Girish Mattennavar & Karnataka HC 
ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಸಲ್ಲ: ಗಿರೀಶ್‌ ಮಟ್ಟಣ್ಣವರ್‌ ವಿರುದ್ಧ ಹೈಕೋರ್ಟ್‌ ಕಿಡಿ

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬೇಜವಾಬ್ದಾರಿಯುತ ಪ್ರವೃತ್ತಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ಕುರಿತು ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಮಟ್ಟಣ್ಣವರ್‌ಗೆ ತಾಕೀತು ಮಾಡಿದ ನ್ಯಾಯಾಲಯ.

Bar & Bench

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆಗಳಿಗೆ ಮುಕ್ತ ಅವಕಾಶವಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೋ ವಿರುದ್ಧ ಕೆಸರೆರಚಾಟ ನಡೆಸುವುದು ಅಥವಾ ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಸಲ್ಲದು. ಇಂಥ ಕೆಲಸಗಳನ್ನು ತಕ್ಷಣವೇ ನಿಲ್ಲಿಸಿ ಎಂದು ಗಿರೀಶ್ ಮಟ್ಟಣ್ಣವರ್‌ಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna

ಪೀಠವು ಗಿರೀಶ್ ಮಟ್ಟಣ್ಣವರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬೇಜವಾಬ್ದಾರಿಯುತ ಪ್ರವೃತ್ತಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮಟ್ಟಣ್ಣವರ್‌ಗೆ ತಾಕೀತು ಮಾಡಿತು. ಜತೆಗೆ, ಈ ಕುರಿತು ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಮಟ್ಟಣ್ಣವರ್ ಪರ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿ, ಪ್ರಕರಣದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟಾದ ಅಥವಾ ಗಲಭೆ ನಡೆದ ಯಾವುದೇ ನಿರ್ದಿಷ್ಟ ಘಟನೆಯ ಉಲ್ಲೇಖವಿಲ್ಲ. ಕೇವಲ ಸಾರ್ವಜನಿಕ ಅಶಾಂತಿ ಸೃಷ್ಟಿಯಾಗಬಹುದು ಎಂಬ ಊಹೆಯ ಮೇಲೆ ಮೂರನೇ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಹಳೆಯ ಪೋಸ್ಟ್‌ಗಳನ್ನೆಲ್ಲ ಹುಡುಕಿ ತಂದು ಈ ದೂರು ದಾಖಲಿಸಲಾಗಿದೆ. ಈ ಪ್ರಕಣದಲ್ಲಿ ಬಾದಿತ ವ್ಯಕ್ತಿ ದೂರು ದಾಖಲಿಸಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು, ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಚಿತ್ರಗಳನ್ನು ನ್ಯಾಯಾಲಯದ ಗಮನಕ್ಕೆ ತಂದರಲ್ಲದೆ, ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕೇವಲ ಸಂತ್ರಸ್ತರೇ ಆಗಬೇಕಿಲ್ಲ, ಯಾರು ಬೇಕಾದರೂ ದೂರು ನೀಡಬಹುದು ಎಂದು ಪ್ರತಿಪಾದಿಸಿದರು.

ಇದೆಲ್ಲ ನಿಮಗೇಕೆ ಬೇಕು? ಕೋರ್ಟ್ ತರಾಟೆ: ಗಿರೀಶ್ ಮಟ್ಟಣ್ಣವರ್ ಪೋಸ್ಟ್ ಮಾಡಿದ್ದಾರೆನ್ನಲಾದ ಚಿತ್ರವನ್ನು ಗಮನಿಸಿದ ಪೀಠವು ನಿಮಗೆ ಇದೆಲ್ಲ ಏಕೆ ಬೇಕು? ಇದರ ಅಗತ್ಯವೇನಿದೆ? ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ವಿಮರ್ಶೆ ಮಾಡಿ. ಯಾವುದೇ ತೊಂದರೆಯಿಲ್ಲ. ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸಾರವಾಗಿರಬಹುದು. ಆದರೆ ಇಂತಹ ನಡೆ ಪ್ರಜಾಪ್ರಭುತ್ವದ ಸಾರವಲ್ಲ, ಇದು ಸರಿಯಲ್ಲ ಎಂದು ಹೇಳಿತು.

