Justice GR Swaminathan (L), Madurai Bench of Madras High Court (R)  
ಸುದ್ದಿಗಳು

ಗಣಿಗಾರಿಕೆ, ಮದ್ರಾಸ್ ಹೈಕೋರ್ಟ್ ಹಾಗೂ ಟಿ ಎಂ ಕೃಷ್ಣರ ʼಭೂಮಿಗೀತʼ…

ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವೊಂದರ ಕುರಿತು ತೀರ್ಪು ನೀಡುವ ವೇಳೆ ನ್ಯಾಯಮೂರ್ತಿಗಳು ವಿವಿಧ ಕ್ಷೇತ್ರಗಳ ದಿಗ್ಗಜರ ಮಾತು- ಕೃತಿಗಳನ್ನು ನೆನೆದರು.

Ramesh DK

ಎಲ್ಲಿಯ ʼಗಣಿಗಾರಿಕೆʼ ಎಲ್ಲಿಯ ʼಹಾಡುಗಾರಿಕೆʼ ಎಂದು ಹುಬ್ಬೇರಿಸುವ ಹೊತ್ತಿಗೆ ಈ ಸುದ್ದಿ ನಮ್ಮ ʼಹೃದಯ ತಂತಿʼಯನ್ನು ಮೀಟುತ್ತದೆ. ನಿಸರ್ಗಕ್ಕೆ ಮನುಜ ಮಾಡಿದ ಗಾಯಗಳಿಗೆ ನಾದದ, ಅರಿವಿನ ಮುಲಾಮು ಹಚ್ಚುತ್ತದೆ. ಇದು ನಡೆದಿರುವುದು ಮದ್ರಾಸ್‌ ಹೈಕೋರ್ಟ್‌ನಲ್ಲಿ.

ʼಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರದಿದ್ದರೆ ಬೆಟ್ಟ, ಗುಡಗಾಡುಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮನಸೋಇಚ್ಛೆಯಾಗಿ ಗಣಿಗಾರಿಕೆಗೆ ನೀಡಲು ಸಾಧ್ಯವಿಲ್ಲʼ ಎಂದು ಮದ್ರಾಸ್‌ ಉಚ್ಚ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತು. ಕಾನೂನುಬದ್ಧ ನಿಯಮಗಳಿಗೆ ಅನುಗುಣವಾಗಿ ಗಣಿಗಾರಿಕೆ ಪರವಾನಗಿಗಳನ್ನು ನೀಡಲಾಗಿದ್ದರೂ ಗಣಿಗಾರಿಕೆ ಚಟುವಟಿಕೆಗಳನ್ನು ನ್ಯಾಯಾಂಗ ಪರಿಶೀಲನೆಯಿಂದ ಮುಕ್ತಗೊಳಿಸಲು ಬರುವುದಿಲ್ಲ ಎಂದು ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ಸ್ಪಷ್ಟಪಡಿಸಿದರು.

ಈ ವೇಳೆ ನ್ಯಾಯಮೂರ್ತಿಗಳು ಪರಿಸರ ಉಳಿವು ಕುರಿತು ಆಡಿದ ಮಾತು ಗಮನಾರ್ಹವಾಗಿತ್ತು. “ನ್ಯಾಯಾಧೀಶರು ಏನು ನಡೆಯುತ್ತಿದೆ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು. ಅವರ ಒಳಗಿನ ಆಂಟೆನಾಗಳು ಸಂಕೇತಗಳನ್ನು ಗ್ರಹಿಸಬೇಕು. ಅಂತಹ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಮತ್ತು ಈ ತೀರ್ಪು ನೀಡುವ ಮೊದಲು ನಾನು ಟಿ ಎಂ ಕೃಷ್ಣ ಅವರ ʼಪೊರಂಬೋಕು ಪಾದಲ್‌ʼ ಆಲಿಸಿದೆ. ಪಟ್ಟಾಗಳನ್ನು ನೀಡುವ ಮೂಲಕ ಜಲಮೂಲಗಳ ಅತಿಕ್ರಮಣವನ್ನು ತಡೆಯಬಹುದಾದರೂ ನಿಸರ್ಗ ಇದನ್ನು ಗಮನಿಸದು ಎಂಬ ನಿತ್ಯಾನಂದ್‌ ಜಯರಾಮನ್‌ ಅವರ ಮಾತುಗಳನ್ನು ನೆನೆದೆ. ಪ್ರಕೃತಿಯನ್ನು ಹಾಲು ನೀಡುವ ಹಸುಗಳಂತೆ ನಾವು ಪರಿಗಣಿಸಬೇಕು. ಅದರಿಂದ ಹಾಲು ಕರೆಯಬೇಕೇ ವಿನಾ ಅವುಗಳನ್ನು ವಧಿಸಬಾರದು ಎಂಬುದು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಮಾತೆಂದು ಕಾಣುತ್ತದೆ. ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನಿಭಾಯಿಸುವ ಪ್ರಕೃತಿಯ ಸಾಮರ್ಥ್ಯ ಅಗಾಧವಾದುದು" ಎಂದು ಅವರು ಹೇಳಿದರು.

