ಭಾರತದ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ವಕ್ಫ್ (ತಿದ್ದುಪಡಿ) ಕಾಯಿದೆ- 2025 ಧಕ್ಕೆ ತರುತ್ತದೆ ಎಂದು ದೂರಿ ಕೇರಳ ಮೂಲದ ಹಿಂದೂ ಸಂಘಟನೆ ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸಂತ, ತತ್ವಜ್ಞಾನಿ ಶ್ರೀ ನಾರಾಯಣ ಗುರುಗಳ ಮೌಲ್ಯಗಳು ಮತ್ತು ಬೋಧನೆಗಳ ಅಧ್ಯಯನ ಮತ್ತು ಪ್ರಸಾರಕ್ಕಾಗಿ 2023ರಲ್ಲಿ ಸ್ಥಾಪಿಸಲಾದ ಟ್ರಸ್ಟ್, ತಿದ್ದುಪಡಿ ಮಾಡಿದ ವಕ್ಫ್ ಕಾಯಿದೆಯನ್ನು ಪ್ರಶ್ನಿಸುವ ಅರ್ಜಿಗಳ ಗುಂಪಿನಲ್ಲಿ ಮಧ್ಯಪ್ರವೇಶ ಕೋರಿದೆ.
"ಎಲ್ಲಾ ವ್ಯಕ್ತಿಗಳು ಮತ್ತು ಸಮುದಾಯಗಳ ಯೋಗಕ್ಷೇಮದ ಪರಸ್ಪರ ಅವಲಂಬಿತ ಸ್ವರೂಪದ ಬಗ್ಗೆ ಶ್ರೀ ನಾರಾಯಣ ಗುರುಗಳ ಬೋಧನೆಯನ್ನು ಗಮನಿಸಿದರೆ, ಭಾರತದ ಮುಸ್ಲಿಂ ಸಮುದಾಯದ ಮೇಲೆ ಹಾಗೂ ನಮ್ಮ ದೇಶದ ಸಾಮಾಜಿಕ ನ್ಯಾಯದ ಮೇಲೆ ಒಟ್ಟಾರೆಯಾಗಿ ಪ್ರಶ್ನಾರ್ಹ ಕಾಯಿದೆಯ ವಿನಾಶಕಾರಿ ಪರಿಣಾಮವನ್ನು ನೋಡುತ್ತಾ 'ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್' ಸುಮ್ಮನಿರಲು ಸಾಧ್ಯವಿಲ್ಲ " ಎಂದು ಟ್ರಸ್ಟ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ವಕ್ಫ್ ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ , ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ನಡೆಸಲಿದೆ.
ಪ್ರಕರಣದಲ್ಲಿ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು ಕಾಯಿದೆ ಪ್ರಶ್ನಿಸಲು ಬಯಸುವವರು ಅಸ್ತಿತ್ವದಲ್ಲಿರುವ ಅರ್ಜಿದಾರರ ವಾದಗಳಿಗೆ ಸೇರಿಸಲು ಮಧ್ಯಪ್ರವೇಶ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಈ ಹಿಂದೆ ಹೇಳಿತ್ತು.
ಕಾನೂನು ಭಾರತದಲ್ಲಿ ವಕ್ಫ್ ಅಸ್ತಿಗಳ ಸೃಜನೆಯನ್ನು ರದ್ದುಗೊಳಿಸುತ್ತದೆ ಎಂದು ಟ್ರಸ್ಟ್ ಹೇಳಿದೆ.
