Matrimonial Dispute 
ಸುದ್ದಿಗಳು

ಹಿಂದೂ ವಿವಾಹ ಒಪ್ಪಂದವಲ್ಲ: ಪತ್ನಿಯ ಮೇಲಿನ ಆಸಕ್ತಿ ಕಳೆದಿದೆ ಎಂದು ಪತಿ ವಿಚ್ಚೇದನ ಕೋರಲಾಗದು: ಹೈಕೋರ್ಟ್‌

ಹಿಂದೂ ಕಾನೂನಿನಡಿ ವಿವಾಹವು ಒಂದು ಸಂಸ್ಕಾರವಾಗಿದೆಯೇ ಹೊರತು ಒಪ್ಪಂದವಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್, ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ವಿಚ್ಛೇದನಕ್ಕಾಗಿ ಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

Bar & Bench

“ವ್ಯಕ್ತಿಯೊಬ್ಬ ತನ್ನ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ಮದುವೆಯಿಂದ ದೂರ ಸರಿದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

“ಹಿಂದೂ ಕಾನೂನಿನಡಿಯಲ್ಲಿ ವಿವಾಹವು ಒಂದು ಸಂಸ್ಕಾರವಾಗಿದ್ದು, ಅದು ಒಪ್ಪಂದವಲ್ಲ. ಆದ್ದರಿಂದ, ಒಮ್ಮೆ ಮದುವೆಯಾದ ನಂತರ, ಅದು ಜೀವನಪರ್ಯಂತ ಇರುತ್ತದೆ” ಎಂದು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ಹೇಳಿದೆ.

Justice DK and Justice TM Nadaf

ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿದ ತೀರ್ಪಿನ ವಿರುದ್ಧ 1984ರ ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ ಅಡಿಯಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿತು. ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 13 (1A) ಅಡಿಯಲ್ಲಿ ವಿಚ್ಚೇದನ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

2003ರ ಡಿಸೆಂಬರ್‌ 15ರಂದು ದಂಪತಿಯು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಯು ಅನ್ಯ ಜಾತಿಯವರಾಗಿದ್ದು, ಮದುವೆಯ ಬಂಧದಿಂದ ವಯಸ್ಕ ಪುತ್ರಿಯೂ ಇದ್ದಾರೆ. ಪತಿಯು ವಿಚ್ಚೇದನ ಕೋರಿದ್ದು, ಪತ್ನಿಯು ಸೆಕ್ಷನ್‌ 9ರ ಅಡಿ ವೈವಾಹಿಕ ಸಂಬಂಧ ಪುನರ್‌ಸ್ಥಾಪಿಸಲು ಕೋರಿದ್ದರು. ಎರಡೂ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ, ಕೌಟುಂಬಿಕ ನ್ಯಾಯಾಲಯ ಏಕ ತೀರ್ಪು ನೀಡಿತ್ತು. ಇದರಲ್ಲಿ ಪತ್ನಿಯ ಅರ್ಜಿ ಪುರಸ್ಕರಿಸಿ, ಪತಿಯ ಅರ್ಜಿ ತಿರಸ್ಕರಿಸಿತ್ತು.

ಇದರ ಬೆನ್ನಿಗೇ ಪತಿಯು ಕಾಯಿದೆ ಸೆಕ್ಷನ್‌ 13(1A) ಅಡಿ ವೈವಾಹಿಕ ಬದುಕು ಪುನರ್‌ ಸ್ಥಾಪಿಸುವ ಸಂಬಂಧ ಆದೇಶವಾಗಿದ್ದರೂ ಪತ್ನಿ ಸಹ ಜೀವನ ನಡೆಸಲು ಒಪ್ಪುತ್ತಿಲ್ಲ. ಆಕೆಯ ಮನವೊಲಿಸುವ ಪ್ರಯತ್ನ ವಿಫಲವಾಗಿದ್ದು, ಮದುವೆ ಮುರಿದು ಬಿದ್ದಿದೆ ಎಂದು ವಿವರಿಸಿದ್ದರು.

