Darshan and Karnataka HC 
ಸುದ್ದಿಗಳು

ನಟ ದರ್ಶನ್‌ ಪಿಸ್ತೂಲ್‌ ಪರವಾನಗಿ ಅಮಾನತು ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌

ಅರ್ಜಿದಾರರು ಜಾಮೀನಿನ ಮೇಲೆ ಹೊರಗಿದ್ದಾಗ ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ಯಾರನ್ನೂ ಬೆದರಿಸಿಲ್ಲ. 2008ರಲ್ಲಿ ಅರ್ಜಿದಾರರಿಗೆ ಪರವಾನಗಿ ನೀಡಲಾಗಿದ್ದು, ಈವರೆಗೂ ಯಾವುದೇ ಷರತ್ತುಗಳನ್ನು ಅವರು ಉಲ್ಲಂಘಿಸಿಲ್ಲ ಎಂದ ದರ್ಶನ್‌ ಪರ ವಕೀಲರು.

Bar & Bench

ನಟ ದರ್ಶನ್ ಅವರ ಪಿಸ್ತೂಲ್‌ ಪರವಾನಗಿಯನ್ನು ಅಮಾನತುಗೊಳಿಸಿ ಬೆಂಗಳೂರು ಉಪ ಪೊಲೀಸ್ ಆಯುಕ್ತರು (ಆಡಳಿತ) ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಉಪ ಪೊಲೀಸ್ ಆಯುಕ್ತರು 2025ರ ಜನವರಿ 20ರಂದು ಹೊರಡಿಸಿರುವ ಆದೇಶ ರದ್ದು ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ಆರೋಪ ಮಾಡಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅರ್ಜಿದಾರರು ತಮ್ಮ ಬಳಿ ಇರುವ 2008ರಲ್ಲಿ ಪರವಾನಗಿ ಪಡೆದಿರುವ ಶಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪರವಾನಗಿ ಅಮಾನತುಪಡಿಸಲಾಗಿದೆ. ಸದ್ಯ ಅರ್ಜಿದಾರರ ಜಾಮೀನು ರದ್ದಾಗಿದ್ದು, ಮತ್ತೆ ಕಾರಾಗೃಹಕ್ಕೆ ಮರಳಿದ್ದಾರೆ. ಅರ್ಜಿದಾರರು ತಮ್ಮ ಬಳಿ ಇದ್ದ ಶಸ್ತ್ರವನ್ನು ಈಗಾಗಲೇ ಹಸ್ತಾಂತರಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅರ್ಜಿದಾರರ ಶಸ್ತ್ರ ಪರವಾನಗಿ ಅಮಾನತುಪಡಿಸಿರುವ ಆದೇಶದ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತು.

ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಹಾಗೂ ಉಪ ಪೊಲೀಸ್ ಆಯುಕ್ತರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ದರ್ಶನ್ ಪರ ವಕೀಲ ಎಸ್ ಸುನಿಲ್ ಕುಮಾರ್ ಅವರು “ಅರ್ಜಿದಾರರು ಜಾಮೀನಿನ ಮೇಲೆ ಹೊರಗಿದ್ದಾಗ ಈ ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ಯಾರನ್ನೂ ಬೆದರಿಸಿಲ್ಲ. 2008ರಲ್ಲಿ ಅರ್ಜಿದಾರರಿಗೆ ಪಿಸ್ತೂಲ್‌ ಪರವಾನಗಿ ನೀಡಲಾಗಿದ್ದು, ಅಲ್ಲಿಂದ ಈವರೆಗೂ ಯಾವುದೇ ಷರತ್ತುಗಳನ್ನು ಅವರು ಉಲ್ಲಂಘಿಸಿಲ್ಲ. ಜಾಮೀನಿನ ಮೇಲೆ‌ ಹೊರಗಿದ್ದ ಸಂದರ್ಭದಲ್ಲಿ ಸಾಕ್ಷಿಗಳನ್ನು ಬೆದರಿಸಬಹುದು ಎಂಬ ಊಹೆಯ ಮೇಲೆ ಪರವಾನಗಿ ಅಮಾನತುಪಡಿಸಲಾಗಿದೆ” ಎಂದರು‌.

