Justice Suraj Govindraj 
ಸುದ್ದಿಗಳು

ನೂತನ ಒಳಮೀಸಲಾತಿ ವರ್ಗೀಕರಣದ ಅನುಸಾರ ನೇಮಕಾತಿ: ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌

ಕರ್ನಾಟಕದ ಅಸ್ಪೃಶ್ಯ ಅಲೆಮಾರಿಗಳ ಒಕ್ಕೂಟ ಮತ್ತು ಇತರರು ಉಪ ಜಾತಿ ವರ್ಗೀಕರಣವು ಸ್ವೇಚ್ಛೆಯಿಂದ ಕೂಡಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

Bar & Bench

ಪರಿಶಿಷ್ಟ ಜಾತಿಗಳಿಗೆ 6:6:5ರ ಅನುಪಾತದಲ್ಲಿ ಮೀಸಲಾತಿ ನಿಗದಿಪಡಿಸಿ 2025ರ ಆಗಸ್ಟ್‌ 25ರಂದು ಸರ್ಕಾರವು ಹೊರಡಿಸಿರುವ ಆದೇಶದ ಅನ್ವಯ ಯಾವುದೇ ನೇಮಕಾತಿ ನಡೆಸದಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ರಾಜ್ಯ ಸರ್ಕಾರವನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಿದೆ.

ಕರ್ನಾಟಕದ ಅಸ್ಪೃಶ್ಯ ಅಲೆಮಾರಿಗಳ ಒಕ್ಕೂಟ ಮತ್ತು ಇತರರು ಉಪ ಜಾತಿ ವರ್ಗೀಕರಣವು ಸ್ವೇಚ್ಛೆಯಿಂದ ಕೂಡಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

“ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ಆದರೆ, ಸರ್ಕಾರದ ಆದೇಶದ ಅನ್ವಯ ಪ್ರತಿವಾದಿಗಳು ಯಾವುದೇ ನೇಮಕಾತಿ ಮಾಡುವಂತಿಲ್ಲ. ನವೆಂಬರ್‌ 5ರ ಒಳಗೆ ಸಮಾಜ ಕಲ್ಯಾಣ ಇಲಾಖೆಯು ಆಕ್ಷೇಪಣೆ ಸಲ್ಲಿಸಬೇಕು” ಎಂದಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನವೆಂಬರ್‌ 13ಕ್ಕೆ ಮುಂದೂಡಿದೆ.

“ಇಂತಹ ಅತಾರ್ಕಿಕ ವಿಭಜನೆಯು ಕರ್ನಾಟಕದ ಪರಿಶಿಷ್ಟ ಜಾತಿಗಳಲ್ಲಿ ಪ್ರತಿಕೂಲ ತಾರತಮ್ಯಕ್ಕೆ ಕಾರಣವಾಗುತ್ತದೆ. ಇದು ಸಂವಿಧಾನದ 14, 15(4) ಮತ್ತು 16ನೇ ವಿಧಿಯಡಿ ಸಮಾನತೆಯ ತತ್ವದ ಉಲ್ಲಂಘನೆಯಾಗಲಿದೆ. ಆದೇಶದಲ್ಲಿ ಉಪವರ್ಗೀಕರಣವನ್ನು ಸ್ವೇಚ್ಛೆಯಿಂದ ಮಾಡಲಾಗಿದೆ. ರೋಸ್ಟರ್‌ ಅಂಶಗಳನ್ನು ಪರಿಷ್ಕರಿಸಿ, ರಾಜ್ಯ ನಾಗರಿಕ ಸೇವೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಎಲ್ಲಾ ಇಲಾಖೆ ಮತ್ತು ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ” ಎಂದು ಅರ್ಜಿದಾರರು ವಾದಿಸಿದ್ದಾರೆ.

“ಅರ್ಜಿದಾರರು ಅತ್ಯಂತ ಅಸ್ಪೃಶ್ಯ ಜಾತಿಗೆ ಸೇರಿರುವುದಾಗಿ ಹೇಳಿಕೊಂಡಿದ್ದು, ತಾವು ಅತ್ಯಂತ ಹಿಂದುಳಿದವರು ಎಂದು ಹೇಳಿಕೊಂಡಿದ್ದಾರೆ. ತಮಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಆದೇಶದಲ್ಲಿ ವರ್ಗೀಕರಿಸಲಾಗಿರುವ ಎ ಮತ್ತು ಬಿ ಗುಂಪಿನಲ್ಲಿರುವ ಮುಂದುವರಿದಿರುವ ಜಾತಿಗಳಿಗಿಂತಲೂ ತಮ್ಮನ್ನು ಕೆಳಗೆ ಇಡಲಾಗಿದೆ. ಯಾವುದೇ ರೀತಿಯಲ್ಲಿಯೂ ಅಸ್ಪೃಶ್ಯ ಜಾತಿಗಳು ಸಿ ಗುಂಪಿನಲ್ಲಿರುವ ಜಾತಿಗಳ ಜೊತೆ ಸಾಮರಸ್ಯ ಹೊಂದಿಲ್ಲ” ಎಂದು ಅರ್ಜಿದಾರರು ವಾದಿಸಿದ್ದಾರೆ.

“ಸಾಕಷ್ಟು ಸಾಮಾಜಿಕ ತಾರತಮ್ಯವಿದ್ದರೂ ಅತೀ ಹಿಂದುಳಿದ ಸಮುದಾಯಗಳು ಮತ್ತು ಅತಿ ಕಡಿಮೆ ಹಿಂದುಳಿದ ಜಾತಿಗಳನ್ನು ಸಿ ಗುಂಪಿನಲ್ಲಿ ಸೇರ್ಪಡೆ ಮಾಡಲಾಗಿದೆ. ಅಸಮಾನರಾಗಿರುವವರನ್ನು ಒಂದೇ ರೀತಿಯ ಮಾನದಂಡಗಳಿಂದ ನಡೆಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಸರ್ಕಾರವು ವಾಸ್ತವಿಕವಾಗಿ ಅಸಮಾನವಾಗಿರುವ ಸಮುದಾಯಗಳನ್ನು ಆದ್ಯತೆಯ ಮೀಸಲಾತಿ ನೀಡುವ ಮೂಲಕ ಸರಿದೂಗಿಸುವ ಕ್ರಮಕ್ಕೆ ಮುಂದಾಗಬೇಕು. ಆದರೆ, ಸದ್ಯ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿಯು ಮುಂದುವರಿದ ಜಾತಿಗಳು ಮೀಸಲಾತಿಯ ಲಾಭ ಪಡೆಯುವಂತೆ ಮಾಡಲಾಗಿದೆ. ಹೀಗಾಗಿ, ಇದು ಸಮಾನ ತತ್ವ ನೀತಿಗೆ ವಿರೋಧಿಯಾಗಿದೆ. ರಾಜ್ಯವು ವಿಭಿನ್ನತೆಗೆ ತರ್ಕಬದ್ಧ ತತ್ವವನ್ನು ಅನುಸರಿಸಿಲ್ಲ” ಎಂದು ಆಕ್ಷೇಪಿಸಲಾಗಿದೆ.