Justice Rakesh Kumar and Justice D Ramesh, Andhra Pradesh High Court
Justice Rakesh Kumar and Justice D Ramesh, Andhra Pradesh High Court 
ಸುದ್ದಿಗಳು

ಅಧಿಕಾರಾರೂಢರಿಂದ ಹೈಕೋರ್ಟ್‌, ಸುಪ್ರೀಂ ಮೇಲೆ ದಾಳಿ: ಜಗನ್ ವಿರುದ್ಧ ಆಂಧ್ರ ಹೈಕೋರ್ಟ್‌ ಗುಡುಗು

Bar & Bench

ಆಂಧ್ರ ಪ್ರದೇಶದ ಹೈಕೋರ್ಟ್‌ ದುರ್ಬಲಗೊಳಿಸಲು ಯತ್ನಿಸಿರುವ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಛೀಮಾರಿ ಹಾಕುವುದರ ಜೊತೆಗೆ ಇಬ್ಬರು ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವ ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧಾರಕ್ಕೆ ಆಂಧ್ರ ಪ್ರದೇಶದ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಹಿಂದೆಂದೂ ಕಂಡಿರದ ಆದೇಶ ಹೊರಡಿಸಿದೆ.

ಪ್ರಕರಣದ ವಿಚಾರಣೆಯಿಂದ ಆಂಧ್ರ ಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯವರನ್ನು ಹಿಂದೆ ಸರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಕೆಂಡಾಮಂಡಲವಾದ ನ್ಯಾಯಾಲಯವು ಕ್ರಿಮಿನಲ್‌ ದೂರು ದಾಖಲಿಸಿಕೊಳ್ಳಲು ಆದೇಶ ಹೊರಡಿಸಿದೆ.

ತೆಲಂಗಾಣ ಹೈಕೋರ್ಟ್‌ನ ಮೂಖ್ಯ ನ್ಯಾಯಮೂರ್ತಿ ಆರ್‌ ಎಸ್‌ ಚೌಹಾಣ್‌ ಮತ್ತು ಆಂಧ್ರ ಪ್ರದೇಶ ಮುಖ್ಯ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರನ್ನು ವರ್ಗಾವಣೆ ಮಾಡುವ ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧಾರಕ್ಕೂ ಆಂಧ್ರ ಪ್ರದೇಶ ಹೈಕೋರ್ಟ್‌ ಗಂಭೀರ ಆಕ್ಷೇಪ ಎತ್ತಿದೆ.

ಆಂಧ್ರ ಪ್ರದೇಶ ಹೈಕೋರ್ಟ್‌ನ ಕಾರ್ಯಚಟುವಟಿಕೆಯನ್ನು ಟೀಕಿಸಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಪತ್ರ ಬರೆದ ಬೆನ್ನಿಗೇ ವರ್ಗಾವಣೆ ಶಿಫಾರಸ್ಸು ಕಾರ್ಯಗತಗೊಂಡಿದೆ. ಹೀಗೆ ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿ ಜಗನ್‌ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್‌ ಮುಂದಾಗಿದ್ದ ಸಂದರ್ಭದಲ್ಲೇ ಮುಖ್ಯಮಂತ್ರಿ ಜಗನ್‌ ತನಗೆ ಏನಾಗಬೇಕು ಅದನ್ನು ಸಾಧಿಸುವಲ್ಲಿ ಸಫಲವಾಗಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಆರೋಪಿಸಿದೆ.

