾಕ್ಷಿ ಹೇಳಿಕೆಗಳು ಅರ್ಜಿದಾರರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ” ಎಂದು ಹೇಳಿದೆ.

“ಅರ್ಜಿದಾರರು ಅಮೆರಿಕದ ಅಕಾನ್‌ನ ಏಕೈಕ ಮಾಲೀಕರು ಮತ್ತು ಅವರ ಮಗ ಸಂದೀಪ್‌ ಸರೀನ್‌ ಅಕಾನ್‌ನ ನಿರ್ದೇಶಕರು ಮತ್ತು ಅರ್ಜಿದಾರರು ಅಕಾನ್‌ನ ಸ್ವತಂತ್ರ ಮಾಲೀಕರು ಮತ್ತು ಫಲಾನುಭವಿಗಳು ಎಂಬುದು ಸಾಕ್ಷಿ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಅವರು ಅಕಾನ್‌ ಎಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಅನ್ನು ನಿಯಂತ್ರಿಸುತ್ತಾರೆ ಮತ್ತು ಎಲ್ಲಾ ಈಮೇಲ್‌ ಸಂವಹನಗಳು ಅರ್ಜಿದಾರರ ಒಳಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ” ಎಂದು ಪೀಠ ತಿಳಿಸಿದೆ.

“ಪ್ರಸ್ತುತ ಪ್ರಕರಣವು ಜಾಗತಿಕ ಟೆಂಡರ್‌ ಆಗಿದ್ದು, ಯಶಸ್ವಿ ಟೆಂಡರ್‌ದಾರರು ಡಿಆರ್‌ಡಿಒಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ಸಾಗರೋತ್ತರ ಆರೋಪದ ತನಿಖೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆ ಹಿನ್ನೆಲೆಯಲ್ಲಿ, ಪ್ರಸ್ತುತ ಪ್ರಕರಣದಲ್ಲಿನ ವಿಳಂಬವು ವಿಚಾರಣೆಗೆ ಹಾನಿ ಮಾಡಿಲ್ಲ. ಇದು ವಿವರಿಸಲಾಗದ ವಿಳಂಬ ಮಾತ್ರ. ವಿಳಂಬಕ್ಕೆ ಪ್ರಸ್ತುತ ಪ್ರಕರಣದಲ್ಲಿ ವಿವರಣೆಯನ್ನು ಕಂಡುಕೊಳ್ಳಲಾಗಿದೆ. ಆದ್ದರಿಂದ, ಅರ್ಜಿದಾರರ ವಾದವು ಒಪ್ಪಲು ಅರ್ಹವಲ್ಲ. ಪ್ರಕರಣದಲ್ಲಿನಾಲ್ಕನೇ ಆರೋಪಿಯಾಗಿರುವ ಅರ್ಜಿದಾರರ ಪಾತ್ರ ಅತ್ಯಂತ ಸ್ಪಷ್ಟವಾಗಿದೆ” ಎಂದು ಪೀಠ ಹೇಳಿದೆ.

ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದ ಅರ್ಜಿದಾರರ ಕಂಪನಿ 2007-2009ರ ನಡುವೆ ಒಟ್ಟು 34 ದೋಷಪೂರಿತ ಸಾಧನಗಳನ್ನು ಪೂರೈಕೆ ಮಾಡಿದೆ ಮತ್ತು ಅದಕ್ಕೆ ಸಂಬಂಧಿಸಿದ ಹಣವನ್ನೂ ಸ್ವೀಕರಿಸಿದೆ. ಆನಂತರ ಆ ಸಾಧನಗಳು ದೋಷಪೂರಿತವಾಗಿವೆ ಎಂಬ ಅಂಶ ಕಂಡು ಬಂದಿದೆ. ಹೀಗಾಗಿ, ಡಿಆರ್‌ಡಿಒ ಮತ್ತು ಡಿಎಆರ್‌ಇ ಸಂಸ್ಥೆಗಳು ಮೊದಲಿಗೆ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದವು. ಆನಂತರ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

Surya Sareen Vs CBI.pdf
Preview