ದೇಶದಲ್ಲಿ ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ ಅಡಿಯಲ್ಲಿ ಮೊದಲ ಮಧ್ಯಂತರ ಜಾಮೀನನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಗುರುವಾರ ನೀಡಿದೆ.
ಭಾರತೀಯ ನ್ಯಾಯ ಸಂಹಿತೆಯಡಿ ಹೈಕೋರ್ಟ್ ನೀಡಿದ ಮೊದಲ ಆದೇಶ ಇದಾಗಿದೆ. ಆರೋಪಿ ಬಲದೇವ್ ಸಿಂಗ್ ವಿರುದ್ಧ ಜುಲೈ 01ರಂದು ಕಂಗ್ರಾ ಜಿಲ್ಲೆಯ ಜವಾಲಾಮುಖಿ ಪೊಲೀಸ್ ಠಾಣೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 352 (ಶಾಂತಿಗೆ ಭಂಗ ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಸೆಕ್ಷನ್ 3(1)(ಆರ್) ಮತ್ತು ಸೆಕ್ಷನ್ 3(1)(ಎಸ್) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ [ಬಲದೇವ್ ಸಿಂಗ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಪ್ರಕರಣಕ್ಕೆ ಸಂಬಂಧಿಸಿದಂತೆ ಬಲದೇವ್ ಸಿಂಗ್ ತಮ್ಮ ವಕೀಲರ ಸಮ್ಮುಖದಲ್ಲಿ ಜುಲೈ 4 ರಂದು ಖುದ್ದು ಹೈಕೋರ್ಟ್‌ಗೆ ಶರಣಾಗಿದ್ದರು. ಅಪರಾಧದ ಸ್ವರೂಪವನ್ನು ಪರಿಗಣಿಸಿದ ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಅವರು ₹ 25,000 ಮೊತ್ತದ ವೈಯಕ್ತಿಕ ಬಾಂಡ್ ನೀಡುವಂತೆ ಸೂಚಿಸಿ ಮಧ್ಯಂತರ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಿದರು. ಪ್ರಕರಣದ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.