Hijab, Supreme Court
Hijab, Supreme Court  
ಸುದ್ದಿಗಳು

[ಹಿಜಾಬ್ ಪ್ರಕರಣ] ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ ತೆಗೆಯುವುದು ಸಹ ಮೂಲಭೂತ ಹಕ್ಕಾಗುತ್ತದೆ: ಸುಪ್ರೀಂ ಕೋರ್ಟ್

Bar & Bench

ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ 19ನೇ ವಿಧಿಯಡಿ ಉಡುಗೆ- ತೊಡುಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ತೆಗೆಯುವುದು ಕೂಡ ಹಕ್ಕಾಗುವ ಅರ್ಹತೆ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅರ್ಜಿದಾರರಿಗೆ ಹೇಳಿತು.

ಹೀಗೆ ಹೇಳುವ ಮೂಲಕ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ಸಂವಿಧಾನದ 19ನೇ ವಿಧಿ ಪ್ರಕಾರ ಬಟ್ಟೆ ಧರಿಸುವ ಹಕ್ಕನ್ನು ತರ್ಕಬದ್ಧವಲ್ಲದ ಅತಿಗೆ ಕೊಂಡೊಯ್ಯಬಹುದೇ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದೇವದತ್‌ ಕಾಮತ್‌ ಅವರನ್ನು ಪ್ರಶ್ನಿಸಿತು.

ಸಂವಿಧಾನದ 19(1) (ಎ) ಅಡಿಯಲ್ಲಿ ಉಡುಗೆ ತೊಡುಗೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ನ 2014ರಲ್ಲಿ ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಕಾಮತ್ ಉಲ್ಲೇಖಿಸಿದ ನಂತರ ನ್ಯಾಯಾಲಯ ಹೀಗೆ ಹೇಳಿತು.

"ನಾವು ಇದನ್ನು ತರ್ಕಬದ್ಧವಲ್ಲದ ವಿಪರೀತಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಬಟ್ಟೆ ಧರಿಸುವ ಹಕ್ಕು ಮೂಲಭೂತ ಹಕ್ಕು ಎಂದು ಹೇಳಿದರೆ ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕಾಗುತ್ತದೆ" ಎಂದು ನ್ಯಾ. ಗುಪ್ತಾ ಹೇಳಿದರು.

ಆಗ ಕಾಮತ್‌ ಅವರು “ಕ್ಲೀಷೆಯ ವಾದಗಳನ್ನು ಮಂಡಿಸಲು ನಾನು ಇಲ್ಲಿ ನಿಂತಿಲ್ಲ. ಶಾಲೆಯಲ್ಲಿ ಯಾರೂ ಬಟ್ಟೆ ತೆಗೆಯುವುದಿಲ್ಲ. ನಾನು ಒಂದು ಅಂಶವನ್ನು ಸಾಬೀತುಪಡಿಸಲು ಹೇಳುತ್ತಿರುವೆ. ”ಎಂದು ಪ್ರತಿಕ್ರಿಯಿಸಿದರು.

"ಬಟ್ಟೆ ಧರಿಸುವ ಹಕ್ಕನ್ನು ಯಾರೂ ನಿರಾಕರಿಸುತ್ತಿಲ್ಲ" ಎಂದು ನ್ಯಾ. ಗುಪ್ತಾ ಹೇಳಿದರು.

"ಈ ಹೆಚ್ಚುವರಿ ಉಡುಪು (ಹಿಜಾಬ್) ಧರಿಸುವುದನ್ನು 19ನೇ ವಿಧಿಯ ಆಧಾರದ ಮೇಲೆ ನಿರ್ಬಂಧಿಸಬಹುದೇ" ಎಂದು ಕಾಮತ್ ಕೇಳಿದರು. ಹಿಜಾಬ್ ಯಾವುದೇ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವುದಿಲ್ಲ ಮತ್ತದು ಯಾವುದೇ ನೈತಿಕತೆಗೆ ವಿರುದ್ಧವಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡರು. ಯಾರೂ ಹುಡುಗಿಯರು ಅದನ್ನು ಧರಿಸುವಂತೆ ಒತ್ತಾಯಿಸುವುದಿಲ್ಲ, ಆದರೆ ಅವರು ಅದನ್ನು ಧರಿಸಿದರೆ ಸರ್ಕಾರ ಇದನ್ನು ನಿಷೇಧಿಸಬಹುದೇ ಎಂದು ಕಾಮತ್‌ ಪ್ರಶ್ನಿಸಿದರು.