ಸರ್ಕಾರದ ಪರ ವಕೀಲರು, ಶಸ್ತ್ರಾಸ್ತ್ರ ಕಾಯಿದೆ ಅಡಿ ಈ ಕ್ರಮ ಕೈಗೊಳ್ಳಲಾಗಿದ್ದು, ನಮ್ಮ ವಶದಲ್ಲಿರುವ ದರ್ಶನ್ ಅವರ ಶಸ್ತ್ರವನ್ನು ಸುರಕ್ಷಿತವಾಗಿಡಬೇಕಿದೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಒಂದು ವೇಳೆ ಪರವಾನಗಿ ಇಲ್ಲದ ಶಸ್ತ್ರಾಸ್ತ್ರವಾಗಿದ್ದರೆ ಖಂಡಿತವಾಗಿಯೂ ಅರ್ಜಿ ವಜಾಗೊಳಿಸಲಾಗುತ್ತಿತ್ತು. ಆದರೆ, ಅವರ ಬಳಿ ಪರವಾನಗಿ ಇರುವ ಪಿಸ್ತೂಲು ಇದೆ, ಅವರು ಜಾಮೀನಿನ ಮೇಲೆ ಹೊರಗಿದ್ದಾಗ ಏನಾದರೂ ಮಾಡಬಹುದು ಎಂಬುದು ನಿಮ್ಮ ಆತಂಕ ಅಲ್ಲವೇ? ಆದರೆ, ಈಗಾಗಲೇ ಅವರ ಜಾಮೀನು ರದ್ದಾಗಿದೆ" ಎಂದು ಹೇಳಿತು. ಅರ್ಜಿದಾರರ ಪರ ವಕೀಲರು, ದರ್ಶನ್ ಈಗಾಗಲೇ ಶಸ್ತ್ರಾಸ್ತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದರು.

ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು. ದರ್ಶನ್ ಪರ ವಕೀಲರು, ಅರ್ಜಿಯನ್ನು ಇಂದೇ ಇತ್ಯರ್ಥಪಡಿಸಬಹುದು ಎಂದರು. ಈ ಬಗ್ಗೆ ಮಾಹಿತಿ ಪಡೆದು ತಿಳಿಸುವುದಾಗಿ ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಕುಟುಂಬ ಮತ್ತು ನನ್ನ ಸುರಕ್ಷತೆಯ ದೃಷ್ಟಿಯಿಂದ ಶಸ್ತ್ರ ಪರವಾನಗಿ ಪಡೆದಿದ್ದು, ಅದಕ್ಕಾಗಿ ಅಗತ್ಯವಿರುವ ನಿಯಮಗಳನ್ನು ಅನುಪಾಲಿಸಲಾಗಿದೆ. ಸಮಾಜದಲ್ಲಿ ನಾನು ಹೊಂದಿರುವ ಸ್ಥಾನಮಾನ ಪರಿಗಣಿಸಿ ಪರವಾನಗಿ ನೀಡಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನನ್ನು ಎರಡನೇ ಆರೋಪಿಯನ್ನಾಗಿಸಲಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಮಧ್ಯೆ, 2025ರ ಜನವರಿ 7ರಂದು ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ನನ್ನ ಬಳಿ ಇರುವ ಬಂದೂಕನ್ನು ಪ್ರಕರಣದ ಮೇಲೆ ಪ್ರಭಾವ ಬೀರಲು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಪರವನಾಗಿಯನ್ನು ಏಕೆ ಅಮಾನತು ಮಾಡಬಾರದು ಎಂಬ ಬಗ್ಗೆ ವಿವರಣೆ ಕೇಳಿ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ.