ಈ ಆರೋಪಗಳನ್ನು ಅಲ್ಲಗಳೆದಿದ್ದ ಪತ್ನಿಯು ಪತಿಯ ಪೋಷಕರು ಮತ್ತು ಆತನನ್ನು ನೋಡಿಕೊಂಡಿದ್ದು, ಪ್ರತ್ಯೇಕ ಮನೆ ಮಾಡುವಂತೆ ಹೇಳಿಲ್ಲ. ಅತ್ತೆ-ಮಾವ ಅವರ ಸೂಚನೆಯಂತೆ ಮನೆಯ ಮೊದಲ ಮಹಡಿಯಲ್ಲಿ ನೆಲೆಸಿದ್ದೆವು. ತನ್ನ ಬ್ರಾಹ್ಮಣ ಹಿನ್ನೆಲೆಯಲ್ಲಿ ಸಂಪ್ರದಾಯಗಳಿಗೆ ಬದ್ಧವಾಗಿದ್ದು, ಪತಿ ಅಥವಾ ಅವರ ಕುಟುಂಬದ ಜೊತೆ ಯಾವುದೇ ಕಲಹ ತೆಗೆದಿಲ್ಲ ಎಂದು ವಾದಿಸಿದ್ದರು.

ಕೌಟುಂಬಿಕ ನ್ಯಾಯಾಲಯವು ಕಾಯಿದೆ ಸೆಕ್ಷನ್‌ 13(1)(ia)ರ ಅಡಿ ಕ್ರೌರ್ಯ ಸಾಬೀತಾಗಿಲ್ಲ ಎಂದು ಹೇಳಿತ್ತು. ಪಾಟೀ ಸವಾಲಿನ ಸಂದರ್ಭದಲ್ಲಿ ಪತಿಯು ವೈವಾಹಿಕ ಬದುಕಿನಲ್ಲಿ ಆಸಕ್ತಿ ಇಲ್ಲದೇ ಇರುವುದರಿಂದ ಸಹ ಜೀವನ ನಡೆಸಿಲ್ಲ ಎಂದು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪತಿಯ ಅರ್ಜಿ ವಜಾಗೊಂಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲಿ ಪತಿಯ ಪರ ವಕೀಲೆ ಆರ್‌ ಬೆಳ್ಳಿ ಅವರು “ವೈವಾಹಿಕ ಸಂಬಂಧವನ್ನು ಮುಂದುವರಿಸಲು ಪತಿಗೆ ಯಾವುದೇ ಆಸಕ್ತಿ ಇಲ್ಲ, ಪ್ರಾಯೋಗಿಕ ಉದ್ದೇಶಗಳಿಗಾಗಿ ಮದುವೆ ಅಂತ್ಯ ಕಂಡಿದ್ದು, ವಿಚ್ಚೇದನದ ತೀರ್ಪು ನೀಡಬೇಕು” ಎಂದು ವಾದಿಸಿದರು.

“ಪ್ರೇಮ ವಿವಾಹವಾಗಿ, ವಯಸ್ಕಳಾದ ಮಗಳಿಗೆ ತಂದೆಯಾಗಿ, ನಂತರ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ನ್ಯಾಯಾಲಯಕ್ಕೆ ಮೊರೆ ಇಟ್ಟಿರುವ ಪತಿ ತನ್ನ ಸ್ವಂತ ತಪ್ಪಿನ ಲಾಭ ಪಡೆಯಲು ಪ್ರಯತ್ನಿಸಿದ್ದಾನೆ. ಹಿಂದೂ ಕಾನೂನಿನ ಅಡಿ ಮದುವೆಯು ಪಾವಿತ್ರ್ಯತೆಯಿಂದ ಕೂಡಿದ್ದು, ಅದು ಒಪ್ಪಂದವಲ್ಲ. ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಪಕ್ಷಕಾರರು ಮದುವೆ ಮುರಿದುಕೊಳ್ಳಲಾಗದು” ಎಂದಿರುವ ಹೈಕೋರ್ಟ್‌, ಈ ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಕಾರಣವಿಲ್ಲ ಎಂದು ಪತಿಯ ಅರ್ಜಿ ವಜಾಗೊಳಿಸಿದೆ.