ಆಗ ನ್ಯಾ. ಗುಪ್ತಾ "ಯಾರೂ ಅವರಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುತ್ತಿಲ್ಲ ... ಆದರೆ ಶಾಲೆಯಲ್ಲಿ ಮಾತ್ರ" ಎಂದರು.

ನಾಳೆ ಬೆಳಗ್ಗೆ 11.30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.

ಇಂದಿನ ವಾದ ಸರಣಿ

ಅರ್ಜಿದಾರೆ ಆಯೇಷತ್‌ ಶಿಫಾ ಪರ ಹಾಜರಾದ ಹಿರಿಯ ನ್ಯಾಯವಾದಿ ದೇವದತ್‌ ಕಾಮತ್‌, “ಸಂವಿಧಾನದ 19, 21ನೇ ವಿಧಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮಂಜಸ ಸೌಲಭ್ಯ ಒದಗಿಸುವ ಹೊಣೆ ಕುರಿತಂತೆ ರಾಜ್ಯ ಸರ್ಕಾರ ವಿಫಲವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಈ ಪ್ರಕರಣ ಪ್ರಾಥಮಿಕವಾಗಿ ಒಳಗೊಂಡಿದೆ. ನಾನು ಸಮವಸ್ತ್ರದ ವಿಧಿಸುತ್ತಿರುವುದನ್ನು ಪ್ರಶ್ನಿಸುತ್ತಿಲ್ಲ” ಎಂದರು.

ಅಲ್ಲದೆ ಹಿಂದಿನ ವಿಚಾರಣೆ ವೇಳೆ ಮೂಲಭೂತ ಹಕ್ಕುಗಳ ಹೆಸರಿನಲ್ಲಿ ಯಾರಾದರೂ ಜೀನ್ಸ್ ಧರಿಸಬಹುದೇ ಎಂದು ಪೀಠ ಟೀಕಿಸಿತ್ತು. ಇದು ಸಮವಸ್ತ್ರಕ್ಕೆ ಸವಾಲೆಸಯುವ ವಿಷಯವಲ್ಲ ಎಂದು ಅವರು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗುಪ್ತಾ ಅವರು ಹಾಗಲ್ಲದೆ ಹೋದರೆ ಮತ್ತಿನೇನು ಎಂದು ಪ್ರಶ್ನಿಸಿದರು. ಹಿಜಾಬ್ ಎಂಬುದು ಬುರ್ಖಾ ಅಥವಾ ಜಿಲ್ಬಾಬ್ ಅಲ್ಲ ಎಂದು ಆಗ ಕಾಮತ್‌ ಸಮರ್ಥಿಸಿಕೊಂಡರು. ಜೊತೆಗೆ ಸಮಂಜಸ ಒಳಗೊಳ್ಳುವಿಕೆ ತತ್ವವನ್ನು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಅಂಗೀಕರಿಸಿದೆ ಎನ್ನುತ್ತಾ ಬಿಜೋಯ್‌ ಇಮ್ಯಾನ್ಯುಯೆಲ್‌ ಪ್ರಕರಣ ಸೇರಿದಂತೆ ವಿವಿಧ ತೀರ್ಪುಗಳನ್ನು ನ್ಯಾಯಾಲಯಕ್ಕೆ ವಿವರಿಸಿದರು. ರಾಷ್ಟ್ರಗೀತೆ ಕುರಿತಾದ ಬಿಜೋಯ್‌ ಇಮ್ಯಾನ್ಯುಯಲ್‌ ಪ್ರಕರಣ ಹಾಗೂ ಹಿಜಾಬ್‌ ಪ್ರಕರಣ ಬೇರೆ ಎಂದು ನ್ಯಾ. ಧುಲಿಯಾ ಅವರು ಹೇಳಿದರು.

ಈ ಹಂತದಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ಹಿಜಾಬ್ ಧರಿಸಿರುವ ಮಹಿಳಾ ವಕೀಲರೊಬ್ಬರನ್ನು ಸೂಚಿಸುತ್ತಾ ವಕೀಲ ಕಾಮತ್‌ “ದಯವಿಟ್ಟು ಅವರನ್ನು ನೋಡಿ. ಸಮವಸ್ತ್ರದ ಬಣ್ಣದ್ದೇ ಶಿರವಸ್ತ್ರ ಧರಿಸಿದ್ದಾರೆ. ಇದು ಈ ನ್ಯಾಯಾಲಯದ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದೆಯೇ?” ಎಂದು ಪ್ರಶ್ನಿಸಿದರು.

