Karnataka High Court
Karnataka High Court 
ಸುದ್ದಿಗಳು

ಹೈಕೋರ್ಟ್‌ನ 6 ರಿಜಿಸ್ಟ್ರಾರ್‌ ಹುದ್ದೆಗಳ ನೇಮಕಾತಿ ಸಹಿತ 244 ನ್ಯಾಯಾಧೀಶರ ವರ್ಗಾವಣೆ; ಮೇ 22ರಿಂದ ವರ್ಗಾವಣೆ ಅನ್ವಯ

Bar & Bench

ಆಡಳಿತಾತ್ಮಕ ಕಾರಣಗಳು ಮತ್ತು ಸಾರ್ವಜನಿಕ ಸೇವೆಯ ದೃಷ್ಟಿಯಿಂದ 6 ಮಂದಿ ಜಿಲ್ಲಾ ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್‌ನ ವಿವಿಧ ರಿಜಿಸ್ಟ್ರಾರ್‌ ಹುದ್ದೆಗಳಿಗೆ ನೇಮಕ ಮಾಡಿರುವುದು ಸೇರಿ 244 ಮಂದಿಯನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶದಂತೆ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಏಪ್ರಿಲ್‌ 21ರಂದು ಆದೇಶ ಮಾಡಲಾಗಿದ್ದು, ಮೇ 22ರಿಂದ ಇದು ಅನ್ವಯವಾಗಲಿದೆ ಎಂದು ವಿವರಿಸಲಾಗಿದೆ.

ಹೈಕೋರ್ಟ್‌ ರಿಜಿಸ್ಟ್ರಾರ್‌ಗಳು: ಮೈಸೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಸರಸ್ವತಿ ವಿಷ್ಣು ಕೋಸಂದರ್‌ ಅವರನ್ನು ಖಾಲಿ ಇರುವ ಹೈಕೋರ್ಟ್‌ (ವಿಚಕ್ಷಣಾ) ರಿಜಿಸ್ಟ್ರಾರ್‌ ಆಗಿ ನೇಮಿಸಲಾಗಿದೆ. ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (ಎಫ್‌ಟಿಎಸ್‌ಸಿ-1) ಕಸನಪ್ಪ ನಾಯ್ಕ್‌ ಅವರನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ. ಕಲಬುರ್ಗಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ಧರಾಧ್ಯ ಎಚ್‌ ಜೆ ಅವರನ್ನು ಕಲಬುರ್ಗಿ ಹೈಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ ಹುದ್ದೆಗೆ ನೇಮಕ ಮಾಡಲಾಗಿದೆ. ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ ನಾರಾಯಣ ಪ್ರಸಾದ್‌ ಅವರನ್ನು ಹೈಕೋರ್ಟ್‌ನ ನೇಮಕಾತಿ ವಿಭಾಗದ ರಿಜಿಸ್ಟ್ರಾರ್‌ ಆಗಿ, ಸಿಬಿಐ ವಿಶೇಷ ನ್ಯಾಯಾಧೀಶೆ, ಬೆಂಗಳೂರು ನಗರದ 46ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶೆ ಇ ಚಂದ್ರಕಲಾ ಅವರನ್ನು ಹೈಕೋರ್ಟ್‌ನ ಮೌಲಸೌಕರ್ಯ ಮತ್ತು ನಿರ್ವಹಣಾ ರಿಜಿಸ್ಟ್ರಾರ್‌ ಆಗಿ ಮತ್ತು ಬೆಂಗಳೂರು ಗ್ರಾಮಾಂತರ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಚೆಂಗಟಿ ಅವರನ್ನು ಹೈಕೋರ್ಟ್‌ನ ಅಂಕಿಸಂಖ್ಯೆ ಮತ್ತು ಪರಿಶೀಲನಾ ರಿಜಿಸ್ಟ್ರಾರ್‌ ಆಗಿ ನೇಮಕ ಮಾಡಲಾಗಿದೆ.

ನ್ಯಾ. ಮಲ್ಲಿಕಾರ್ಜುನಗೌಡ ನಿವೃತ್ತಿ: ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಭಾವಚಿತ್ರ ಇಡುವ ವಿಚಾರದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ಶಿವಮೊಗ್ಗದ ಪ್ರಧಾ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರು 2023ರ ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಉವರ ಸ್ಥಾನಕ್ಕೆ ಹೈಕೋರ್ಟ್‌ನ ನೇಮಕಾತಿ ವಿಭಾಗದ ರಿಜಿಸ್ಟ್ರಾರ್‌ ಮಂಜುನಾಥ್‌ ನಾಯಕ್‌ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೆಚ್ಚುವರಿ ನಿರ್ದೇಶಕರಾದ ನರಹರಿ ಪ್ರಭಾಕರ್‌ ಮರಾಠೆ ಅವರನ್ನು ಅಕಾಡೆಮಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಎಲ್‌ ವಿಜಯಲಕ್ಷ್ಮಿ ದೇವಿ ಅವರನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ, ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿರುವ ಮುಸ್ತಾಫಾ ಹುಸೈನ್‌ ಸಯ್ಯದ್‌ ಅಜೀಜ್‌ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ, ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಎಸ್‌ ರೇಖಾ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆರನ್ನಾಗಿ, ಕೊಡಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಬೃಂಗೇಶ್‌ ಅವರನ್ನು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ (ದೇಶೀಯ ಮತ್ತು ಅಂತಾರಾಷ್ಟ್ರೀಯ) ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಸೇರಿ 11 ಮಂದಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಉಳಿದಂತೆ 47 ಮಂದಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಯಿಂದ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ, 119 ಹಿರಿಯ ಸಿವಿಲ್‌ ನ್ಯಾಯಾಧೀಶರನ್ನು ವಿವಿಧ ಹುದ್ದೆಗಳಿಗೆ ಹಾಗೂ 61 ಸಿವಿಲ್‌ ನ್ಯಾಯಾಧೀಶರನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Transfer and Postings of Prl. District and Sessions Judges.pdf
Preview
Postings of Registrars in the High Court of Karnataka.pdf
Preview
Transfer and Postings of Judicial Officers in the cadre of District Judge.pdf
Preview
Transfer and Postings of Judicial Officers in the cadre of Senior Civil Judge.pdf
Preview
Transfer and Postings of Judicial Officers in the cadre of Civil Judge.pdf
Preview