ಜ್ಞಾನವಾಪಿ ಮಸೀದಿ 
ಸುದ್ದಿಗಳು

ಜ್ಞಾನವಾಪಿ ಮಸೀದಿಯ ಮುಚ್ಚಿದ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆ: ವಾರಾಣಸಿ ನ್ಯಾಯಾಲಯಕ್ಕೆ ಹಿಂದೂ ದಾವೆದಾರೆ ಮನವಿ

ಜ್ಞಾನವಾಪಿ ಆವರಣದ ಧಾರ್ಮಿಕ ಸ್ವರೂಪ ಸಾಬೀತುಪಡಿಸುವುದಕ್ಕಾಗಿ ಈ ನೆಲಮಾಳಿಗೆಗಳ ಸಮೀಕ್ಷೆ ಮಾಡುವುದು ಕಡ್ಡಾಯ ಎಂದು ಅರ್ಜಿದಾರರು ವಾದಿಸಿದ್ದಾರೆ.

Bar & Bench

ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ, ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸಮೀಕ್ಷೆ ವ್ಯಾಪ್ತಿಗೆ ಒಳಪಡದ ನೆಲಮಾಳಿಗೆಗಳ ಸಮೀಕ್ಷೆಯನ್ನು ನಡೆಸಬೇಕೆಂದು ಕೋರಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

2022ರ ಶೃಂಗಾರ ಗೌರಿ ಪೂಜಾ ದಾವೆಯಲ್ಲಿ ಮೊದಲ ದಾವೆದಾರೆಯಾಗಿರುವ ರಾಖಿ ಸಿಂಗ್ (ಪ್ರಸ್ತುತ ವಾರಾಣಸಿ ನ್ಯಾಯಾಲಯದಲ್ಲಿ ಶೃಂಗಾರ್ ಗೌರಿ ಪೂಜಾ ಪ್ರಕರಣ ಬಾಕಿ ಇದೆ) ಈ ಕುರಿತ ಅರ್ಜಿ ಸಲ್ಲಿಸಿದ್ದಾರೆ.

ಮುಸ್ಲಿಂ ಮತ್ತು ಹಿಂದೂ ದಾವೆದಾರರು ಪರಸ್ಪರ ವಿರುದ್ಧವಾದ ಹಕ್ಕು ಚಲಾಯಿಸುತ್ತಿರುವುದರಿಂದ ಜ್ಞಾನವಾಪಿ ಆವರಣದ ಧಾರ್ಮಿಕ ಸ್ವರೂಪ ಸಾಬೀತುಪಡಿಸುವುದಕ್ಕಾಗಿ ಈ ನೆಲಮಾಳಿಗೆಗಳ ಸಮೀಕ್ಷೆ ಮಾಡುವುದು ಕಡ್ಡಾಯ ಎಂದು ಅರ್ಜಿದಾರೆ ವಾದಿಸಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು

  • ವಿಶೇಷವಾಗಿ, ಆವರಣದ ಉತ್ತರ ಭಾಗದಲ್ಲಿ ನೆಲಮಾಳಿಗೆಗಳಾದ ಎನ್ 1 ರಿಂದ ಎನ್ 5 ಮತ್ತು ದಕ್ಷಿಣ ಭಾಗದಲ್ಲಿ ನೆಲಮಾಳಿಗೆಗಳಾದ ಎಸ್ 1ರಿಂದ ಎಸ್ 3 ಅನ್ನು ಇನ್ನಷ್ಟೇ ಸಮೀಕ್ಷೆ ಮಾಡಬೇಕಾಗಿದೆ.

  • ನೆಲಮಾಳಿಗೆಗಳಾದ ಎನ್ 1 ಮತ್ತು ಎಸ್ 1ನ ಪ್ರವೇಶದ್ವಾರಗಳು ಸಂಪೂರ್ಣವಾಗಿ ನಿರ್ಬಂಧಿತವಾಗಿದ್ದು ಅವುಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

  • ಹೀಗಾಗಿ ಹಿಂದೆಯೂ ಎಎಸ್‌ಐ ಸಮೀಕ್ಷೆ ಮಾಡಲು ಸಾಧ್ಯವಾಗಿರಲಿಲ್ಲ.

  • ಕಟ್ಟಡಕ್ಕೆ ಹಾನಿಯಾಗದಂತೆ ಪ್ರವೇಶದ್ವಾರ ತೆರೆದು ನೆಲಮಾಳಿಗೆ ಸಮೀಕ್ಷೆ ನಡೆಸಲು ಎಎಸ್‌ಐ ಆಧುನಿಕ ತಂತ್ರಜ್ಞಾನ ಬಳಸಬಹುದು.

  • ಪ್ರವೇಶದ್ವಾರವನ್ನು ಇಟ್ಟಿಗೆ ಮತ್ತು ಕಲ್ಲಿನಿಂದ ಮುಚ್ಚಲಾಗಿದ್ದು ಕಟ್ಟಡದ ಭಾರ ಅದನ್ನು ಆಧರಿಸಿಲ್ಲವಾದ್ದರಿಂದ ಎಎಸ್‌ಐ ತಜ್ಞರು ತಮ್ಮ ಪರಿಣತಿ ಬಳಸಿ ಅದನ್ನು ತೆಗೆದುಹಾಕಿದರೆ ಮಸೀದಿಯ ಕಟ್ಟಡಕ್ಕೆ ಹಾನಿಯಾಗುವುದಿಲ್ಲ.