ಆಗ ನ್ಯಾ. ಗುಪ್ತಾ ನೀವು ಅವರನ್ನು ಪ್ರದರ್ಶನಕ್ಕೆ ಒಡ್ಡಿದಿರಿ ಎಂದರು. ಆಗ ಕಾಮತ್‌ “ವಿಚಾರಣೆ ಆರಂಭಕ್ಕೂ ಮುನ್ನವೇ ನಾನವರಿಂದ ಅನುಮತಿ ಪಡೆದಿದ್ದೆ” ಎಂದು ಸಮಜಾಯಿಷಿ ನೀಡಿದರು.

“ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಜಾಬ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಡಿಸಲಾಗಿತ್ತು. ಆಗ ಹೈಕೋರ್ಟ್‌ ರಾಜ್ಯ ಹಾಗೂ ಕೇಂದ್ರ ಭಿನ್ನ ಎಂದಿತ್ತು” ಎಂಬುದಾಗಿ ದೂರಿದರು.

ಅಲ್ಲದೆ ಶಾಲೆಯ ನಿಯಮಗಳಿಗೆ ವಿರುದ್ಧವಾಗಿ ತಮಿಳು ಹಿಂದೂ ಹುಡುಗಿಗೆ ಶಾಲೆಯಲ್ಲಿ ಮೂಗುತಿ ಧರಿಸಲು ಅನುಮತಿ ನೀಡಿದ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ತೀರ್ಪನ್ನು ಕೂಡ ಅವರು ಈ ಸಂದರ್ಭದಲ್ಲಿ ಓದಿದರು.

ದಕ್ಷಿಣ ಆಫ್ರಿಕಾದ ನ್ಯಾಯಾಲಯದ ಪರಿಕಲ್ಪನೆಯಲ್ಲಿ ಘನತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ನ್ಯಾ. ಧುಲಿಯಾ ಅವರು ಹೇಳಿದಾಗ ಕಾಮತ್‌ “ಪುಟ್ಟಸ್ವಾಮಿ ಮತ್ತಿತರ ಪ್ರಕರಣಗಳಲ್ಲಿ ಕೂಡ ನಮ್ಮ ಸುಪ್ರೀಂ ಕೋರ್ಟ್‌ ಇದನ್ನು ಒತ್ತಿ ಹೇಳಿದೆ” ಎಂದರು. ಈ ಹಂತದಲ್ಲಿ ನ್ಯಾ. ಧುಲಿಯಾ “ನಮ್ಮ ದೇಶದಷ್ಟು ವೈವಿಧ್ಯತೆ ಬೇರೆ ಯಾವುದೇ ದೇಶಗಳಲ್ಲಿ ಇಲ್ಲ ಎಂದು ಭಾವಿಸುತ್ತೇನೆ. ಬೇರೆ ದೇಶಗಳು ತಮ್ಮ ನಾಗರಿಕರಿಗೆ ಏಕರೂಪದ ಕಾನೂನು ವಿಧಿಸಿವೆ" ಎಂದರು. ಇದಕ್ಕೆ ಕಾಮತ್‌ ತಮ್ಮ ಸಮ್ಮತಿ ಸೂಚಿಸಿದಾಗ ನ್ಯಾ ಗುಪ್ತಾ ದಕ್ಷಿಣ ಆಫ್ರಿಕಾ ವಿಚಾರ ಸಾಕು ಭಾರತಕ್ಕೆ ಬನ್ನಿ ಎಂದರು.

ಅಮೆರಿಕ, ಕೆನಡಾ, ಇಂಗ್ಲೆಂಡ್‌, ಟರ್ಕಿ, ಫ್ರಾನ್ಸ್‌ ಇತ್ಯಾದಿ ದೇಶಗಳಲ್ಲಿ ಹಿಜಾಬ್‌ ಅಥವಾ ಅಂತಹ ವಸ್ತ್ರ ಧಾರಣೆ ಕುರಿತಂತೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ವಿಚಾರಣೆ ವೇಳೆ ವಕೀಲ ಕಾಮತ್‌ ಪ್ರಸ್ತಾಪಿಸಿದರು. ಜೊತೆಗೆ ಜಾತ್ಯತೀತತೆ ಕುರಿತ ಅರುಣಾ ರಾಯ್‌ ಪ್ರಕರಣ, ಸಾಂವಿಧಾನಿಕ ದೃಷ್ಟಿಕೋನ ಅಂಬೇಡ್ಕರ್‌ ನಿಲುವುಗಳನ್ನು ಕೂಡ ನ್ಯಾಯಾಲಯದಲ್ಲಿ ಅವರು ಮಂಡಿಸಿದರು.

