ಸುದ್ದಿಗಳು

ಹೈಕೋರ್ಟ್‌ಗಳು ಭಾರೀ ಸಂಖ್ಯೆಯ ಜಾಮೀನು ಅರ್ಜಿ ವಿಚಾರಣೆ ನಡೆಸುವುದರಿಂದ ವಿಳಂಬ ಅನಿವಾರ್ಯ: ಸುಪ್ರೀಂ

Bar & Bench

ದೇಶದ ಹೈಕೋರ್ಟ್‌ಗಳಲ್ಲಿ ಭಾರೀ ಸಂಖ್ಯೆಯ ಜಾಮೀನು ಅರ್ಜಿಗಳು ವಿಚಾರಣೆ ಬಾಕಿ ಇರುವುದರಿಂದ ಅಂತಹ ಪ್ರಕರಣಗಳ ವಿಲೇವಾರಿ ಸ್ವಲ್ಪ ವಿಳಂಬವಾಗುವುದು ಅನಿವಾರ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತಿಳಿಸಿದೆ [ಶೇಖ್ ಉಜ್ಮಾ ಫಿರೋಜ್ ಹುಸೇನ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ದೇಶದ ಪ್ರತಿ ನ್ಯಾಯಾಲಯವೂ ಭಾರೀ ಸಂಖ್ಯೆಯ ಪ್ರಕರಣಗಳ ಬಾಕಿ ಉಳಿಯುವ ಸಮಸ್ಯೆಯೊಂದಿಗೆ ಹೋರಾಡುತ್ತಿರುವುದರಿಂದ ಯಾವುದೇ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ವಾಡಿಕೆಯ ರೀತಿಯಲ್ಲಿ ಆದೇಶಿಸಬಾರದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರ ಪೀಠ ಎಚ್ಚರಿಕೆ ನೀಡಿತು.   

ದೇಶದ ಪ್ರತಿ ನ್ಯಾಯಾಲಯದಲ್ಲಿಯೂ ಭಾರೀ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿರುವುದರಿಂದ ಅಸಾಧಾರಣವಲ್ಲದ ಸಂದರ್ಭ ಹೊರತುಪಡಿಸಿ ಉಳಿದ ಪ್ರಕರಣಗಳಿಗೆ ಕಾಲಮಿತಿ ನಿಗದಿಪಡಿಸುವ ಪ್ರಲೋಭನೆಗೆ ಸಾಂವಿಧಾನಿಕ ನ್ಯಾಯಾಲಯ (ಹೈಕೋರ್ಟ್‌) ತುತ್ತಾಗಬಾರದು ಎಂದು ಅದು ನುಡಿಯಿತು.

ಕಳೆದ ಜೂನ್‌ನಿಂದ ಬಾಕಿ ಉಳಿದಿದ್ದ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಬಾಂಬೆ ಹೈಕೋರ್ಟ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿಯೊಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಅರ್ಜಿಗೆ ನವೆಂಬರ್ 10 ರಂದು ಅಸಮ್ಮತಿ ಸೂಚಿಸಿದ ಸರ್ವೋಚ್ಚ ನ್ಯಾಯಾಲಯ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಆರೋಪಿಗಳು ಹೈಕೋರ್ಟ್‌ನಲ್ಲಿ ತ್ವರಿತ ವಿಚಾರಣೆ ಕೋರಬಹುದು ಎಂದು ತಿಳಿಸಿತು.

ಮನವಿಯಲ್ಲಿ ಹುರುಳಿದ್ದರೆ ಸಂಬಂಧಪಟ್ಟ ಪೀಠ ಅದನ್ನು ಪರಿಗಣಿಸುತ್ತದೆ ಎಂಬ ಖಚಿತತೆ ನಮಗಿದೆ ಎಂದು ಮನವಿ ವಜಾಗೊಳಿಸುವ ಮೊದಲು ಸುಪ್ರೀಂ ಕೋರ್ಟ್‌ ಹೇಳಿತು.