Karnataka High Court, Hijab

 
ಸುದ್ದಿಗಳು

ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಎತ್ತಿ ಹಿಡಿದ ಹೈಕೋರ್ಟ್‌; ಹಿಜಾಬ್‌ ಧಾರಣೆ ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ಕೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು 11 ದಿನಗಳ ಕಾಲ, ಸುಮಾರು 24 ತಾಸುಗಳ ವಾದ ಆಲಿಸಿ, ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿತ್ತು.

Bar & Bench

ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧವನ್ನು ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳನ್ನು ಮಂಗಳವಾರ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ್ದು, ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಮಹತ್ವದ ಆದೇಶ ಮಾಡಿದೆ.

ಹಿಜಾಬ್‌ ನಿಷೇಧವನ್ನು ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು ಫೆಬ್ರವರಿ ೨೫ರಂದು ತೀರ್ಪು ಕಾಯ್ದಿರಿಸಿದ್ದು, ಇಂದು ಅದನ್ನು ಪ್ರಕಟಿಸಿತು.

ಇಡೀ ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲವು ಪ್ರಶ್ನೆಗಳನ್ನು ರೂಪಿಸಿದ್ದು ಅವುಗಳಿಗೆ ಉತ್ತರಿಸಿದ್ದೇವೆ. 1. ಇಸ್ಲಾಂ ಧರ್ಮದಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ? 2. ಇಸ್ಲಾಂ ಧರ್ಮದಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿ ಹಕ್ಕಿನ ಭಾಗವೇ? 3. ರಾಜ್ಯ ಸರ್ಕಾರದ ಆದೇಶವು ವಿವೇಚನಾರಹಿತವಾಗಿದೆಯೇ? ಎಂಬ ಪ್ರಶ್ನೆಗಳಿಗೆ ಮುಸ್ಲಿಮ್‌ ಮಹಿಳೆಯರು ಹಿಬಾಜ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಾಲೆಯಲ್ಲಿ ಸಮವಸ್ತ್ರ ಸೂಚಿಸಿರುವುದು ಒಂದು ಸಮಂಜಸವಾದ ನಿರ್ಬಂಧವಾಗಿದ್ದು, ವಿದ್ಯಾರ್ಥಿಗಳು ಅದನ್ನು ಆಕ್ಷೇಪಿಸುವಂತಿಲ್ಲ. ಆದೇಶ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂಬ ಉತ್ತರ ಕಂಡುಕೊಂಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ತೀರ್ಪು ಓದಿ ಹೇಳಿದರು.

ಅರ್ಜಿದಾರ ವಿದ್ಯಾರ್ಥಿನಿಯೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ರಾಜ್ಯ ಸರ್ಕಾರದ ಆದೇಶವು ದೋಷಪೂರಿತವಾಗಿದೆ ಎಂದು ವಾದಿಸಿದ್ದರು. “ಮೂರು ಪ್ರತ್ಯೇಕ ಹೈಕೋರ್ಟ್‌ಗಳು ತಮ್ಮ ತೀರ್ಪಿನಲ್ಲಿ ಹಿಜಾಬ್‌ ಧರಿಸುವುದು 25ನೇ ವಿಧಿಯ ಭಾಗವಲ್ಲ ಎಂದು ಹೇಳಿವೆ ಎಂಬುದನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಆದೇಶ ಮಾಡಿದೆ. ಸರ್ಕಾರದ ಆದೇಶವು ಮೇಲ್ನೋಟಕ್ಕೆ ಸರಿಯಾಗಿಲ್ಲ. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮೂರೂ ತೀರ್ಪುಗಳು ಸರ್ಕಾರದ ವಿರುದ್ಧವೇ ಇವೆ. ರಾಜ್ಯ ಸರ್ಕಾರ ಈ ತೀರ್ಪುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಸರ್ಕಾರದ ಆದೇಶವನ್ನು ಪರಿಗಣಿಸಿ ಕಾಲೇಜುಗಳು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುತ್ತಿವೆ. ಸರ್ಕಾರದ ಆದೇಶದ ಅಡಿಪಾಯವೇ ಕುಸಿದಾಗ ಉಳಿದದ್ದು ನಿಲ್ಲುವುದಿಲ್ಲ” ಎಂದಿದ್ದರು.

