ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಮತ್ತು ತನ್ನ ಧಾರ್ಮಿಕ ಆಚರಣೆ ಪಾಲಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರ್ಥಿನಿಯೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಬುಧವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ವಿದ್ಯಾರ್ಥಿನಿ ರೇಶಮ್ ಫಾರೂಕ್ ಅವರು ವಕೀಲ ಶತಭಿಷ್ ಶಿವಣ್ಣ ಅವರ ಮೂಲಕ ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರ, ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಉಡುಪಿ ಜಿಲ್ಲಾಧಿಕಾರಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರನ್ನು ಕ್ರಮವಾಗಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಮೂಲಭೂತ ಹಕ್ಕಿನ ಪೈಕಿ ತನ್ನ ಧರ್ಮದ ಆಚರಣೆಯಾದ ಹಿಜಾಬ್ ಧರಿಸುವುದು ಮತ್ತು ಅದನ್ನು ಧರಿಸಿ ಕಾಲೇಜಿಗೆ ಪ್ರವೇಶಿಸುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಂತೆ ಕಾಲೇಜಿನ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು. ತನ್ನ ಧಾರ್ಮಿಕ ನಂಬಿಕೆಯ ಭಾಗವಾದ ಹಿಜಾಬ್ ಧರಿಸಲು ಮತ್ತು ಕಾಲೇಜಿಗೆ ಪ್ರವೇಶಿಸಲು ಅವಕಾಶ ಮಾಡುವಂತೆ ಕಾಲೇಜಿಗೆ ಆದೇಶ ನೀಡಬೇಕು. ಸಂವಿಧಾನದ 14 ಮತ್ತು 25ನೇ ವಿಧಿಯಡಿ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ವಿದ್ಯಾರ್ಥಿಯು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿ ಇತ್ಯರ್ಥವಾಗುವವರೆಗೆ ತಾನು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸುವುದಕ್ಕೆ ಯಾವುದೇ ತೆರನಾದ ನಿರ್ಬಂಧ ವಿಧಿಸದಂತೆ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶಿಸುವ ಮೂಲಕ ಮಧ್ಯಂತರ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ತಾನು ಹಿಜಾಬ್ ಧರಿಸಿ, ಕಾಲೇಜು ಪ್ರವೇಶಿಸಲು ಕಾಲೇಜು ಆಡಳಿಯ ಮಂಡಳಿಯು ನಿರ್ಬಂಧ ವಿಧಿಸಿದೆ. ಈ ಸಂಬಂಧ ಹಲವು ಮನವಿಗಳನ್ನು ಆಡಳಿತ ಮಂಡಳಿಗೆ ನೀಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.