"ಕಾಯಿದೆಯು ಖಂಡಿತವಾಗಿಯೂ ವಕ್ಫ್ ವ್ಯವಸ್ಥೆಯನ್ನು ಧಾರ್ಮಿಕೇತರವಾಗಿ ಪರಿಗಣಿಸುತ್ತದೆ, ಹೀಗಾಗಿ ವಕ್ಫ್‌ನ ಮೂಲ ಆಡಳಿತ ಕಾನೂನಾಗಿರುವ ಇಸ್ಲಾಮಿಕ್ ಕಾನೂನನ್ನು ಅದು ಸಂಪೂರ್ಣವಾಗಿ ಅಳಿಸಿಹಾಕುತ್ತದೆ. ಇಸ್ಲಾಮಿಕ್ ಕಾನೂನಿನ ಜಾಗದಲ್ಲಿ ಆಕ್ಷೇಪಿತ ಕಾಯಿದೆಯಿಂದ ರೂಪಿತವಾದ ಕಾನೂನನ್ನು ತರುತ್ತದೆ," ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ತಿದ್ದುಪಡಿ ಮಾಡಿದ ಕಾಯಿದೆ ದೇಶದ ಇಡೀ ಮುಸ್ಲಿಂ ಸಮುದಾಯದ ಮೇಲೆ ಮುಸ್ಲಿಮರು ನೀಡುವ ದತ್ತಿ ದೇಣಿಗೆಗಳನ್ನು ನಿಯಂತ್ರಿಸಲು "ಸರ್ಕಾರ ವಿನ್ಯಾಸಗೊಳಿಸಿದ ಮತ್ತು ಸರ್ಕಾರ ವಿಧಿಸಿರುವ ಅಸಾಂವಿಧಾನಿಕ ಯೋಜನೆಯನ್ನು" ಹೇರುತ್ತದೆ ಎಂದು ಅದು ಆಕ್ಷೇಪಿಸಿದೆ.
" ಈ ಆಕ್ಷೇಪಾರ್ಹ ಕಾಯಿದೆ ಅತಿರೇಕದ್ದಾಗಿದೆ ಏಕೆಂದರೆ ಸಂಸತ್ತಿಗೆ ಯಾವುದೇ ವರ್ಗದ ಜನರ ಮೇಲೆ ಅಂತಹ ಯೋಜನೆಯನ್ನು ಹೇರುವ ಅಧಿಕಾರವಿಲ್ಲ. ಆದ್ದರಿಂದ ಇದು ಸಂವಿಧಾನಕ್ಕೆ ಮಾಡಿದ ವಂಚನೆಯಾಗಿದೆ. ಸ್ವಯಂಪ್ರೇರಿತವಾಗಿ ಸರ್ಕಾರ ವಿನ್ಯಾಸಗೊಳಿಸಿದ ಯೋಜನೆಯು ಸಂವಿಧಾನದ 21, 25, 26 ಮತ್ತು 29(1) ನೇ ವಿಧಿಗಳ ಅಡಿಯಲ್ಲಿ ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ " ಎಂದು ಅರ್ಜಿಯು ತಿಳಿಸಿದೆ.
ಸರ್ಕಾರ ವಕ್ಫ್ ಕಾರ್ಯವಿಧಾನವನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಮುಸ್ಲಿಂ ಸಮುದಾಯವು ತಮ್ಮ ಧರ್ಮದ ಆಚರಣೆಯನ್ನು ಉಳಿಸಿಕೊಳ್ಳಲು ಆರ್ಥಿಕ ಮತ್ತು ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ ಎಂದು ಅದು ವಾದಿಸಿದೆ.
" ಈ ಆಕ್ಷೇಪಾರ್ಹ ಕಾಯ್ದೆಯು ಭಾರತದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಸಂಚಕಾರವಾಗಿದೆ. ವಕ್ಫ್ ಕಾರ್ಯವಿಧಾನವು ಶತಮಾನಗಳಿಂದಲೂ ಭಾರತದಲ್ಲಿ ಇಸ್ಲಾಂ ಧರ್ಮದ ಆಚರಣೆ ಮತ್ತು ಉಳಿವಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಪ್ರಮುಖ ಮೂಲವಾಗಿದ್ದು, ಇಂದಿಗೂ ಮುಂದುವರೆದಿದೆ. ಆಕ್ಷೇಪಾರ್ಹ ಕಾಯ್ದೆಯು ಮುಸ್ಲಿಂ ಸಮುದಾಯದ ಆರ್ಥಿಕ ಅಡಿಪಾಯವನ್ನು ನಾಶಪಡಿಸುತ್ತದೆ " ಎಂದು ಅರ್ಜಿಯಲ್ಲಿ ಹೇಳಲಾಗಿದೆ.