ಕಾಲಮಿತಿಯಲ್ಲಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್‌ಗಳಿಗೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪುನರುಚ್ಚರಿಸಿದೆ [ಗೀತಾ ಅರೋರಾ @ ಸೋನು ಪಂಜಾಬನ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ಗೆ ಅಧೀನವಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ತನ್ನ ಮಗ ಆರೂ ವಿಷಯಗಳಲ್ಲಿ ಅನುತ್ತೀರ್ಣನಾಗಿರುವುದರಿಂದ ಅವನ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ತನಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ನಾನು ಸಲ್ಲಿಸಿದ್ದ ಅರ್ಜಿಯನ್ನು 36 ಬಾರಿ ವಿಚಾರಣೆ ನಡೆಸಿದ್ದರೂ ಹೈಕೋರ್ಟ್ ಇತ್ಯರ್ಥಗೊಳಿಸಿಲ್ಲ. ನನ್ನ ಮಗುವಿಗೆ ನನ್ನ ಅವಶ್ಯಕತೆ ಇದೆ. ಈ ಹಿಂದೆಯೂ ತಾನು ಪೆರೋಲ್ ಪಡೆಯುತ್ತಿದ್ದೆ. ಹೈಕೋರ್ಟ್ ಇನ್ನೂ ಪ್ರಕರಣ ಇತ್ಯರ್ಥಗೊಳಿಸಿಲ್ಲ. ನ್ಯಾಯಾಲಯ ಪ್ರಕರಣದ ಸಕಾಲಿಕ ವಿಲೇವಾರಿಗೆ ನಿರ್ದೇಶಿಸಬಹುದೇ ಎಂದು ಮಹಿಳೆ ಕೋರಿದ್ದರು.
ಆಗ ನ್ಯಾಯಮೂರ್ತಿ ನಾಥ್ ಅವರು “ಈ ಕುರಿತಂತೆ ನಾವು ಹೈಕೋರ್ಟ್‌ಗೆ ಮನವಿ ಸಲ್ಲಿಸಬಹುದೇ ಹೊರತು ನಿರ್ದೇಶಿಸಲು ಸಾಧ್ಯವಿಲ್ಲ. ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ಗೆ ಅಧೀನವಲ್ಲ. ಯಾವುದೇ ನಿರ್ದಿಷ್ಟ ಪ್ರಕರಣವನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ನಿರ್ದೇಶಿಸಲಾಗದು” ಎಂದರು.
ನಂತರ ಪೀಠ ಮೇಲ್ಮನವಿದಾರರ ಶಿಕ್ಷೆಯ ಅಮಾನತು ಅರ್ಜಿಯನ್ನು ತ್ವರಿತವಾಗಿ ಆಲಿಸಿ ತೀರ್ಮಾನಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡುವ ಆದೇಶ ಹೊರಡಿಸಿತು.
ಫೆಬ್ರವರಿ 2023 ರಲ್ಲಿಯೂ ಕೂಡ, ಸುಪ್ರೀಂ ಕೋರ್ಟ್ ಇದೇ ಬಗೆಯ ಆದೇಶ ನೀಡಿತ್ತು. ಉಚ್ಚ ನ್ಯಾಯಾಲಯಗಳು ಕೂಡ ತನ್ನಂತೆಯೇ ಸಾಂವಿಧಾನಿಕ ನ್ಯಾಯಾಲಯಗಳಾಗಿದ್ದು ಅವುಗಳು ಸುಪ್ರೀಂ ಕೋರ್ಟ್ ಅಧಿನವಲ್ಲ ಎಂದಿತ್ತು. ಅದಕ್ಕೂ ಒಂದು ವರ್ಷ ಮೊದಲು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ಅಧೀನದಲ್ಲಿ ಹೈಕೋರ್ಟ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದಿತ್ತು.
ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ್ ಎಸ್ ಓಕಾ ಅವರು ಈ ವರ್ಷದ ಆರಂಭದಲ್ಲಿ, ಪ್ರತಿಯೊಂದು ನ್ಯಾಯಾಲಯವೂ ನ್ಯಾಯಾಲಯವೇ ಆಗಿದ್ದು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ತಾವು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಮಾಡುವ ಕೆಲಸವನ್ನೇ ಮಾಡುವುದರಿಂದ ಯಾವುದೇ ಕೀಳರಿಮೆ ಪಡಬಾರದು ಎಂದು ತಿಳಿಸಿದ್ದರು.