Hijab, Supreme Court

 
ಸುದ್ದಿಗಳು

ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆ, ಇದರಿಂದ ಯಾರ ಹಕ್ಕಿಗೂ ತೊಂದರೆ ಇಲ್ಲ: ಸುಪ್ರೀಂಕೋರ್ಟ್‌ನಲ್ಲಿ ಮನವಿ

ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠ ಹಿಜಾಬ್ ನಿಷೇಧದ ಪ್ರಕರಣ ಆಲಿಸುತ್ತಿರುವ ನಡುವೆಯೇ ಸುಪ್ರೀಂಕೋರ್ಟ್‌ಗೆ ಏಕೆ ಮನವಿ ಸಲ್ಲಿಸಲಾಗಿದೆ ಎಂಬುದನ್ನು ತಿಳಿಯಲು ವರದಿ ಓದಿ.

Bar & Bench

ಹಿಜಾಬ್‌ ವಿಚಾರವಾಗಿ ದೇಶದೆಲ್ಲೆಡೆ ಪ್ರತಿಭಟನೆ ಭುಗಿಲೇಳುತ್ತಿರುವುದರಿಂದ ಇದಕ್ಕೆ ಕಾರಣವಾದ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕುರಿತಾದ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಮನವಿ ಸಲ್ಲಿಸಿದ್ದಾರೆ [ಫಾತಿಮಾ ಬುಷ್ರಾ ವರ್ಸಸ್‌ ಕರ್ನಾಟಕ ರಾಜ್ಯ].

ಅರ್ಜಿಯ ಪ್ರಮುಖಾಂಶಗಳು

  • ಸಂವಿಧಾನದ 14, 19 (1) (ಎ), 21, 25 ಮತ್ತು 29ನೇ ವಿಧಿಯಡಿ ಒದಗಿಸಲಾದ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

  • ಸಮವಸ್ತ್ರಕ್ಕೂ 1963ರ ಕರ್ನಾಟಕ ಶಿಕ್ಷಣ ಕಾಯಿದೆಗೂ ಯಾವುದೇ ಸಂಬಂಧ ಇಲ್ಲವಾದ್ದರಿಂದ ರಾಜ್ಯ ಸರ್ಕಾರ ಆದಶ ಹೊರಡಿಸುವುದು ಅದರ ಅಧಿಕಾರ ವ್ಯಾಪ್ತಿ ಮೀರಿದ್ದಾಗಿದೆ.

  • ಹಿಜಾಬ್ ಧರಿಸುವುದು ಮುಸ್ಲಿಂ ಹುಡುಗಿ/ಮಹಿಳೆಯ ಅಗತ್ಯ ಧಾರ್ಮಿಕ ಆಚರಣೆಯಾಗಿದೆ;

  • ಮುಸ್ಲಿಮ್ ಹುಡುಗಿಯೊಬ್ಬಳು ಹಿಜಾಬ್/ ಶಿರವಸ್ತ್ರ ಧರಿಸಿ ಶಿಕ್ಷಣವನ್ನು ಮುಂದುವರಿಸುವುದು ಯಾವುದೇ ವ್ಯಕ್ತಿಯ ಹಕ್ಕನ್ನು ಉಲ್ಲಂಘಿಸದು ಮತ್ತು ಅದು ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವುದಿಲ್ಲ.

  • ಅರ್ಜಿದಾರರು ಮತ್ತಿತರರ ವಿದ್ಯಾರ್ಥಿಗಳಿಗೆ ಒಂದು ವಾರದಿಂದ ಕಾಲೇಜುಗಳಿಗೆ ಪ್ರವೇಶ ನಿರಾಕರಿಸಲಾಗಿದ್ದು ಕರ್ನಾಟಕ ಹೈಕೋರ್ಟ್‌ ಯಾವುದೇ ಮಧ್ಯಂತರ ಪರಿಹಾರ ಒದಗಿಸಿಲ್ಲ.

  • ಈ ಸಮಸ್ಯೆ ಭಾರತದೆಲ್ಲೆಡೆ ಚಾಚಿಕೊಳ್ಳಲಿದ್ದು ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶಿಸುವ ಅಗತ್ಯವಿದೆ.

  • ಮುಸ್ಲಿಂ ಹೆಣ್ಣುಮಕ್ಕಳನ್ನು ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆ ಎಂದು ಪರಿಗಣಿಸುವ ಮೂಲಕ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡುತ್ತಿದ್ದು ಅವರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ.

  • ಅರ್ಜಿದಾರರು ತಮ್ಮ ಸ್ಕಾರ್ಫ್ / ಹಿಜಾಬ್ ಅನ್ನು ತೆಗೆದುಹಾಕುವವರೆಗೆ ಮುಸ್ಲಿಂ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸುವ ಮೂಲಕ ಕಾಲೇಜು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ.

  • ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗಲು ಅರ್ಜಿದಾರಳಾದ ತನಗೆ ಅನುಮತಿ ನೀಡಬೇಕು.