ಶೋಕಾಸ್ ನೋಟಿಸ್‌ಗೆ ಜನವರಿ 13ರಂದು ಉತ್ತರಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಾಗೂ ಪರವಾನಗಿ ಹೊಂದಿರುವ ಪಿಸ್ತೂಲ್‌ ಬಳಕೆ ಮಾಡುವ ಸಂದರ್ಭ ಉದ್ಭವಿಸುವುದಿಲ್ಲ. ಆದ್ದರಿಂದ, ಶೋಕಾಸ್‌ ನೋಟಿಸ್‌ ಹಿಂಪಡೆಯಬೇಕು ಎಂದು ಕೋರಿದ್ದೆ. ಜೊತೆಗೆ, ಜನವರಿ 16ರಂದು ಮತ್ತೊಂದು ಪತ್ರದ ಮೂಲಕ ಪಿಸ್ತೂಲ್‌ ದುರ್ಬಳಕೆ ಮಾಡುವುದಿಲ್ಲ. ಆದ್ದರಿಂದ, ಪರವಾನಗಿ ರದ್ದು ಮಾಡಬಾರದು ಎಂದು ಕೋರಲಾಗಿತ್ತು. ಹೀಗಿದ್ದರೂ, ಪರವಾನಗಿ ಅಮಾನತುಗೊಳಿಸದ್ದಲ್ಲದೇ ಜನವರಿ 21ರಂದು ನನ್ನ ಬಳಿ ಇದ್ದ ಪಿಸ್ತೂಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುರುದ್ದೇಶದಿಂದ ಹಾಗೂ ಕಿರುಕುಳ ನೀಡುವ ಉದ್ದೇಶದಿಂದ ಪೊಲೀಸರು ಪಿಸ್ತೂಲ್‌ ಪರವಾನಗಿ ಅಮಾನತು ಮಾಡಿ, ವಶಕ್ಕೆ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿ ಇದೆ ಎಂದ ಮಾತ್ರಕ್ಕೆ ಅಧಿಕಾರಿಗಳಿಗೆ ಶಸ್ತ್ರ ಪರವಾನಗಿ ಅಮಾನತುಗೊಳಿಸುವ ಅಧಿಕಾರ ಲಭ್ಯವಾಗದು. ಜತೆಗೆ, ಪರವಾನಗಿ ರದ್ದುಪಡಿಸುವಾಗ ಪೊಲೀಸರು ಶೋಕಾಸ್‌ ನೋಟಿಸ್‌ ನೀಡಿರುವುದನ್ನು ಹೊರತುಪಡಿಸಿ ನನ್ನ ವಾದವನ್ನು ಆಲಿಸಿಲ್ಲ. ಪೊಲೀಸರ ನಡೆಯು ಸ್ವೇಚ್ಛೆಯಿಂದ ಕೂಡಿರುವುದರಿಂದ ಪರವಾನಗಿ ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿರುವ ದರ್ಶನ್, ಮಧ್ಯಂತರ ಪರಿಹಾರದ ಭಾಗವಾಗಿ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 2024ರ ಡಿಸೆಂಬರ್ 13ರಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ದರ್ಶನ್ ತಮ್ಮ ಬಳಿ ಇರುವ ಪಿಸ್ತೂಲ್ ಬಳಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಹಾಗೂ ಸಾಕ್ಷಿ ನಾಶಕ್ಕೆ ಯತ್ನಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಶಸ್ತ್ರಾಸ್ತ್ರ ಪರವಾನಗಿ ರದ್ದುಪಡಿಸಿ 2025ರ ಜನವರಿ 20ರಂದು ಉಪ ಪೊಲೀಸ್‌ ಆಯುಕ್ತರು ಆದೇಶ ಮಾಡಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು 2025ರ ಆಗಸ್ಟ್ 14ರಂದು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು‌. ದರ್ಶನ್ ಹಾಗೂ ಇತರ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.