Telugu actress Kolla Hema & Karnataka HC 
ಸುದ್ದಿಗಳು

ರೇವ್‌ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆ: ತೆಲುಗು ನಟಿ ಹೇಮಾ ವಿರುದ್ಧದ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದೆ. ಈ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

Bar & Bench

ಬೆಂಗಳೂರಿನ ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ ಆರ್‌ ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಕೊಲ್ಲ ಹೇಮಾ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಹೈದರಾಬಾದ್‌ನ ಕೊಲ್ಲ ಹೇಮಾ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹೇಮಾ ಪರ ವಕೀಲರು “ಈ ಪ್ರಕರಣದಲ್ಲಿ ಸಹ ಆರೋಪಿಗಳ ಹೇಳಿಕೆ ಆಧರಿಸಿ ಹೇಮಾ ವಿರುದ್ಧ, ಮಾದಕ ದ್ರವ್ಯ ನಿಗ್ರಹ ಕಾಯಿದೆ (ಎನ್‌ಡಿಪಿಎಸ್‌) ಸೆಕ್ಷನ್‌ 27 (ಬಿ) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಪೀಠವು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಅಂತೆಯೇ, ಮುಂದಿನ ವಿಚಾರಣೆಯ ತನಕ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ ಎಂ ಫಾರ್ಮ್ ಹೌಸ್‌ ಮೇಲೆ 2024ರ ಮೇ 19ರಂದು ದಾಳಿ ನಡೆಸಿದ್ದ ಪೊಲೀಸರು, “ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದೆ. ಈ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ದರು” ಎಂದು ಆರೋಪಿಸಿದ್ದರು. ಅಂತೆಯೇ, ಅವರನ್ನು ವಶಕ್ಕೆ ಪಡೆದಿದ್ದರು. ಆನಂತರ ನ್ಯಾಯಾಲಯವು ಅವರನ್ನು ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿತ್ತು. ಈ ಮಧ್ಯೆ, ಹೇಮಾ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಬೆಂಗಳೂರು ಗ್ರಾಮಾಂತರದ 8ನೇ ಹೆಚ್ಚುವರಿ ಸತ್ರ ವಿಶೇಷ ನ್ಯಾಯಾಲಯಕ್ಕೆ 1,086 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. “ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಸೇರಿದಂತೆ ಹಲವು ಉದ್ಯಮಿಗಳು ಭಾಗವಹಿಸಿದ್ದರು. ಇವರಲ್ಲಿ ಹಲವರು ಡ್ರಗ್ಸ್ ಸೇವನೆ ಮಾಡಿದ್ದರು” ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.