ಹಿಜಾಬ್‌ ನಿಷೇಧ ಕುರಿತಂತೆ ಕರ್ನಾಟಕ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಸಮರ್ಥನೆ ಸರಿಯಲ್ಲ ಎಂದ ಕಾಮತ್‌ ದಕ್ಷಿಣ ಭಾರತದಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹೇಗೆ ಧರಿಸುತ್ತಾರೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಆದರೆ ನ್ಯಾ ಗುಪ್ತಾ ರುದ್ರಾಕ್ಷಿ ಮತ್ತ ಶಿಲುಬೆಗಳು ಅಂಗಿಯ ಒಳಗೆ ಇರಲಿದ್ದು ಅದನ್ನು ಹುಡುಕಲು ಯಾರೂ ನಿಮ್ಮ ಅಂಗಿ ತೆಗೆಯಬೇಕಿಲ್ಲ. ಇದು ಶಾಲೆಯ ಶಿಸ್ತನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾ ಗುಪ್ತಾ ಅಭಿಪ್ರಾಯಪಟ್ಟರು.

ಬಳಿಕ ಚರ್ಚೆ ಜಾತ್ಯತೀತತೆಯ ಕಡೆಗೆ ಹೊರಳಿತು. "ಜಾತ್ಯತೀತತೆ ಎಂಬ ಪದವು ಮೂಲ ಸಂವಿಧಾನ ಇರಲಿಲ್ಲ" ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದರು. "ಆತ್ಮದಲ್ಲಿ ಅದು ಇತ್ತು. ಅದು ಇಡೀ ದಾಖಲೆಯಲ್ಲಿ (ಸಂವಿಧಾನ) ವ್ಯಾಪಿಸಿದೆ," ಎಂದು ಕಾಮತ್ ಸಮರ್ಥಿಸಿಕೊಂಡರು. ಆಗ ನ್ಯಾ. ಗುಪ್ತಾ "ನಾವು ಪದದ ಬಗ್ಗೆ ಹೇಳುತ್ತಿದ್ದೇವೆ. ಅದು ಸದಾ (ಆತ್ಮದಲ್ಲಿ) ಇದ್ದರೂ ಅದನ್ನು ರಾಜಕೀಯ ಹೇಳಿಕೆಯಾಗಿ ಸೇರಿಸಲಾಗಿದೆಯೇ ಎಂಬುದು ನನಗೆ ತಿಳಿದಿಲ್ಲ" ಎಂದರು.

ಈ ಹಂತದಲ್ಲಿ ವಕೀಲ ಕಾಮತ್‌ “ನಾನು (ಕರ್ನಾಟಕ) ಸರ್ಕಾರದ ಆದೇಶ ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎನ್ನುತ್ತೇನೆ. ಏಕೆಂದರೆ ಆದೇಶ ನಿರ್ದಿಷ್ಟವಾಗಿ ಒಂದು ಧಾರ್ಮಿಕ ನಂಬಿಕೆಯ ಗೋಚರ ಅಭಿವ್ಯಕ್ತಿಯನ್ನು ಗುರಿಯಾಗಿಸಿಕೊಡಿದೆ” ಎಂದರು. ಜೊತೆಗೆ ಸ್ವಾತಂತ್ರ್ಯದ ಹಕ್ಕು,ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಒದಗಿಸುವ ಸಂವಿಧಾನದ 19ನೇ ವಿಧಿ 25ನೇ ವಿಧಿಗಳನ್ನು ಅವರು ಪ್ರಸ್ತಾಪಿಸಿದರು.

ಕರ್ನಾಟಕ ಹೈಕೋರ್ಟ್‌ ಹಿಜಾಬ್‌ ನಿಷೇಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ "ನ್ಯಾಯಾಂಗ ಸಂಸ್ಥೆಯಾಗಿ ಹೈಕೋರ್ಟ್ ಇದನ್ನೆಲ್ಲ ಹೇಗೆ ಹೇಳಬಲ್ಲದು? ಹಿಜಾಬ್ ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳುತ್ತದೆ. ಗೌರವದಿಂದ ಹೇಳುವುದಾದರೆ, ಅದು ಅವಳ ಆಯ್ಕೆಯಾಗುತ್ತದೆ. ಇದು ಸಂವಿಧಾನದ 21ನೇ ವಿಧಿಯಡಿಯಲ್ಲಿ ಈ ನ್ಯಾಯಾಲಯವು ರೂಪಿಸಿದ ನಿರ್ಧಾರಾತ್ಮಕ ಸ್ವಾಯತ್ತತೆ ಮತ್ತು ಬೆಳವಣಿಗೆಯ ಆಯಯ್ಕೆ ನ್ಯಾಯಶಾಸ್ತ್ರವನ್ನು ಉಲ್ಲಂಘಿಸುತ್ತದೆ" ಎಂದು ಕಾಮತ್‌ ದೂರಿದರು.