High Court of Karnataka 
ಸುದ್ದಿಗಳು

ಕೊಡಗಿನ ರೆಸಾರ್ಟ್‌ ಮಾಲೀಕರ ವಿರುದ್ಧ ಅತಿಥಿಯೊಬ್ಬರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಪ್ರಕರಣ ಮುಂದುವರಿಸಲು ಅನುಮತಿ ನೀಡಿದರೆ, ಅದು ರೆಸಾರ್ಟ್‌ಗೆ ಬರುವ ಪ್ರತಿಯೊಬ್ಬ ಅತಿಥಿಯನ್ನು ಅವರು ಯಾವ ಜಾತಿಗೆ ಸೇರಿದವರು ಎಂದು ಕೇಳಿದಂತಾಗುತ್ತದೆ” ಎಂದಿರುವ ನ್ಯಾಯಾಲಯ.

Bar & Bench

ಕೊಡಗಿನ‌ ಮಡಿಕೇರಿಯ ರೆಸಾರ್ಟ್‌ವೊಂದರಲ್ಲಿ ವಾಗ್ವಾದ ನಡೆಸಿದ ಸರ್ವೀಸ್ ಹುಡುಗ ವಿರುದ್ಧ ಕ್ರಮ ಜರುಗಿಸದಕ್ಕೆ ರೆಸಾರ್ಟ್ ಮಾಲೀಕರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಅತಿಥಿ‌ ಮಹಿಳೆ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಮುಂದಿ‌ನ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆ ನೀಡಿದೆ.

ಮಡಿಕೇರಿಯ ನಪೋಕ್ಲು ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮಡಿಕೇರಿಯ ಸ್ಕೈ ಲಾಕ್ ರೆಸಾರ್ಟ್ ಮಾಲೀಕರರಾದ ಎ ಕೆ ‌ಮುತ್ತಪ್ಪ, ಅವರ ಪತ್ನಿ ಕೆ ಸಿ ರೀಟಾ ಹಾಗೂ ಪುತ್ರಿ ಎ ಎಂ ಮೋನಿಷಾ ಮತ್ತು ವ್ಯವಸ್ಥಾಪಕರಾದ ಎನ್ ಪಿ ನಿಕ್ಕಿನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರೆಸಾರ್ಟ್‌ನ ಸರ್ವೀಸ್ ಬಾಯ್ ವಿರುದ್ದ ಕ್ರಮ ಜರುಗಿಸಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದೂ ಯಾವ ಅಪರಾಧ ಎಂಬುದುನ್ನು ನೋಡಿದರೆ ಆಘಾತ ಮೂಡಿದೆ. ಅದೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.‌ ಒಂದೊಮ್ಮೆ, ಈ ಪ್ರಕರಣ ಮುಂದುವರಿಸಲು ಅನುಮತಿ ನೀಡಿದರೆ, ಅದು ರೆಸಾರ್ಟ್‌ಗೆ ಬರುವ ಪ್ರತಿಯೊಬ್ಬ ಅತಿಥಿಯನ್ನು ಅವರು ಯಾವ ಜಾತಿಗೆ ಸೇರಿದವರು ಎಂದು ಕೇಳಿದಂತಾಗುತ್ತದೆ ಎಂದು ಆಘಾತ ವ್ಯಕ್ತಪಡಿಸಿದೆ.