ರಾಜ್ಯ ಸರ್ಕಾರದ ಭೂಮಿಯನ್ನು ಹರಾಜು ಹಾಕುವ ಕುರಿತ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿ ರಾಕೇಶ್‌ ಕುಮಾರ್‌ ಅವರನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಅವರು ತಾವೇ ಪ್ರಮುಖವಾಗಿ ತೀರ್ಪು ಬರೆದಿದ್ದಾರೆ. ಸಾಂವಿಧಾನಿಕ ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ಮಧ್ಯಪ್ರವೇಶಿಸಲು ಯತ್ನಿಸುತ್ತಿರುವುದಕ್ಕೆ ಕಿಡಿಕಾರಿರುವ ನ್ಯಾ. ರಾಕೇಶ್‌ ಕುಮಾರ್‌ ಅವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸುಧಾಕರ್‌ ರೆಡ್ಡಿ ಸಲ್ಲಿಸಿದ್ದ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಮೊದಲಿಗೆ ವಿಧಾನ ಪರಿಷತ್‌ ಆನಂತರ ಸಾಂವಿಧಾನಿಕ ಸಂಸ್ಥೆಯಾದ ರಾಜ್ಯ ಚುನಾವಣಾ ಆಯೋಗ ಈಗ ಆಂಧ್ರ ಪ್ರದೇಶದ ಹೈಕೋರ್ಟ್‌, ಇಷ್ಟುಮಾತ್ರವಲ್ಲದೇ ಅಧಿಕಾರಾರೂಢರು ಸುಪ್ರೀಂ ಕೋರ್ಟ್‌ ಮೇಲೂ ದಾಳಿ ಮಾಡಿದ್ದಾರೆ” ಎಂದು ತೀರ್ಪಿನಲ್ಲಿ ಖಾರವಾಗಿ ಹೇಳಿದ್ದಾರೆ.

ಮುಖ್ಯ ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಲೇವಾರಿಯಲ್ಲಿ ತಡವಾಗುತ್ತಿರುವುದನ್ನೂ ಟೀಕಿಸಿರುವ ನ್ಯಾಯಾಲಯವು 2011ರಿಂದ ಪ್ರಕರಣಗಳು ಬಾಕಿ ಇದ್ದರೂ ಯಾವುದೇ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಇದು ವ್ಯವಸ್ಥೆಗೆ ಮಾಡುವ ಅಪಮಾನವಲ್ಲವೇ?” ಎಂದು ಹೇಳಿದೆ.

ಪ್ರಸಕ್ತ ಪರಿಸ್ಥಿತಿಯು ಗೊಂದಲಮಯವಾಗಿದ್ದು, ರಾಜ್ಯ ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಕಾನೂನು ಸಲಹೆ ನೀಡಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು ಎಂದು ನ್ಯಾಯಮೂರ್ತಿ ಡಿ ರಮೇಶ್‌ ಸಹಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಾದ: “… ರಾಜ್ಯದ ಆಸ್ತಿಯನ್ನು ಸರ್ಕಾರ ಹೇಗೆ ಹರಾಜು ಹಾಕಲಾಗುತ್ತದೆ. ಸರ್ಕಾರ ಆಸ್ತಿ ಹರಾಜು ಹಾಕುವ ಮಟ್ಟಿಗೆ ದಿವಾಳಿಯಾಗಿದೆಯೇ. ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಮುರಿದು ಬಿದ್ದಿದೆ ಎಂದು ಕೇಂದ್ರ ಸರ್ಕಾರಕ್ಕೆ ಆಡಳಿತ ವರ್ಗಾವಣೆ ಮಾಡುತ್ತೇವೆ” ಎಂದು ನ್ಯಾ. ರಾಕೇಶ್‌ ಕುಮಾರ್‌ ಹೇಳಿದ್ದಾರೆ ಎಂದು ಎಎಜಿ ಸುಧಾಕರ್‌ ರೆಡ್ಡಿ ಆರೋಪಿಸಿದ್ದರು. ನ್ಯಾ. ರಾಕೇಶ್‌ ಕುಮಾರ್‌ ಅವರ ಅಭಿಪ್ರಾಯವನ್ನು ಹಲವು ಪತ್ರಿಕೆಗಳು ವರದಿ ಮಾಡಿವೆ ಎಂದು ಸುಧಾಕರ್‌ ರೆಡ್ಡಿ ವಾದಿಸಿದ್ದರು. ಆದರೆ, ಹೀಗೆ ಹೇಳಿಲ್ಲ ಎಂದು ನ್ಯಾಯಮೂರ್ತಿ ನಿರಾಕರಿಸಿದ್ದಾರೆ. ಇದಕ್ಕೆ ಪೂಕರವಾಗಿ ಮತ್ತೊಬ್ಬರು ವಕೀಲರು ಪೀಠ ಅಂಥ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದಿದ್ದು, ನಕಲಿ ಹೇಳಿಕೆಯ ಮೂಲಕ ನ್ಯಾಯಾಂಗದ ಘನತೆ ಹಾಳು ಮಾಡುವ ಪ್ರಯತ್ನವು ನಿಂದನೆಗೆ ಸಮ ಎಂದು ವಾದಿಸಿದರು.