ಟಿ ಎಂ ಕೃಷ್ಣ ಕರ್ನಾಟಕ ಸಂಗೀತದ ಬಹುದೊಡ್ಡ ಪ್ರತಿಭೆ. ಶಾಸ್ತ್ರೀಯ ಸಂಗೀತವನ್ನು ಸಮಕಾಲೀನತೆಯೊಟ್ಟಿಗೆ ತೂಗಿ ನೋಡುತ್ತ ಹಲವು ಪ್ರಯೋಗಗಳನ್ನು ಮಾಡಿದವರು. ಅವರ ʼಪೊರಂಬೋಕು ಪಾದಲ್‌ʼ (Poromboke Paadal) ಪ್ರಕೃತಿಯ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಒಂದು ವೀಡಿಯೊ ಆಲ್ಪಂ. ಟಿ ಎಂ ಕೃಷ್ಣ ನೀರಿನ ಸೆಲೆಯೊಂದರ ಬಳಿ ಕುಳಿತು ಶಾಸ್ತ್ರೀಯ ಧಾಟಿಯಲ್ಲಿ ಈ ಹಾಡು ಹಾಡುತ್ತಾರೆ. ವೀಡಿಯೊದ ಹಿನ್ನೆಲೆಯಲ್ಲಿ ರಕ್ಕಸ ಗಾತ್ರದ ಯಂತ್ರಗಳು ಭೂಮಿಯನ್ನು ಅಗೆಯುತ್ತಿರುವುದು, ಅಗಾಧ ಗಾತ್ರದ ಪೈಪ್‌ಗಳು ನೆಲವನ್ನು ಅಪ್ಪಿರುವುದು ಮಾರ್ಮಿಕವಾಗಿ ಕಾಣುತ್ತದೆ. ʼಪೊರೊಂಬೋಕುʼ ಎಂಬುದು ಹಳೆಯ ತಮಿಳು ಪದ. ಪೊರೊಂಬೋಕು ಎಂದರೆ ತೆರಿಗೆಗಾಗಿ ಲೆಕ್ಕಹಾಕಲಾಗದ ಭೂಮಿ ಎಂದರ್ಥ. ಪೊರಂ ಎಂದರೆ ಹೊರತಾದದ್ದು ಪೋಕ್‌ ಎಂದರೆ ʼಆದಾಯದ ದಾಖಲೆʼ ಎಂಬರ್ಥವಿದೆ. ವಿಶಾಲ ಅರ್ಥದಲ್ಲಿ ಸಮುದಾಯ ಸಂಪನ್ಮೂಲಗಳಾದ ನೀರಿನ ಸೆಲೆಗಳು, ಸಮುದ್ರ ತೀರ ಹಾಗೂ ಗೋಮಾಳದಂತಹ ಜಾಗಗಳನ್ನು ತೆರಿಗೆ ಕಾರಣಕ್ಕಾಗಿ ಲೆಕ್ಕ ಹಾಕಲಾಗದು ಎನ್ನುವ ಅರ್ಥ ಹೊಮ್ಮಿಸುತ್ತದೆ ಈ ಪದ. ಅಲ್ಲದೆ ನಿಷ್ಪ್ರಯೋಜಕ ಜನ ಅಥವಾ ಸ್ಥಳಗಳನ್ನು ಉಲ್ಲೇಖಿಸಲು ಉಪಯೋಗಿಸುವ ನಿಮ್ನ ಅರ್ಥವೂ ಇದಕ್ಕಿದೆ ಎನ್ನುತ್ತವೆ ಮಾಹಿತಿ ಮೂಲಗಳು. ಅಂದಹಾಗೆ ಹಾಡು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಇನ್ನು ನಿತ್ಯಾನಂದ್‌ ಜಯರಾಮನ್‌ ಅವರು ಚೆನ್ನೈ ಮೂಲದ ಲೇಖಕ ಸಂಶೋಧಕ. ಪ್ರಕೃತಿ ಸಂರಕ್ಷಣೆ ಕುರಿತು ಆಳವಾಗಿ ತೊಡಗಿಕೊಂಡವರು. ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ರಾಜಕಾರಣಿ ಹಾಗೂ ಚಿಂತಕರು.

