ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಘನತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. [ಸುಲೇಮಾನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ರಾಜ್ಯದಲ್ಲಿ ಘನತ್ಯಾಜ್ಯ ನಿರ್ವಹಣಾ ಸೇವೆ ಸುಸ್ಥಿರಗೊಳಿಸುವುದಕ್ಕಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಂತಹ ಶುಲ್ಕ ವಿಧಿಸುವುದು ಅತ್ಯಗತ್ಯ ಎಂದು ನ್ಯಾಯಾಲಯ ತರ್ಕಿಸಿತು.
ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕ ಪಾವತಿಸಲು ಭೂತಾನ್‌ನಲ್ಲಿರುವ ವಿಧಾನವನ್ನು ಹಿಮಾಚಲ ಪ್ರದೇಶದಲ್ಲಿಯೂ ಅಳವಡಿಸಬೇಕು ಎಂದು ನ್ಯಾಯಮೂರ್ತಿಗಳಾದ ತರ್ಲೋಕ್ ಸಿಂಗ್ ಚೌಹಾಣ್ ಹಾಗೂ ಸುಶೀಲ್ ಕುಕ್ರೇಜಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಘನತ್ಯಾಜ್ಯ ನಿರ್ವಹಣಾ ಸೇವೆಗಳನ್ನು ಸುಸ್ಥಿರವಾಗಿಸಲು ಪ್ರವಾಸಿ ಸ್ಥಳಗಳ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ಘನತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಪ್ರತಿಯೊಬ್ಬ ಪ್ರವಾಸಿಗನಿಗೆ ಸುಸ್ಥಿರ ಅಭಿವೃದ್ಧಿ ಶುಲ್ಕ ವಿಧಿಸುವ ಭೂತಾನ್ ಸರ್ಕಾರದ ಉದಾಹರಣೆಯನ್ನು ಸರ್ಕಾರ ಗಮನಿಸಬಹುದು ಎಂದು ಅದು ವಿವರಿಸಿದೆ.
ರಾಜ್ಯದಲ್ಲಿ ಪರಿಸರ ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಮಾರ್ಚ್ 23 ರಂದು ಹೊರಡಿಸಿದ ಆದೇಶದಲ್ಲಿ, ಶಿಮ್ಲಾವನ್ನು ಮಾದರಿ ಪಟ್ಟಣವನ್ನಾಗಿ ಮಾಡುವುದು ತನ್ನ ಪ್ರಯತ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪರಿಸರ ಕಾನೂನುಗಳ, ವಿಶೇಷವಾಗಿ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಅಥವಾ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಾವಳಿ ಜಾರಿಗೊಳಿಸಲು ಪುರಸಭೆಯ ಅಧಿಕಾರಿಗಳಿಗೆ ಅಧಿಕಾರ ನೀಡುವ ಹಿಮಾಚಲ ಪುರಸಭೆ ಕಾಯಿದೆ ನಿಯಮಾವಳಿ ಮತ್ತು ಬೈಲಾಗಳಿಗೆ ತಿದ್ದುಪಡಿ ತರುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು. ಈ ಮಧ್ಯೆ, ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಜಾರಿಗೆ ತರುವಂತೆ ನ್ಯಾಯಾಲಯ ಪುರಸಭೆ ಅಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿತು.
ಪರಿಸರ ಕಾನೂನುಗಳಿಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರುಗಳಿಗೆ ಸಾಕಷ್ಟು ತರಬೇತಿಯ ಕೊರತೆ ಇರುವುದನ್ನು ಗಮನಿಸಿರುವ ನ್ಯಾಯಾಲಯ ಪುರಸಭೆಯ ಕಾನೂನುಗಳು ಮತ್ತು ಪರಿಸರ ಕಾನೂನುಗಳ ಬಗ್ಗೆ ಕೋರ್ಸ್ ನಡೆಸುವಂತೆ ಶಿಮ್ಲಾದ ಹಿಮಾಚಲ ಪ್ರದೇಶ ಸಾರ್ವಜನಿಕ ಆಡಳಿತ ಸಂಸ್ಥೆಗೆ ನಿರ್ದೇಶನ ನೀಡುವುದು ಸೂಕ್ತ ಎಂದಿತು.
ಪುರಸಭೆಯ ಅಧಿಕಾರಿಗಳಿಗೆ ಸಾಕಷ್ಟು ಮಾನವ ಸಂಪನ್ಮೂಲ ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಹಣಕಾಸಿನ ಕೊರತೆ ಇದೆ ಎಂಬುದು ನೆಪವಾಗುವಂತಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.
ಜೊತೆಗೆ ಶಿಮ್ಲಾದಲ್ಲಿ ತ್ಯಾಜ್ಯದ ಪ್ರಮಾಣ ಎಷ್ಟಿದೆ ಎಂದು ಸಾಧ್ಯವಾದಷ್ಟು ತ್ವರಿತವಾಗಿ ಲೆಕ್ಕ ಹಾಕುವಂತೆ ಅದು ಇಂಟಿಗ್ರೇಟೆಡ್ ಮೌಂಟೇನ್ ಇನಿಶಿಯೇಟಿವ್ ಸೊಸೈಟಿಗೆ ಅದು ಸೂಚಿಸಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]