ಅಲ್ಲದೆ, ಮೇಲಾಗಿ ಅರ್ಜಿದಾರರಿಗೆ ದೂರುದಾರ ಮಹಿಳೆ ಅವರು ಯಾವ ಜಾತಿ ಎಂಬುದು ತಿಳಿದಿಲ್ಲ. ಹೀಗಾಗಿ, ದೂರುದಾರೆಗೆ ಅವರ ಹೆಸರು ತೆಗೆದು ನಿಂದನೆ ಮಾಡಿರಲು ಅಥವಾ ತೊಂದರೆ ನೀಡಿರಲು ಸಾಧ್ಯವಿಲ್ಲ. ಮತ್ತೊಂದೆಡೆ ಸರ್ವೀಸ್ ಬಾಯ್ ವಿರುದ್ಧ ದೂರು ದಾಖಲಾಗಿದೆ. ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಆದ್ದರಿಂದ‌, ಅರ್ಜಿದಾರರ ವಿರುದ್ಧದ ದೂರಿಗೆ ಸಂಬಂಧಿಸಿದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಅರ್ಜಿ ಇತ್ಯರ್ಥವಾಗುವವರೆಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ಆದೇಶ ಮಾಡಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ರೆಸಾರ್ಟ್‌ ಮಾಲೀಕರು ಹಾಗೂ ವ್ಯವಸ್ಥಾಪಕರಾಗಿದ್ದಾರೆ. ದೂರುದಾರೆಯು ರೆಸಾರ್ಟ್‌ಗೆ ಬಂದಿದ್ದ ಅತಿಥಿಯಾಗಿದ್ದರು‌.‌ ಸರ್ವೀಸ್ ಬಾಯ್ ಹುಡುಗನ ತನ್ನೊಂದಿಗೆ ಮಾಡಿದ ವಾಗ್ವಾದ ನಡೆಸಿದ ಬಗ್ಗೆ ತಿಳಿಸಿದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ರೆಸಾರ್ಟ್ ಮಾಲೀಕರ ಕುರಿತು ದೂರುದಾರೆ ಆರೋಪಿಸಿದ್ದಾರೆ. ಪ್ರೀಮಿಯರ್ ರೂಂ ನೀಡಲಾಗುವುದು. ಊಟದ ಬಿಲ್ ಮನ್ನಾ ಮಾಡುವುದಾಗಿಯ ದೂರುದಾರೆಗೆ ಅರ್ಜಿದಾರರು ಹೇಳಿದ್ದರು. ಆದರೆ, ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಡಿ ಸರ್ವೀಸ್ ಬಾಯ್ ಹಾಗೂ ರೆಸಾರ್ಟ್ ಮಾಲೀಕರ ಮೇಲೆ ಅತಿಥಿ ದೂರು ದಾಖಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ಆಗ ಪೀಠವು ಅತಿಥಿಯಾಗಿ ಬಂದಿರುವ ಮಹಿಳೆಯ ಜಾತಿ ಯಾವುದು ಎಂದು ರೆಸಾರ್ಟ್ ಮಾಲೀಕರಿಗೆ ಹೇಗೆ ಗೊತ್ತಾಗಲು ಸಾಧ್ಯ? ಎಂದು ಪ್ರಶ್ನಿಸಿತು.

ಹಾಗೆಯೇ, ಇದುವೆ ಕಾಯಿದೆಯ ದುರುಪಯೋಗ ಎನ್ನುವುದು ಎಂದು ಪೊಲೀಸರ ಪರ ಹಾಜರಾಗಿದ್ದ ಸರ್ಕಾರಿ ಅಭಿಯೋಜನಕರನ್ನು ಉದ್ದೇಶಿಸಿ ಹೇಳಿ ಮೇಲಿನಂತೆ ಆದೇಶ ಮಾಡಿತು.

ಬೆಂಗಳೂರಿನ ನಾಗರಭಾವಿ ಮುಖ್ತರಸ್ತೆಯ ಕಾವೇರಿ ಬಡಾವಣೆ ನಿವಾಸಿಯಾದ ಬಿ ಕೆ ಶ್ರುತಿ ಎಂಬಾಕೆ 2026 ಜೂನ್ 24ರಂದು ನೀಡಿದ ದೂರು ಆಧರಿಸಿ ಮಡಿಕೇರಿಯ ನಪೋಕ್ಲು‌ ಠಾಣಾ‌ ಪೋಲೀಸರು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯಿದೆ ಅಡಿ ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.