SEBI
SEBI 
ಸುದ್ದಿಗಳು

ಅದಾನಿ ವಿರುದ್ಧ ಹಿಂಡೆನ್‌ಬರ್ಗ್‌ ವರದಿ: ತನಿಖೆ ಪೂರ್ಣಕ್ಕೆ 6 ತಿಂಗಳು ಕಾಲಾವಕಾಶ ವಿಸ್ತರಣೆಗೆ ಸುಪ್ರೀಂಗೆ ಸೆಬಿ ಮನವಿ

Bar & Bench

ಅದಾನಿ ಸಮೂಹದ ವಿರುದ್ಧದ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಿಂದ ಎದ್ದಿರುವ ವಿವಾದದ ಕುರಿತು ತನಿಖೆ ನಡೆಸಲು ಆರು ತಿಂಗಳು ಕಾಲಾವಕಾಶ ವಿಸ್ತರಿಸಲು ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ವಿಶಾಲ್‌ ತಿವಾರಿ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು].

ತನಿಖೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ ಸೆಬಿಗೆ ಮಾರ್ಚ್‌ 2ರಂದು ಅನುಮತಿಸಿದ್ದು, ಅದು ಮೇ 2ರಂದು ಪೂರ್ಣಗೊಳ್ಳಬೇಕಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿಯ ತನಿಖೆಯ ಜೊತೆಗೆ ಸೆಬಿಯ ತನಿಖೆಗೂ ಸಹ ಆದೇಶಿಸಲಾಗಿದೆ.

ತನಿಖೆ ಪೂರ್ಣಗೊಳಿಸಲು ಇನ್ನೂ ಆರು ತಿಂಗಳು ಕಾಲಾವಕಾಶದ ಅಗತ್ಯವಿದೆ ಎಂದು ಶನಿವಾರ ಸೆಬಿ ಅರ್ಜಿ ಸಲ್ಲಿಸಿದೆ. ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಹಾಗೂ ತನಿಖೆಯ ವೇಳೆ ಯಾವೆಲ್ಲ ವಿಚಾರಗಳು ಪತ್ತೆಯಾಗಿವೆ ಎನ್ನುವ ಬಗ್ಗೆ, ಸದ್ಯದ ಸ್ಥಿತಿಗತಿಯ ಬಗ್ಗೆ ತಜ್ಞರ ಸಮಿತಿಗೆ ಮಾಹಿತಿ ನೀಡಲಾಗಿದೆ ಎಂದು ಸೆಬಿ ತಿಳಿಸಿದೆ.

ಹಿಂಡೆನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಿರುವ 12 ಅನುಮಾನಾಸ್ಪದ ವರ್ಗಾವಣೆಗಳ ಕುರಿತು ವ್ಯಾಪಕ ತನಿಖೆ ನಡೆಸುವ ಅಗತ್ಯವಿದೆ. ಏಕೆಂದರೆ ಆ ವರ್ಗಾವಣೆಗಳು ಸಂಕೀರ್ಣವಾಗಿದ್ದು, ಅಲ್ಲಿಂದ ಹಲವು ಉಪ ವರ್ಗಾವಣೆ ಮಾಡಲಾಗಿದೆ ಎಂದು ಸೆಬಿ ತನ್ನ ಅರ್ಜಿಯಲ್ಲಿ ಹೇಳಿದೆ.

ಹಣ ವರ್ಗಾವಣೆಯ ಕುರಿತಾದ ತನಿಖೆಗಾಗಿ ದೇಶೀಯ ಮತ್ತು ವಿದೇಶಿಯ ಬ್ಯಾಂಕ್‌ಗಳಲ್ಲಿನ ಜಮಾ ಖರ್ಚು (ಸ್ಟೇಟ್‌ಮೆಂಟ್‌) ಪಡೆದುಕೊಳ್ಳಬೇಕಿದೆ. ಇದರಲ್ಲಿ ಹತ್ತು ವರ್ಷಗಳಿಗೂ ಹಳೆಯದಾದ ಜಮಾ ಖರ್ಚುಗಳ ವಿವರ ಪಡೆಯಬೇಕಿದ್ದು, ಇದಕ್ಕೆ ಕಾಲಾವಕಾಶ ಬೇಕಿದ್ದು, ಸವಾಲಿನಿಂದ ಕೂಡಿದ ಕೆಲಸವಾಗಿದೆ. ಸಾಮಾನ್ಯ ಪ್ರಕ್ರಿಯೆಯಲ್ಲಿ ಇಷ್ಟೆಲ್ಲಾ ತನಿಖೆಗೆ ಸುಮಾರು 15 ತಿಂಗಳು ಹಿಡಿಯುತ್ತದೆ. ಆದರೆ, ಇದೆಲ್ಲವನ್ನೂ 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸೆಬಿ ತಿಳಿಸಿದೆ.