High Court of Karnataka 
ಸುದ್ದಿಗಳು

ಎಎನ್‌ಎಂ ತರಬೇತಿ ಕೇಂದ್ರದ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಬಿಡುಗಡೆ ಆದೇಶಕ್ಕೆ ಹೈಕೋರ್ಟ್‌ ತಡೆ

ಎಎನ್‌ಎಂ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು 2025ರ ಜೂನ್‌ 12ರಂದು ಆರೋಗ್ಯ ಇಲಾಖೆ ಆದೇಶಿಸಿತ್ತು.

Bar & Bench

ರಾಜ್ಯದಾದ್ಯಂತ ಕಿರಿಯ ಆರೋಗ್ಯ ಸಹಾಯಕಿಯರ (ಎಎನ್‌ಎಂ) ತರಬೇತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆ ನೀಡಿದೆ.

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವ್ವನಹಳ್ಳಿ ದಂಡಿನ ಕುರುಬರಹಟ್ಟಿಯ ಎಸ್ ಪಿ ಮೇಘನಾ ಹಾಗೂ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಇ ಎಸ್ ಇಂದಿರೇಶ್‌ ಅವರ ಏಸಕದಸ್ಯ ಪೀಠ ನಡೆಸಿತು.

ಎಎನ್‌ಎಂ ತರಬೇತಿ ಕೇಂದ್ರಗಳನ್ನು 2025–26ನೇ ಸಾಲಿನಿಂದಲೇ ಮುಚ್ಚಲು ನಿರ್ಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ನ್ಯಾಯಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಮತ್ತು ನಿರ್ದೇಶಕ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲ ಜೆ ಡಿ ಕಾಶಿನಾಥ್‌ ಅವರು “ರಾಜ್ಯ ಸರ್ಕಾರ 2025ರ ಜೂನ್‌ 12ರಂದು ಹೊರಡಿಸಿರುವ ಆದೇಶ ಕಾನೂನು ಬಾಹಿರ ಮತ್ತು ಏಕಪಕ್ಷೀಯವಾಗಿದೆ” ಎಂದರು.

ಸರ್ಕಾರದ ಪರ ವಕೀಲರು “ಪ್ರಸ್ತುತ 417 ವಿದ್ಯಾರ್ಥಿಗಳು ಕೋರ್ಸ್‌ಗೆ ದಾಖಲಾಗಿದ್ದಾರೆ. ಇವರಲ್ಲಿ 117 ವಿದ್ಯಾರ್ಥಿಗಳು ತಮಗೆ ಕೋರ್ಸ್‌ನಲ್ಲಿ ಮುಂದುವರಿಯಲು ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ. ಉಳಿದಂತೆ 115 ವಿದ್ಯಾರ್ಥಿಗಳು ಅದೇ ಕೋರ್ಸ್‌ನಲ್ಲಿಯೇ ಮುಂದುವರಿಯಲು ಇಚ್ಛಿಸಿದ್ದಾರೆ” ಎಂದು ವಿವರಿಸಿದರು.

ಭವಿಷ್ಯದಲ್ಲಿ ಎಎನ್‌ಎಂ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿ) ಅಥವಾ ಪಿಎಚ್‌ಸಿಒ (ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ) ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳು ಬದಲಾವಣೆಗೆ ಒಳಪಡುವ ಕಾರಣ ಪ್ರಸ್ತುತ ವ್ಯಾಸಂಗದಲ್ಲಿರುವ ಎಎನ್‌ಎಂ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿವಳಿಕೆ ಮೂಡಿಸಿ ಸರ್ಕಾರಿ ಬಿಎಸ್ಸಿ ನರ್ಸಿಂಗ್‌ ಅಥವಾ ಜಿಎನ್‌ಎಂ ಕಾಲೇಜುಗಳಲ್ಲಿನ ಕೋರ್ಸ್‌ಗೆ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಹಾಗೂ ಸಾಧ್ಯವಾದಷ್ಟು ಅಭ್ಯರ್ಥಿಗಳನ್ನು ಬಿಎಸ್ಸಿ ನರ್ಸಿಂಗ್‌ ಅಥವಾ ಜಿಎನ್‌ಎಂ ತರಬೇತಿಗಳಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲು ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಬಾಕಿ ಉಳಿದಿರುವ ಎಎನ್‌ಎಂ ತರಬೇತಿ ಕೇಂದ್ರಗಳನ್ನು ಮುಚ್ಚಿ ಈ ಕೇಂದ್ರದಲ್ಲಿನ ಅಭ್ಯರ್ಥಿಗಳನ್ನು ಹತ್ತಿರದ ತರಬೇತಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳಾಂತರಗೊಳಿಸಿದ ನಂತರ, ವಿದ್ಯಾರ್ಥಿಗಳು ಇಲ್ಲದಿರುವ ಎಎನ್‌ಎಂ ತರಬೇತಿ ಕೇಂದ್ರಗಳನ್ನು ಮುಚ್ಚಲಾಗುವುದು ಮತ್ತು ಈ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಹಿಂಪಡೆದುಕೊಳ್ಳಲಾಗುವುದು. ಕೌನ್ಸೆಲಿಂಗ್ ಮುಖಾಂತರ ಇಲಾಖೆಯಲ್ಲಿ ಲಭ್ಯವಿರುವ ನಿರ್ಣಾಯಕ ಖಾಲಿ ಹುದ್ದೆಗೆ ಅವರಿಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2025ರ ಏಪ್ರಿಲ್‌ 28ರಂದು ಮತ್ತು ಮೇ 20ರಂದು ಆದೇಶ ಹೊರಡಿಸಿತ್ತು.

ಈ ಆದೇಶಗಳ ನಂತರ 2025ರ ಜೂನ್‌ 12ರಂದು ಮತ್ತೊಂದು ಜ್ಞಾಪನಾ ಪತ್ರ ಹೊರಡಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು, ಎಎನ್‌ಎಂ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶಿಸಿದ್ದರು.