ನಿಯಮ ಉಲ್ಲಂಘಿಸಿ ತಮಿಳುನಾಡಿನ ತಿರುಪ್ಪಣಿ ಎಂಬಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕೆ ಸಂತಾನಂ ಮತ್ತು ಕೆ ಶಬರಿಮಲೈ ಎಂಬ ಸಹೋದರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾ. ಸ್ವಾಮಿನಾಥನ್‌ ಈ ಅಭಿಪ್ರಾಯ ವ್ಯಕ್ತಪಡಿಸಿದರು.

"ಮಧುರೈ ಪ್ರದೇಶದಲ್ಲಿ, 2000ರಿಂದ 2010ರವರೆಗಿನ ಒಂದು ದಶಕದ ಅವಧಿಯಲ್ಲಿ ಇಂತಹ ಅನೇಕ ಗುಡ್ಡಗಾಡುಗಳು ಸಂಪೂರ್ಣ ನಾಶವಾಗಿವೆ. ನಾವು ತೋರಿಕೆಗೆ ಮಾತ್ರ ಕಾಳಜಿ ವಹಿಸಿದರೆ ಪರಿಸರ ನಾಶ ಕಣ್ಣಿಗೆ ರಾಚುತ್ತದೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಎದುರಿಗೆ ಸರಿಯಾಗಿ ಯಾನೈಮಲೈ ಎಂಬ ಬೆಟ್ಟವಿದೆ. ಇಲ್ಲಿ ಭಗವಾನ್ ನರಸಿಂಹನಿಗೆ ಸೇರಿದ ದೇಗುಲವಿದೆ. ಬೆಟ್ಟವು ಜೈನ ಸನ್ಯಾಸಿಗಳ ವಾಸಸ್ಥಾನವಾಗಿತ್ತು. 2008 ರಲ್ಲಿ, ಬೆಟ್ಟವನ್ನು ಗಣಿಗಾರಿಕೆ ಮಾಫಿಯಾಕ್ಕೆ ಹಸ್ತಾಂತರಿಸಲಾಗುವುದು ಎಂಬ ವದಂತಿ ಹಬ್ಬಿತ್ತು. ಇದರಿಂದ ಕೋಲಾಹಲ ಉಂಟಾಗಿ ಪ್ರಸ್ತಾಪ ಕೈಬಿಡಲಾಯಿತು” ಎಂದು ಕೂಡ ನ್ಯಾಯಾಲಯ ಸ್ಮರಿಸಿತು.

ಕೆಲ ಸಂದರ್ಭಗಳಲ್ಲಿ ಗುಡ್ಡಗಾಡುಗಳನ್ನು ಅಗೆಯಲು ಅನುಮತಿಸಬಹುದಾದರೂ ಹಾಗೆ ಅಗೆದಾದ ಮೇಲೆ ಬೆಟ್ಟ ಇನ್ನೂ ಉಳಿದಿರಬೇಕು ಎಂದು ಪೀಠ ಹೇಳಿತು. ಪರಿಸರ ಕಾನೂನಿಗೆ ಸಂಬಂಧಿಸಿದ ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿತು. ಪ್ರಸ್ತುತ ಪ್ರಕರಣದಲ್ಲಿ ಮಿತಿ ಮೀರಿ ಗಣಿಗಾರಿಕೆ ನಡೆದಿರುವುದರಿಂದ ಕ್ವಾರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಗುತ್ತಿಗೆದಾರರು ಗಣಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಉಳಿದ ಗುತ್ತಿಗೆ ಮೊತ್ತವನ್ನು ಅಧಿಕಾರಿಗಳಿಂದ ಹಿಂಪಡೆಯಲು ಗುತ್ತಿಗೆದಾರರಿಗೆ ನ್ಯಾಯಾಲಯ ಅನುಮತಿ ನೀಡಿತು.

ಅರ್ಜಿದಾರರ ಪರವಾಗಿ ವಕೀಲ ವಿ ಮಲೈಯೇಂದ್ರನ್‌ ವಾದಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ಎಂ ರಾಜೇಶ್ವರಿ ಹಾಗೂ ಗುತ್ತಿಗೆದಾರರ ಪರವಾಗಿ ವಕೀಲ ಎಚ್‌ ಆರ್ಮುಗಂ ಹಾಜರಿದ್ದರು.