Punith Kerehalli 
ಸುದ್ದಿಗಳು

ಪುನೀತ್‌ ಕೆರೆಹಳ್ಳಿ ವಿರುದ್ಧದ ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಪುನೀತ್, ಗೋಪಿ ಗೌಡ ನನ್ನ ಜಾತಿಯ ಹೆಸರು ತೆಗೆದು ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದರು. ಜೊತೆಗೆ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದರು” ಎಂದು ದಲಿತ ಮುಖಂಡ ನಾಗರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.

Bar & Bench

ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ಸಂಬಂಧ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಆತನ ಬೆಂಬಲಿಗ ಗೋಪಿ ಗೌಡ ವಿರುದ್ಧ ಕೋಲಾರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐರ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.

ತಮ್ಮ ವಿರುದ್ಧದ ಎಫ್ಐಆರ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪುನೀತ್ ಕೆರೆಹಳ್ಳಿ ಮತ್ತು ಗೋಪಿಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೋಲಾರ ಜಿಲ್ಲೆಯ ಮಾಸ್ತಿ ಠಾಣಾ‌‌ ಪೊಲೀಸರು ಮತ್ತು ಪ್ರಕರಣದ‌ ದೂರುದಾರ ಎಂ ವಿ ನಾಗರಾಜ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ದಲಿತ ಮುಖಂಡ ಎಂ ವಿ ನಾಗರಾಜ್ ಮೇ 15ರಂದು ಮಾಸ್ತಿ ಠಾಣಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇ 15ರಂದು ಬೆಳಗ್ಗೆ 8 ಗಂಟೆಗೆ ನಾನು ಎಸ್ಎಸ್ಆರ್ ಲೇಔಟ್‌ನಲ್ಲಿ ವಾಕಿಂಗ್ ಮಾಡುತ್ತಿದ್ದು, ಸಮೀಪದಲ್ಲಿರುವ ಖಾನ್ ಎಂಬುವವರ ಮಾಂಸದ ಅಂಗಡಿಗೆ ಗುಂಪುಕಟ್ಟಿಕೊಂಡು ಬಂದ ಪುನೀತ್, ಗೋಪಿಗೌಡ ಮತ್ತಿತರರು ಖಾನ್‌ಗೆ ಬೈದು ತೊಂದರೆ ಕೊಡುತ್ತಿದ್ದರು.

ಆಗ ನಾನು ಅವರಲ್ಲಿಗೆ ಹೋಗಿ ಪ್ರಶ್ನಿಸಿದಾಗ, “ನೀನು ಯಾರು” ಎಂದು ನನಗೆ ಪುನೀತ್ ಕೇಳಿದರು. ಅದಕ್ಕೆ “ನಾನು ನಾಗರಾಜ್, ದಲಿತ ಸಂಘಟನೆಯ ಮುಖಂಡ” ಎಂದು ಹೇಳಿದೆ. ಆಗ ಪುನೀತ್ , ಗೋಪಿ ಗೌಡ ನನ್ನ ಜಾತಿಯ ಹೆಸರು ತೆಗೆದು ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದರು. ಜೊತೆಗೆ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದರು ಎಂದು ನಾಗರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಸ್ತಿ ಠಾಣಾ ಪೋಲೀಸರು  ಹಲ್ಲೆ, ಅಕ್ರಮ ಕೂಟ, ಗಲಭೆ,  ಜನರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿ ಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸಿದ, ಪರಿಶಿಷ್ಟ ಜಾತಿಗಳ ಮತ್ತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಜಾತಿ ನಿಂದೆ ಆರೋಪ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಕೋಲಾರ ಜಿಲ್ಲೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.