ರಾಜ್ಯಸಭಾ ಸದಸ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡದಂತೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ವಿರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರು ವಿರುದ್ಧ ಮಾನಹಾನಿ ಹೇಳಿಕೆ ನೀಡುತ್ತಿರುವ ಮಹೇಶ್ ಶೆಟ್ಟಿ ತಿಮ್ಮರೋಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅಧ್ಯಕ್ಷ ಸೀನಪ್ಪ ಮತ್ತು ನಂದೀಶ್ ಕುಮಾರ್ ಜೈನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.
“ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಸದಸ್ಯರ ವಿರುದ್ಧ ಮಹೇಶ್ ಶೆಟ್ಟಿ ಅವರು ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆಗಳನ್ನು ನೀಡಬಾರದು. ಒಂದೊಮ್ಮೆ ಮಾನಹಾನಿ ಹೇಳಿಕೆ ನೀಡಿ, ಅದರು ಅಪರಾಧ ಎಂದು ತಿಳಿದು ಬಂದರೆ ಪೊಲೀಸರು ಪರಿಶೀಲನೆ ನಡೆಸಿ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬಹುದು. ಇನ್ನೂ ಮಹೇಶ್ ಶೆಟ್ಟಿ ತಿಮರೋಡಿ ಅವರು ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರ ಬಗ್ಗೆ ತಮಗೇನಾದರೂ ದೂರು ಇದ್ದಲ್ಲಿ, ಆ ಬಗ್ಗೆ ಕಾನೂನಿನ ಅಡಿ ಪರಿಹಾರ ಕ್ರಮ ಕಂಡುಕೊಳ್ಳಬಹುದು” ಎಂದು ನ್ಯಾಯಾಲಯ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದ್ದರು. ವಕೀಲ ಎಸ್ ರಾಜಶೇಖರ್ ವಕಾಲತ್ತು ವಹಿಸಿದ್ದರು.