<div class="paragraphs"><p>Karnataka HC and Hijab</p></div>

Karnataka HC and Hijab

 
ಸುದ್ದಿಗಳು

[ಹಿಜಾಬ್‌ ವಿವಾದ] ಮಂಗಳೂರು ವಿವಿ ರಿಜಿಸ್ಟ್ರಾರ್‌, ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿ

Bar & Bench

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ದೇಶನದ ಮೇರೆಗೆ ತಮಗೆ ಕಾಲೇಜಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಆಕ್ಷೇಪಿಸಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮತ್ತು ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಂಶುಪಾಲರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತುರ್ತು ನೋಟಿಸ್‌ ಜಾರಿ ಮಾಡಿದೆ.

ತೃತೀಯ ಬಿಬಿಎ ವಿದ್ಯಾರ್ಥಿ ಸುಹಾ ಮೌಲಾನಾ ಅವರು ತಮ್ಮ ತಾಯಿ ಬೀಬಿ ಸಾರಾ ಮತ್ತು ಪ್ರಥಮ ಬಿಬಿಎ ವಿದ್ಯಾರ್ಥಿನಿ ಐಶಾ ಅಲೀಫಾ ಕೌಸರ್‌ ಅವರು ತಮ್ಮ ತಾಯಿ ರಹಮತ್‌ ಅವರ ಮೂಲಕ ಮನವಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಿತು. ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಲಾಗಿದೆ.

ಮನವಿಯಲ್ಲಿನ ಕೋರಿಗಳು ಇಂತಿವೆ:

1. ಯಾವುದೇ ಷರತ್ತು ಮತ್ತು ನಿರ್ಬಂಧ ವಿಧಿಸದೇ ಅರ್ಜಿದಾರರು ಕಾಲೇಜಿಗೆ ಪ್ರವೇಶ ಮಾಡಲು ಭಂಡಾರ್ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ನಿರ್ದೇಶನ ನೀಡಲು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶಿಸಬೇಕು.

2. ಕಾನೂನಿನ ಯಾವ ನಿಬಂಧನೆಯಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಲೇಜಿನ ಆಡಳಿತದಲ್ಲಿ ಮಧ್ಯಪ್ರವೇಶಿಸಿದ್ದಾರೆ ಎನ್ನುವುದಲ್ಲದೆ ತಮ್ಮ ರಾಜಕೀಯ ಅಜೆಂಡಾವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಿ ಆದೇಶಿಸಬೇಕು.

3. ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ಸನ್ನಿವೇಶದ ಹಿನ್ನೆಲೆಯಲ್ಲಿ ನ್ಯಾಯದಾನ ಹಾಗೂ ಅಂತಃಸಾಕ್ಷಿಯನ್ನು ಎತ್ತಿಹಿಡಿಯುವ ಯಾವುದೇ ಪರಿಹಾರವನ್ನು ನೀಡುವಂತೆ ಕೋರಲಾಗಿದೆ.

ಅಲ್ಲದೆ ಮಧ್ಯಂತರ ಪರಿಹಾರವಾಗಿ, ಅರ್ಜಿದಾರರಿಗೆ ಯಾವುದೇ ಪಕ್ಷಪಾತ, ತಾರತಮ್ಯ ತೋರದೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಭಂಡಾರ್ಕಾರ್ಸ್‌ ಕಾಲೇಜಿಗೆ ಮಂಗಳೂರು ವಿವಿಯ ರಿಜಿಸ್ಟ್ರಾರ್‌ ಅವರು ಸೂಚಿಸುವಂತೆ ನ್ಯಾಯಾಲಯವು ನಿರ್ದೇಶಿಸಬೇಕು. ಶೈಕ್ಷಣಿಕ ಸಿಬ್ಬಂದಿಯ ತಾರತಮ್ಯದಿಂದಾಗಿ ಅರ್ಜಿದಾರರು ಈ ಶೈಕ್ಷಣಿಕ ವರ್ಷದಲ್ಲಿ ತರಗತಿಯಿಂದ ಹೊರಗುಳಿದಿರುವ ದಿನಗಳಿಗೆ ಅಥವಾ ಮನವಿ ಇತ್ಯರ್ಥವಾಗುವವರೆಗೆ ನ್ಯಾಯ ಮತ್ತು ಸಮಾನತೆಯ ದ್ಯೋತಕವಾಗಿ ಹಾಜರಾತಿ ನೀಡಬೇಕು ಎಂದು ಕೋರಲಾಗಿದೆ.

ಕಾಲೇಜಿಗೆ ಪ್ರವೇಶ ಪಡೆದಾಗಿನಿಂದಲೂ ಯಾವುದೇ ವಿವಾದ ಇರಲಿಲ್ಲ. ಫೆಬ್ರವರಿ 3ರಂದು ಏಕಾಏಕಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಯು ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶ ಮಾಡಲಾಗದು. ಈ ಸಂಬಂಧ ಸರ್ಕಾರ ಆದೇಶವಿದೆ ಎಂದು ನಮಗೆ ಕಾಲೇಜಿಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದ್ದಾರೆ.

ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ವಿದ್ಯಾರ್ಥಿಗಳ ಪೋಷಕರು ಭೇಟಿ ಮಾಡಿ ಪ್ರಶ್ನಿಸಿದಾಗ ಶಾಸಕ ಶ್ರೀನಿವಾಸ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪ್ರಾಂಶುಪಾಲರು ಹೇಳಿದ್ದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಖ್ಯಾತ ಶಿಕ್ಷಣ ತಜ್ಞ ಟಿ ಎಂ ಪೈ ಅವರು ಬಹ್ರೈನ್‌ನಲ್ಲಿ ವೈದ್ಯರಾಗಿದ್ದ ಡಾ. ಎ ಎಸ್‌ ಭಂಡಾರ್ಕರ್‌ ಅವರಿಂದ 2 ಲಕ್ಷ ರೂಪಾಯಿ ದೇಣಿಗೆ ಪಡೆದು ಭಂಡಾರ್ಕರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜನ್ನು ಆರಂಭಿಸಿದ್ದು, ಇದುವರೆಗೆ ಇಲ್ಲಿ ಯಾವುದೇ ವಿವಾದವಿರಲಿಲ್ಲ. ಎಲ್ಲರೂ ಸೌಹಾರ್ದದಿಂದ ನಡೆದುಕೊಳ್ಳುತ್ತಿದ್ದರು ಎಂದು ವಿವರಿಸಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆ ಅಡಿ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ಮಾಡಲಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.