Lawyers 
ಸುದ್ದಿಗಳು

ಕಾನೂನು ಪ್ರಾಧ್ಯಾಪಕರಿಗೆ ನಿಂದನೆ: ವಕೀಲರೊಬ್ಬರ ವಿರುದ್ಧದ ಶಿಸ್ತು ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಕರ್ನಾಟಕ ವಕೀಲ ಪರಿಷತ್‌ಗೆ 2024ರ ಜುಲೈ 24ರಂದು ಕೋಲ್ಕತ್ತಾದ ರಾಷ್ಟ್ರೀಯ ನ್ಯಾಯಿಕ ವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಯುಜೆಎಸ್‌) ಕಾನೂನು ಪ್ರಾಧ್ಯಾಪಕ ಎನ್‌ ಎಸ್‌ ಶ್ರೀನಿವಾಸಲು ದೂರು ನೀಡಿದ್ದರು.

Bar & Bench

ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ರಾಷ್ಟ್ರೀಯ ನ್ಯಾಯಿಕ ವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಯುಜೆಎಸ್‌) ಕಾನೂನು ಪ್ರಾಧ್ಯಾಪಕ ಎನ್‌ ಎಸ್‌ ಶ್ರೀನಿವಾಸಲು ಅವರನ್ನು ಕತ್ತೆ ಮತ್ತು ಕೋತಿ ಎಂದು ನಿಂದಿಸಿದ ಆರೋಪ ಸಂಬಂಧ ಬೆಂಗಳೂರಿನ ವಕೀಲ ಪ್ರಮೋದ್‌ ಕುಲಕರ್ಣಿ ಅವರ ವಿರುದ್ಧ ಕರ್ನಾಟಕ ವಕೀಲ ಪರಿಷತ್‌ ನಡೆಸುತ್ತಿರುವ ಶಿಸ್ತು ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಶಿಸ್ತು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿ ವಕೀಲ ಪ್ರಮೋದ್‌ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ನಡೆಸಿತು.

ವಕೀಲ ಪ್ರಮೋದ್‌ ಕುಲಕರ್ಣಿ ತಮ್ಮನ್ನು ಕತ್ತೆ ಮತ್ತು ಕೋತಿ ಎಂದು ನಿಂದಿಸಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಕೋರಿ ಕರ್ನಾಟಕ ವಕೀಲ ಪರಿಷತ್‌ಗೆ 2024ರ ಜುಲೈ 24ರಂದು ಕೋಲ್ಕತ್ತದ ನ್ಯಾಷನಲ್‌ ಯೂನಿರ್ಸಿಟಿ ಆಫ್‌ ಜ್ಯೂಡಿಷಿಯಲ್‌ ಸೈನ್ಸ್‌ನ ಕಾನೂನು ಪ್ರಾಧ್ಯಾಪಕ ಎನ್‌ ಎಸ್‌ ಶ್ರೀನಿವಾಸಲು ದೂರು ನೀಡಿದ್ದರು. ಆ ದೂರು ಪರಿಗಣಿಸಿದ್ದ ಪರಿಷತ್ತಿನ ಶಿಸ್ತು ಸಮಿತಿ, ವಿಚಾರಣೆಗೆ ಹಾಜರಾಗಲು ಸೂಚಿಸಿ ವಕೀಲ ಪ್ರಮೋದ್‌ ಕುಲಕರ್ಣಿಗೆ 2025ರ ಜನವರಿ 30ರಂದು ನೋಟಿಸ್‌ ನೀಡಿತ್ತು. ಇದರಿಂದ ತಮ್ಮ ವಿರುದ್ಧದ ನೋಟಿಸ್‌ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.