Karnataka High Court 
ಸುದ್ದಿಗಳು

ಯುನೈಟೆಡ್ ಬ್ರೂವೆರೀಸ್‌ನ ₹98 ಕೋಟಿ ಮೌಲ್ಯದ ಮದ್ಯ ವಶ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌‌

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ನಂಜನಗೂಡಿನಲ್ಲಿ ₹98.52 ಕೋಟಿ ಭಾರಿ ಮೊತ್ತದ ಅಕ್ರಮ ಮಧ್ಯ ವಶಪಡಿಸಿಕೊಳ್ಳಲಾಗಿದೆ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು.

Bar & Bench

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ₹98 ಕೋಟಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡು ವ್ಯಾಪ್ತಿಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೂವೆರೀಸ್‌ ಲಿಮಿಟೆಡ್ ವಿರುದ್ಧ ಅಬಕಾರಿ ಇಲಾಖೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.

ಅಬಕಾರಿ ಅಧಿಕಾರಿಗಳು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ ನಂಜನಗೂಡು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಯುನೈಟೆಡ್ ಬ್ರೂವೆರೀಸ್‌ ಲಿಮಿಟೆಡ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ತೀರ್ಪು ಪ್ರಕಟವಾಗುವ ತನಕ ಪ್ರಕರಣಕ್ಕೆ ತಡೆ ಮುಂದುವರಿಯಲಿದೆ. ಆದರೆ, ಅಬಕಾರಿ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಪ್ರಕರಣಕ್ಕೆ ತಡೆ ಇರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದರೆ, ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದಿಸಿದರು.

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ನಂಜನಗೂಡಿನಲ್ಲಿ ₹98.52 ಕೋಟಿ ಭಾರಿ ಮೊತ್ತದ ಅಕ್ರಮ ಮಧ್ಯ ವಶಪಡಿಸಿಕೊಳ್ಳಲಾಗಿದೆ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಈ ಪ್ರಕರಣದಿಂದಾಗಿಯೇ ಅಕ್ರಮ ಮಧ್ಯ ವಶದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿತ್ತು.

ಅರ್ಜಿದಾರರ ಪ್ರಕಾರ, ಅಧಿಕೃತ ಮಾರಾಟ ಪರವಾನಗಿ ಪಡೆದು ಕೇರಳ ರಾಜ್ಯಕ್ಕೆ 17 ವಾಹನಗಳಲ್ಲಿ ಏಳು ಸಾವಿರ ಬೀಯರ್ ಕೇಸ್‌ಗಳನ್ನು 2024ರ ಮಾರ್ಚ್ 30ರಂದು ಸಾಗಿಸಬೇಕಿತ್ತು. ತಾಂತ್ರಿಕ ಹಾಗೂ ಅರಣ್ಯ ಪ್ರದೇಶ ಹಾದು ಹೋಗುವ ಸಮಯದ ಕಾರಣಕ್ಕೆ ಏಳು ವಾಹನಗಳು ವಾಪಸ್ ಬರಬೇಕಾಯಿತು. ಇದರ ಮಾಹಿತಿಯನ್ನು ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳಿಗೆ ನೀಡಲಾಗಿತ್ತು. ಅದಾಗ್ಯೂ, ಏಪ್ರಿಲ್ 1 ಮತ್ತು 2ರಂದು ಕಂಪನಿಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ ಮದ್ಯ ಹಾಗೂ ವಸ್ತುಗಳು ಸೇರಿ ₹98.52 ಕೋಟಿ ಮೊತ್ತದ ಸಾಮಗ್ರಿಗಳನ್ನು ಜಪ್ತಿ ಮಾಡಿತ್ತು. ಇತ್ತ ಎಲ್ಲವೂ ಕಾನೂನು ರೀತಿಯಲ್ಲಿ ನಡೆದಿದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.