ಈ ವೇಳೆ ಮಟ್ಟಣ್ಣವರ್ ಪರ ವಕೀಲರು, ಫೋಟೋಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಮಗೆ ತಿಳಿದಿಲ್ಲ, ಕಕ್ಷಿದಾರರು ನಿಮಗೆ ಎಲ್ಲವನ್ನೂ ಹೇಳುವುದಿಲ್ಲ. ಇದೆಲ್ಲ ಏಕೆ ಬೇಕು? ಆರೋಗ್ಯಕರ ವಿಮರ್ಶೆ ಸ್ವಾಗತಾರ್ಹ, ಯಾರೂ ನಿಮ್ಮ ಹಾದಿಗೆ ಅಡ್ಡ ಬರುವುದಿಲ್ಲ. ಆದರೆ, ನಿಂದನೆ ಮಾಡುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ? ಇದರಿಂದ ನಿಮಗೇನು ಸಿಗುತ್ತದೆ? ಯಾರ ಮೇಲಾದರೂ ಕೆಸರರಚಾಟ ಮಾಡುವುದು ಅಥವಾ ಸಾರ್ವಜನಿಕವಾಗಿ ಅವಹೇಳನ ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಎಸ್‌ಪಿ‌ಪಿ ಜಗದೀಶ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಪೋಸ್ಟ್‌ಗಳು ಸಾಮಾನ್ಯ ಜನರನ್ನು ತಲುಪುತ್ತವೆ. ಇದು ಸಮಾಜದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಪೀಠವು, ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಸಾಮಾಜಿಕ ಜಾಲತಾಣದ ಖಾತೆಗಳಿಗೆ. ಅವು ಕಾಲ ದೂಡುವ (ಟೈಂ ಪಾಸ್) ವೇದಿಕೆಯಾಗಿದೆ. ಅದನ್ನು ತಪ್ಪು ಎನ್ನುವುದಿಲ್ಲ. ಆದರೆ, ಅವುಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ ಪ್ರಮಾಣ ಎಷ್ಟು? ಎಂದು ಕಳವಳ ವ್ಯಕ್ತಪಡಿಸಿದರು.

ಹಾಲಿ ಪ್ರಕರಣದಲ್ಲಿ ಘಟನೆ ನಂತರ ಯಾವುದೇ ಯಾವುದೇ ಪರಿಣಾಮಗಳು ಎದುರಾಗಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠವು, ಬಿಎನ್‌ಎಸ್ ಸೆಕ್ಷನ್ 353(2) ಅಥವಾ ಐಪಿಸಿ ಸೆಕ್ಷನ್ 505(2) ಅಡಿಯಲ್ಲಿ ಕೇವಲ ಘಟನೆಯ ನಂತರದ ಪರಿಣಾಮಗಳು ಮುಖ್ಯವಾಗುವುದಿಲ್ಲ. ಸಾರ್ವಜನಿಕರಲ್ಲಿ ಅಶಾಂತಿ/ಗಲಭೆ ಸೃಷ್ಟಿಸುವ ಪ್ರವೃತ್ತಿ ಅಥವಾ ಸಂಭವನೀಯತೆ ಇದ್ದರೂ ಅಪರಾಧದ ವ್ಯಾಪ್ತಿಗೆ ಬರಲು ಸಾಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಹಿನ್ನೆಲೆ: ಧರ್ಮಸ್ಥಳ ಗ್ರಾಮದ ಜಿ ಸುಬ್ರಹ್ಮಣ್ಯ ಪ್ರಸಾದ್ ಎಂಬುವರು 2026ರ ಏಪ್ರಿಲ್ 14ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನಲ್ಲಿ ಗಿರೀಶ್ ಲೋಕನಾಥ್ ಮಟ್ಟಣ್ಣನವರ್ ಎಂಬಾತ ಸಾಮಾಜಿಕ ಮಾಧ್ಯಮದ (ಇನ್‌ಸ್ಟಾಗ್ರಾಮ್) ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ಮಾನಹಾನಿಕರ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸಿದ್ದಾರೆ. ಈ ಪೋಸ್ಟ್‌ಗಳಲ್ಲಿ ಯಾವುದೇ ಸತ್ಯಾಧಾರವಿಲ್ಲದೆ ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಇದರಿಂದ ಹೆಗಡೆ ವ್ಯಕ್ತಿತ್ವ, ಗೌರವ ಮತ್ತು ಸಮಾಜದಲ್ಲಿ ಅವರಿಗಿರುವ ಉನ್ನತ ಸ್ಥಾನಮಾನಕ್ಕೆ ಹಾನಿ ಉಂಟಾಗಿದೆ ಎಂದು ಆರೋಪಿಸಿದ್ದರು.

ಗಿರೀಶ್ ಮಟ್ಟಣ್ಣನವರ್ ಹಾಕಿರುವ ಈ ಪೋಸ್ಟ್‌ಗಳು ಸುಳ್ಳು ಮಾಹಿತಿ ಮತ್ತು ಗಾಳಿ ಸುದ್ದಿಯನ್ನು ಸೃಷ್ಟಿಸುವಂತದ್ದಾಗಿದ್ದು, ವೀರೇಂದ್ರ ಹೆಗ್ಗಡೆ ಅವರ ಪರ ಹಾಗೂ ವಿರೋಧ ಇರುವ ಜನರ ಮಧ್ಯೆ ಅಪಾಯದ ಭೀತಿಯನ್ನು ಹುಟ್ಟಿಸುವ ಮೂಲಕ ಸಮಾಜದಲ್ಲಿ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ಉದ್ದೇಶ ಹೊಂದಿವೆ. ಆದ್ದರಿಂದ, ಗಿರೀಶ್ ಮಟ್ಟಣ್ಣವರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. ದೂರು ಆಧರಿಸಿ ಗಿರೀಶ್ ಮಟ್ಟಣ್ಣವರ್ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 353(2) ಅಡಿಯಲ್ಲಿ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡುವುದು) ಎಫ್‌ಐಆರ್ ದಾಖಲಿಸಿದ್ದಾರೆ.