Karnataka High Court and PM Modi 
ಸುದ್ದಿಗಳು

ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಮೋದಿ ಪರ ಮತಯಾಚನೆ ಆರೋಪ: ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

“ನೀತಿ ಸಂಹಿತೆಗಿಂತ ಮೊದಲು ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಹೀಗಾಗಿ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Bar & Bench

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಪರ ಮತ ಕೇಳಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಿವಪ್ರಸಾದ್‌ ಎಂಬುವರ ವಿರುದ್ದ ಚುನಾವಣಾಧಿಕಾರಿ ಹೂಡಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶಿವಪ್ರಸಾದ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ನೀತಿ ಸಂಹಿತೆಗಿಂತ ಮೊದಲು ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಹೀಗಾಗಿ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.

"ಅರ್ಜಿದಾರರು ವಿಚಿತ್ರ ಅಪರಾಧದ ಆರೋಪ ಎದುರಿಸುತ್ತಿದ್ದಾರೆ. ಶಿವಪ್ರಸಾದ್‌ ಅವರು ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ʼಮದುವೆಯಲ್ಲಿ ನೀವು ನನಗೆ ನೀಡುವ ಉಡುಗೊರೆ ನರೇಂದ್ರ ಮೋದಿಗೆ ಮತ ಹಾಕುವುದಾಗಿದೆʼ ಎಂದು ಮುದ್ರಿಸಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 127ಎ ಅಡಿ ಅಪರಾಧವನ್ನಾಗಿ ಪರಿಗಣಿಸಿ ದೂರು ದಾಖಲಾಗಿದೆ. ಅರ್ಜಿದಾರರ ಪರ ವಕೀಲರು ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚೆಯೇ ಅರ್ಜಿದಾರರು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಹೀಗಾಗಿ ಅದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ 127ಎ ಅಡಿ ಅಪರಾಧವಾಗುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಇದನ್ನು ಮಾಡಬಾರದು. ಚುನಾವಣೆಗೂ ಮುನ್ನ ಮಾಡಿದರೆ ಅದು ಅಪರಾಧವಲ್ಲ ಎಂದಿದ್ದಾರೆ" ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರರ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು “ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್‌ ನೀಡಿದಂತೆ” ಎಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ ಮಾಡಿಸಿದ್ದರು. ಮಾರ್ಚ್‌ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಆದರೂ ಸಹ ಅರ್ಜಿದಾರರ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಪ್ರಕರಣ ಹೂಡಿದ್ದು, ಅದು ನಿಯಮಬಾಹಿರ. ಅದನ್ನು ರದ್ದುಗೊಳಿಸಬೇಕು” ಎಂದು ನ್ಯಾಯಾಲಯವನ್ನು ಕೋರಿದರು.

2024ರ ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್‌ ಸ್ಕ್ವಾಡ್‌ ಕೆ ಎನ್‌ ಸಂದೇಶ್‌ ಅವರು ಶಿವಪ್ರಸಾದ್‌ ವಿರುದ್ಧ ಪ್ರಜಾ ಪ್ರತಿನಿಧಿಗಳ ಕಾಯಿದೆ 127ಎ ಅನ್ವಯ ಪ್ರಕರಣ ಹೂಡಿದ್ದರು.