“ವಕೀಲೆ ಜೀವಾ ಆತ್ಮಹತ್ಯೆ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಲೋಕಾಯುಕ್ತ ವಿಶೇಷ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ವ್ಯಾಪ್ತಿಯ ಅಂಚಿಗೆ ಬರುತ್ತದೆ. ಹೀಗಾಗಿ, ಹೈಕೋರ್ಟ್ ನಿರ್ದೇಶನ ನೀಡದ ಹೊರತು ಎಸ್‌ಐಟಿಗೆ ಸಂಬಂಧಿಸಿದ ಯಾವುದೇ ವಿಚಾರದ ಕುರಿತು ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕು ಮತ್ತು ನಿಯಂತ್ರಣ ಕಾಪಾಡಿಕೊಳ್ಳಬೇಕು” ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಖಡಕ್ ಆದೇಶ ಮಾಡಿದೆ.
ವಿಶೇಷ ತನಿಖಾ ತಂಡವು ಕೆಲವು ಅಧಿಕಾರಿಗಳನ್ನು ತಮ್ಮ ನೆರವಿಗಾಗಿ ಪಡೆದಿತ್ತು. ಇದರಲ್ಲಿ ಲೋಪವಾಗಿದೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಎಸ್‌ಐಟಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಕ್ಕೆ ಆಕ್ಷೇಪಿಸಿ ಸಿಬಿಐ ಮತ್ತು ರಾಜ್ಯ ಪ್ರಾಸಿಕ್ಯೂಷನ್ ಜಂಟಿಯಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕದಸ್ಯ ಪೀಠ ವಿಚಾರಣೆ ನಡೆಸಿತು.
“ದೈನಂದಿನ ತನಿಖೆಯ ವರದಿಯನ್ನು ಎಸ್‌ಐಟಿ ಅಧಿಕಾರಿಗಳು ನೆರವು ಪಡೆದಿರುವ ಅಧಿಕಾರಿಗಳು ಬರೆದಿದ್ದು, ಅದಕ್ಕೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಒಬ್ಬರು ಮತ್ತು ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು (ಪೊಲೀಸ್ ವರಿಷ್ಠಾಧಿಕಾರಿಗಳು) ಸಹಿ ಮಾಡಿದ್ದಾರೆ. ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎಸ್‌ಐಟಿಯು ದಿನನಿತ್ಯ ನಡೆಯುತ್ತಿರುವ ತನಿಖೆಗೆ ಕೆಲವು ಅಧಿಕಾರಿಗಳ ನೆರವನ್ನು ಪಡೆದಿದೆಯೇ ವಿನಾ ತನಿಖೆಯನ್ನು ಬೇರೆ ಅಧಿಕಾರಿಗಳಿಗೆ ವಹಿಸಿಲ್ಲ. ಎಸ್‌ಐಟಿಯನ್ನು ಹೈಕೋರ್ಟ್ ರಚಿಸಿದ್ದು, ಅದರ ಮೇಲೆ ನಿಗಾ ಇಟ್ಟಿದೆ. ಅದಾಗ್ಯೂ, ಹೈಕೋರ್ಟ್‌ನ ಹಿಂದಿನ ಆದೇಶವನ್ನು ವ್ಯಾಖ್ಯಾನಿಸಿ, ಎಸ್‌ಐಟಿಗೆ ಸಕ್ಷಮ ನ್ಯಾಯಾಲಯವಾಗಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹೇಗೆ ಶೋಕಾಸ್ ನೋಟಿಸ್ ನೀಡಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಹೈಕೋರ್ಟ್ ಆದೇಶದಲ್ಲಿ ಅಚ್ಚರಿ ವ್ಯಕ್ತಪಡಿಸಿದೆ.
“ಹೈಕೋರ್ಟ್ ರಚಿಸಿರುವ ಎಸ್‌ಐಟಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ವ್ಯಾಪ್ತಿ ಅಂಚಿಗೆ ಬರುತ್ತದೆ. ಹೀಗಾಗಿ, ಹೈಕೋರ್ಟ್ ನಿರ್ದೇಶನ ನೀಡದ ಹೊರತು ಎಸ್‌ಐಟಿಗೆ ಸಂಬಂಧಿಸಿದ ಯಾವುದೇ ವಿಚಾರದ ಕುರಿತು ಲೋಕಾಯುಕ್ತ ನ್ಯಾಯಾಲಯ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕು ಮತ್ತು ನಿರ್ಬಂಧ ಕಾಪಾಡಿಕೊಳ್ಳಬೇಕು” ಎಂದು ಖಡಕ್ ಆದೇಶ ಮಾಡಿದೆ.
ಅಲ್ಲದೇ, “ಜೀವಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ಈ ನ್ಯಾಯಾಲಯದ ಮುಂದೆ ಎಸ್‌ಐಟಿ ಮಂಡಿಸಬೇಕು” ಎಂದೂ ನಿರ್ದೇಶಿಸಿದೆ.
ಇದಕ್ಕೂ ಮುನ್ನ, ಸಿಬಿಐ ಪ್ರತಿನಿಧಿಸಿದ್ದ ವಕೀಲ ಪ್ರಸನ್ನಕುಮಾರ್ ಮತ್ತು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಹೈಕೋರ್ಟ್ ಅಗತ್ಯಬಿದ್ದಲ್ಲಿ ಎಸ್‌ಐಟಿಯು ಬೇರೆ ಅಧಿಕಾರಿಗಳ ನೆರವು ಪಡೆಯಬಹುದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಅಧಿಕಾರಿಗಳ ಸಹಾಯ ಪಡೆಯಲಾಗಿದೆ. ಆದರೆ, ಲೋಕಾಯುಕ್ತ ನ್ಯಾಯಾಲಯವು ಈ ಸಂಬಂಧ ಎಸ್‌ಐಟಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿದೆ. ಎಸ್‌ಐಟಿಯು ತನಿಖಾ ಜವಾಬ್ದಾರಿಯನ್ನು ಹೈಕೋರ್ಟ್ ನೀಡಿರುವುದಕ್ಕೆ ವಿರುದ್ಧವಾಗಿ ಬೇರೆಯವರಿಗೆ ನೀಡಬಾರದು” ಎಂದು ಹೇಳಿದೆ ಎಂದು ಪೀಠದ ಗಮನಸೆಳೆದರು.
ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ರಾಜ್ಯ ಗೃಹ ರಕ್ಷಕ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನು ಒಳಗೊಂಡ ಎಸ್‌ಐಟಿಯನ್ನು ಹೈಕೋರ್ಟ್ ರಚಿಸಿದೆ. ತನಿಖಾ ವರದಿ ಸಲ್ಲಿಸಲು ಮೂರು ತಿಂಗಳ ಗಡುವನ್ನು ನ್ಯಾಯಾಲಯ ವಿಧಿಸಿದೆ.