ಎಎಜಿಯ ಆರೋಪವು ಮೇಲ್ನೋಟಕ್ಕೆ ಮಾನಹಾನಿಗೆ ಸಮನಾಗಿದ್ದು, ಇದನ್ನು ಖಾಸಗಿ ವ್ಯಕ್ತಿ ಹೇಳಿಲ್ಲ. ಬದಲಿಗೆ ಸರ್ಕಾರದ ಪರವಾಗಿ ಮನವಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಆಧಾರರಹಿತವಾಗಿ ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ನಿಷ್ಠೆ, ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಇದನ್ನು ಹೇಳಿಕೊಳ್ಳಲು ನ್ಯಾಯಮೂರ್ತಿಗಳಿಗೆ ಮತ್ತೊಂದು ವೇದಿಕೆ ಇಲ್ಲ. ನ್ಯಾಯಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿದ ಮೇಲೆ ನಮ್ಮ ರಕ್ಷಣೆಗೆ ಮಾಧ್ಯಮಗಳ ಬಳಿಗೆ ಹೋಗುವಂತಿಲ್ಲ. ನ್ಯಾಯಮೂರ್ತಿಯೊಬ್ಬರು ತನ್ನ ರಕ್ಷಣೆಗೆ ನಿರ್ವಿವಾದವಾದ ಸತ್ಯಗಳನ್ನು ಉಲ್ಲೇಖಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇಷ್ಟುಮಾತ್ರವಲ್ಲದೇ, ಅಧಿಕಾರಸ್ಥರು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ತಾವು ಏನು ಬೇಕಾದರೂ ಮಾಡಬಹುದು ಎಂಬ ಆತಂಕಕಾರಿ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರ ಹಕ್ಕುಗಳನ್ನು ಸಂರಕ್ಷಿಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿಗಳು ನಿವೃತ್ತರಾದ ಕನಿಷ್ಠ ಒಂದು ವರ್ಷದ ವರೆಗೆ ಯಾವುದೇ ತೆರನಾದ ರೀತಿಯಲ್ಲಿ ಸರ್ಕಾರ ನೀಡುವ ಹುದ್ದೆಗಳನ್ನು ಅಲಂಕರಿಸದೇ ಇರುವ ನಿರ್ಧಾರ ಕೈಗೊಂಡರೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಬಹುದು ಎಂದೂ ಅವರು ತಮ್ಮ ಸುದೀರ್ಘವಾದ ತೀರ್ಪಿನ ಅಂತ್ಯದಲ್ಲಿ ಉಲ್ಲೇಖಿಸಿದ್ದಾರೆ.

ಅಂತಿಮವಾಗಿ ಆರು ವಾರಗಳ ಒಳಗೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಏಕೆ ಆರಂಭಿಸಬಾರದು ಎಂಬುದಕ್ಕೆ ಉತ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಮೂರ್ತಿ ಡಿ ರಮೇಶ್‌ ಅವರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿದ್ದಾರೆ. ಫೆಬ್ರುವರಿಯಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.