ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿಯ ಜೊತೆಗೆ ಬಲವಂತದ ಸಂಭೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪತ್ನಿ ದಾಖಲಿಸಿರುವ ದೂರು ಮತ್ತು ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ತಮಿಳುನಾಡಿನ ದಕ್ಷಿಣ ಮಧುರೈ ಜಿಲ್ಲೆಯ 37 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಯಾವುದೇ ಕಾರಣಕ್ಕೂ ಅತ್ಯಾಚಾರ ಆರೋಪದ ಈ ಪ್ರಕರಣವನ್ನು ರದ್ದುಪಡಿಸಲಾಗದು. ಸಂಭೋಗ ನಡೆದಿಯೊ ಅಥವಾ ಆರೋಪ ಸುಳ್ಳೋ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ಸಾಕ್ಷ್ಯಧಾರ ಪರಿಶೀಲಿಸಿ ನಿರ್ಧರಿಸಲಿ. ಬೇಕಾದರೆ ಅರ್ಜಿದಾರರು ದೋಷಾರೋಪಗಳನ್ನು ಕೈಬಿಡಲು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
“ಪತ್ನಿ ಜೊತೆಗೆ ಬಲವಂತದ ಸಂಭೋಗ ನಡೆಸಿದರೆ ಅದು ಅತ್ಯಾಚಾರ ಎಂದು ಐಪಿಸಿ ಸೆಕ್ಷನ್ 376 (ಬಿ) ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ, ಈ ಪ್ರಕರಣದ ಆರೋಪ–ಪ್ರತ್ಯಾರೋಪಗಳ ವಿಶ್ಲೇಷಣೆಯನ್ನು ವಿಚಾರಣಾ ನ್ಯಾಯಾಲಯಕ್ಕೇ ಬಿಡಲಾಗಿದೆ” ಎಂದು ಪೀಠ ಹೇಳಿದೆ.
“ಆರೋಪಗಳನ್ನು ಕೈಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಕಾಯ್ದಿರಿಸಬೇಕು” ಎಂಬ ಅರ್ಜಿದಾರರ ಮನವಿಯನ್ನು ಮನ್ನಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಅರ್ಜಿದಾರರ ಪರ ವಕೀಲರು, “ತನ್ನ ದೇಹದ ಖಾಸಗಿ ಭಾಗದಲ್ಲಿ ಉಂಟಾದ ನೋವಿಗೆ ಆಸ್ಪತ್ರೆಗೆ ಹೋಗಿ ದಾಖಲಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಅವರು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ದಾಖಲಾಗಿದ್ದಾರೆ. ಅಂತೆಯೇ, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಂಭೋಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ. ಇದು ಅರ್ಜಿದಾರರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿರುವ ಪ್ರಕರಣ” ಎಂದರು.
ವಕೀಲೆಯಾಗಿರುವ ದೂರುದಾರ ಪತ್ನಿಯು “ಘಟನೆ ನಡೆದ ದಿನ ನಾನು ನಸುಕಿನಲ್ಲಿ 4.40ಕ್ಕೆ ಆಸ್ಪತ್ರೆಗೆ ತೆರಳಿದ್ದೆ. ಆ ಸಮಯದಲ್ಲಿ ಹೊರರೋಗಿ ವಿಭಾಗ ತೆರೆದಿರಲಿಲ್ಲ. ಅಲ್ಲಿ ಸ್ತ್ರೀರೋಗ ತಜ್ಞೆಯೂ ಇರಲಿಲ್ಲ. ಹೀಗಾಗಿ, ತಕ್ಷಣವೇ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದೆ. ಆದರೆ, ದಾಖಲೆಗಳ ಫಾರಂನಲ್ಲಿ ಹೊರರೋಗಿ ವಿಭಾಗ ಎಂದೇ ಉಲ್ಲೇಖವಾಗಿದೆ” ಎಂದು ಸಮಜಾಯಿಷಿ ನೀಡಿದರು.
“ಬಲವಂತದ ಸಂಭೋಗ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಘಟನೆ ನಡೆದಾಗ ಪತಿ ಘಟನಾ ಸ್ಥಳದಲ್ಲಿ ಇದ್ದುದು ಪೊಲೀಸರು ಸಂಗ್ರಹಿಸಿರುವ ಸಿಡಿಆರ್‌ನಲ್ಲಿ (ಕರೆ ದಾಖಲೆ ವಿವರ) ದೃಢಪಟ್ಟಿದೆ” ಎಂದೂ ತಿಳಿಸಿದರು.
ಇದನ್ನು ಅಲ್ಲಗಳೆದ ಅರ್ಜಿದಾರರ ಪರ ವಕೀಲರು “ಪತ್ನಿ ಈಗಾಗಲೇ ದಾಖಲಿಸಿರುವ ಕ್ರೌರ್ಯದ ಆರೋಪ ಕುರಿತಾದ ಪ್ರಕರಣದ ಬಗ್ಗೆ ಮಾತುಕತೆ ನಡೆಸಲು ಪತ್ನಿಯೇ ಪತಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ ಮತ್ತು ಆ ವೇಳೆ ಸಂಭೋಗ ನಡೆದೇ ಇಲ್ಲ” ಎಂದು ಪ್ರತಿಪಾದಿಸಿದರು.
2016ರಲ್ಲಿ ಸ್ವಇಚ್ಛೆಯಿಂದ ಮನೆಬಿಟ್ಟು ಹೋಗಿದ್ದೇನೆ ಎಂದು ಪತಿ ಹೇಳುತ್ತಿದ್ದಾರೆ. ಆದರೆ, 2019ರಿಂದ ನಾವಿಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಅತ್ಯಾಚಾರದ ಘಟನೆ 2021ರ ಅಂತ್ಯದಲ್ಲಿ ನಡೆದಿದೆ ಎಂಬುದು ಪತ್ನಿಯ ವಾದ. ಇದೇ ವೇಳೆ ಕ್ರೌರ್ಯದ ಅಪರಾಧ ಮತ್ತು ಜೀವನಾಂಶ ನೀಡಿಕೆ ಕುರಿತಂತೆಯೂ ಪತ್ನಿ ವ್ಯಾಜ್ಯ ನಡೆಸುತ್ತಿದ್ದಾರೆ.