ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಸುತ್ತಲಿನ ವಿವಾದ ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ರಚಿಸಿದೆ.
ನ್ಯಾ. ಸಪ್ರೆ ಅವರಲ್ಲದೆ ಒ ಪಿ ಭಟ್, ನ್ಯಾ. ಜೆ ಪಿ ದೇವದತ್, ಕೆ ವಿ ಕಾಮತ್, ನಂದನ್ ನಿಲೇಕಣಿ ಹಾಗೂ ಸೋಮಶೇಖರ್ ಸುಂದರೇಶನ್ ಅವರೂ ಸಮಿತಿಯಲ್ಲಿರಲಿದ್ದಾರೆ.
ಸಮಿತಿಯು ಈ ಕೆಳಗಿನ ಅಂಶಗಳನ್ನು ಪರಿಶೀಲಿಸುತ್ತದೆ:
1. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಕಾರಣ ಸೇರಿದಂತೆ ಪರಿಸ್ಥಿತಿಯ ಒಟ್ಟಾರೆ ಮೌಲ್ಯಮಾಪನ ಮಾಡುವುದು.
2. ಹೂಡಿಕೆದಾರರ ಜಾಗೃತಿ ಬಲಪಡಿಸುವ ಕ್ರಮಗಳನ್ನು ತಿಳಿಸುವುದು.
3. ಅದಾನಿ ಸಮೂಹ ಮತ್ತಿತರ ಕಂಪೆನಿಗಳ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮಾಡಿದ್ದಾರೆನ್ನಲಾದ ಕಾನೂನು ಉಲ್ಲಂಘನೆ ಬಗ್ಗೆ ವ್ಯವಹರಿಸುವಾಗ ನಿಯಂತ್ರಕ ವೈಫಲ್ಯ ಉಂಟಾಗಿದೆಯೇ ಎಂಬುದನ್ನು ತನಿಖೆ ಮಾಡುವುದು.
4. ಶಾಸನಬದ್ಧ ಮತ್ತು ನಿಯಂತ್ರಕ ಚೌಕಟ್ಟನ್ನು ಬಲಪಡಿಸಲು ಮತ್ತು ಹೂಡಿಕೆದಾರರ ರಕ್ಷಣೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಿಯಮಗಳ ಸುರಕ್ಷಿತ ಪಾಲನೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದು.
ಸಮಿತಿ 2 ತಿಂಗಳೊಳಗೆ ವರದಿ ತಯಾರಿಸಿ ಅದನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಈಗಾಗಲೇ ಈ ವಿಚಾರವಾಗಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಮುಂದುವರಿದಿದೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠಕ್ಕೆ ತಿಳಿಸಲಾಯಿತು.
ಈ ವೇಳೆ ಪೀಠವು, ಸೆಬಿಯು ತನ್ನ ತನಿಖೆಯ ಭಾಗವಾಗಿ ಕನಿಷ್ಠ ಸಾರ್ವಜನಿಕ ಷೇರುದಾರರ ನಿರ್ವಹಣೆಗೆ ಸಂಬಂಧಿಸಿದ ಷೇರು (ಕಾಂಟ್ರಾಕ್ಟ್) ನಿಯಂತ್ರಣ ನಿಯಮಾವಳಿ 19 ಎಯ ಉಲ್ಲಂಘನೆಯಾಗಿದೆಯೇ, ಜೊತೆಗೆ ವಹಿವಾಟುಗಳನ್ನು ಬಹಿರಂಗಪಡಿಸಲು ವಿಫಲವಾಗಿದೆಯೇ ಮತ್ತು ಸಂಬಂಧಪಟ್ಟ ಪಕ್ಷಕಾರರ ಮಾಹಿತಿ ಮತ್ತು ಷೇರುಬೆಲೆಗಳನ್ನು ತಿರುಚಲಾಗಿದೆಯೇ ಎಂಬುದನ್ನೂ ತನಿಖೆ ನಡೆಸಬೇಕು ಎಂದು ಹೇಳಿತು.
ಸೆಬಿ ತನಿಖೆಯ ಪ್ರಗತಿಯನ್ನು ತನಗೆ ಮತ್ತು ತಜ್ಞರ ಸಮಿತಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಸಮಿತಿಯನ್ನು ರಚಿಸುವುದರಿಂದ ಸೆಬಿಯ ಸ್ವಾತಂತ್ರ್ಯ ಮತ್ತು ಅದರ ತನಿಖಾ ಪ್ರಕ್ರಿಯೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
ಎರಡು ತಿಂಗಳೊಳಗೆ ಸೆಬಿ ತನ್ನ ತನಿಖೆ ಪೂರ್ಣಗೊಳಿಸಿರಬೇಕು ಎಂದಿರುವ ನ್ಯಾಯಾಲಯ ಇದಲ್ಲದೆ, ತಾನು ನೀಡಿರುವ ನಿರ್ದೇಶನಗಳ ಅನುಸಾರ ಸೆಬಿಯು ತನಿಖೆ ಮುಂದುವರಿಸುವಾಗ ತೆಗೆದುಕೊಳ್ಳುವ ಕ್ರಮಗಳ ಕುರಿತು ಪರಿಣಿತ ಸಮಿತಿಯ ಗಮನಕ್ಕೆ ತರಲು ಸಹ ಸೂಚಿಸಿದೆ.