“ಮೊದಲನೆಯದಾಗಿ ಫಾತಿಮಾ ವರ್ಸಸ್‌ ಕೇರಳ ರಾಜ್ಯ ಪ್ರಕರಣವನ್ನು ಸರ್ಕಾರದ ಆದೇಶ ಆಧರಿಸಿದೆ. ಇಲ್ಲಿ ಶಿಕ್ಷಣ ಸಂಸ್ಥೆಯು ಖಾಸಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಸ್ಥೆಯಾಗಿದೆ. ಇದು ಸರ್ಕಾರಿ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಪ್ರತ್ಯೇಕ ಮೂಲಭೂತ ಹಕ್ಕು ಹೊಂದಿರುವ ಖಾಸಗಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಆ ತೀರ್ಪು ಸಂಬಂಧಿಸಿದ್ದಾಗಿದೆ. ಎರಡನೆಯದು, ಬಾಂಬೆ ಹೈಕೋರ್ಟ್‌ ತೀರ್ಪನ್ನು ಸರ್ಕಾರದ ಆದೇಶದಲ್ಲಿ ಆಧರಿಸಲಾಗಿದೆ. ಇದು ಬಾಲಕಿಯರ ಶಾಲೆಗೆ ಸಂಬಂಧಿಸಿದ್ದು, ಬಾಲಕ-ಬಾಲಕಿಯರ ಶಾಲೆಗೆ ಸಂಬಂಧ ಹೊಂದಿಲ್ಲದಿರುವುದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲ. ಮೂರನೆಯದಾಗಿ, ಮದ್ರಾಸ್‌ ಹೈಕೋರ್ಟ್‌ ಹೊರಡಿಸಿರುವ ಮತ್ತೊಂದು ತೀರ್ಪು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ್ದಲ್ಲ. ಇದು ಶಿಕ್ಷಕರ ಸಮವಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಶಿಕ್ಷಕರು ಸಮವಸ್ತ್ರ ಧರಿಸಬೇಕು ಎಂದು ಹೇಳುವುದಾಗಿತ್ತು. ಇದರಲ್ಲಿ ಸಂವಿಧಾನದ 25ನೇ ವಿಧಿ, ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಉಲ್ಲೇಖ ಮಾಡಲಾಗಿಲ್ಲ” ಎಂದಿದ್ದರು.

ವಿದ್ಯಾರ್ಥಿನಿ ಶ್ರೀಮತಿ ರೇಶಮ್‌ ಎಂಬವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಕರ್ನಾಟಕ ಪದವಿ ಪೂರ್ವ ಸಮಿತಿಯಡಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸುವ ಸಮವಸ್ತ್ರವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯು (ಸಿಡಿಸಿ) ವಸ್ತ್ರ ಸಂಹಿತೆ ವಿಧಿಸುವುದು ಕಾನೂನುಬಾಹಿರವಾಗಿದ್ದು, ಕಾಯಿದೆ ಮತ್ತು ಅದರ ನಿಯಮಗಳಿಗೆ ವಿರುದ್ಧವಾಗಿದೆ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 2(7)ರ ಪ್ರಕಾರ ಕಾಲೇಜು ಅಭಿವೃದ್ಧಿ ಸಮಿತಿಯು ಸಕ್ಷಮ ಪ್ರಾಧಿಕಾರವಲ್ಲ. ಸಮವಸ್ತ್ರ ಸೂಚಿಸಲು ಸಿಡಿಸಿಗೆ ಯಾವುದೇ ಅಧಿಕಾರ ನೀಡಲಾಗಿಲ್ಲ” ಎಂದಿದ್ದರು.

“ಇತರೆ ಧರ್ಮಗಳ ಧಾರ್ಮಿಕ ಸಂಕೇತಗಳಿಗೆ ನಿರ್ಬಂಧ ವಿಧಿಸದಿರುವಾಗ ಮುಸ್ಲಿಮ್‌ ಹೆಣ್ಣು ಮಕ್ಕಳನ್ನು ಮಾತ್ರ ಗುರಿಯಾಗಿಸಲಾಗಿದೆ. ನೂರಾರು ಧಾರ್ಮಿಕ ಸಂಕೇತಗಳಿರುವಾಗ ಸರ್ಕಾರವು ಹಿಜಾಬ್‌ ಅನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ. ಬಳೆಗಳನ್ನೂ ಧರಿಸಲಾಗುತ್ತದೆ. ಬಡ ಮುಸ್ಲಿಮ್‌ ವಿದ್ಯಾರ್ಥಿಯರನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ? ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ?” ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಶಬರಿಮಲೆ ಮತ್ತು ತ್ರಿವಳಿ ತಲಾಕ್‌ ಪ್ರಕರಣಗಳ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಸಾಂವಿಧಾನಿಕ ನೈತಿಕತೆ ಪರೀಕ್ಷೆಯಲ್ಲಿ ಹಿಜಾಬ್‌ ಧಾರಣೆ ಸಹ ಉತ್ತೀರ್ಣವಾಗಬೇಕು. ಹಿಜಾಬ್‌ ಧಾರಣೆಯು ಕಡ್ಡಾಯವಾಗಿ ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಿದೆ” ಎಂದಿದ್ದರು.