Hindu Succession Act, Supreme Court 
ಸುದ್ದಿಗಳು

ಜೀವನಾಂಶ ಪಡೆಯುತ್ತಿರುವ ಆಸ್ತಿಯ ಸಂಪೂರ್ಣ ಹಕ್ಕು ಹಿಂದೂ ವಿಧವೆಗೆ ಇದೆ: ಸುಪ್ರೀಂ ಕೋರ್ಟ್

ಹಿಂದೂ ಮಹಿಳೆಯ ಜೀವನಾಂಶದ ಹಕ್ಕು ಎಂಬುದು ಖಾಲಿ ಔಪಚಾರಿಕತೆಯಾಗಲೀ ಅಥವಾ ದಯೆ ಇಲ್ಲವೇ ಔದಾರ್ಯದ ಕಾರಣಕ್ಕೆ ಒಪ್ಪುವಂತಹ ಭ್ರಮಾತ್ಮಕ ಹಕ್ಕಲ್ಲ ಎಂದು ನ್ಯಾಯಾಲಯ ಹೇಳಿತು.

Bar & Bench

ಹಿಂದೂ ಉತ್ತರಾಧಿಕಾರ ಕಾಯಿದೆ- 1956ರ ಸೆಕ್ಷನ್ 14(1) ರ ಮತ್ತು ಹಿಂದೂ ವಿಧವೆಯ ಜೀವನಾಂಶ ಹಕ್ಕಿನಡಿ ಆಕೆಯು ಜೀವನಾಂಶ ಪಡೆಯುತ್ತಿರುವ ಆಸ್ತಿಯ ಸಂಪೂರ್ಣ ಮಾಲೀಕತ್ವಕ್ಕೆ ಆಕೆ ಅರ್ಹಳು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ [ಮುನ್ನಿ ದೇವಿ ಅಲಿಯಾಸ್ ನಾಥಿ ದೇವಿ ವಿರುದ್ಧ ರಾಜೇಂದ್ರ ಅಲಿಯಾಸ್ ಲಲ್ಲು ಲಾಲ್].

ಸಾಮಾಜಿಕ-ಆರ್ಥಿಕ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಮಹಿಳೆಯರ ಪರವಾಗಿ ಉದಾರ ಧೋರಣೆಯನ್ನು ಸೆಕ್ಷನ್ 14(1) ರೂಪಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠ ಹೇಳಿತು.

ಮೇಲ್ಮನವಿದಾರರೂ, ಪ್ರತಿವಾದಿಯೂ ಈಗಾಗಲೇ ಮೃತಪಟ್ಟಿದ್ದು ಅವರ ಕಾನೂನು ಪ್ರತಿನಿಧಿಗಳು ಹೂಡಿದ್ದ ವ್ಯಾಜ್ಯವೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರತಿವಾದಿ ವಿಧವೆಯಾಗಿದ್ದು, 1953 ರಿಂದ ಆಸ್ತಿಯ ಅರೆ ಒಡೆತನ ಹೊಂದಿದ್ದರು.

ಆದರೆ ತನ್ನ ಪೂರ್ವಜರು ತೀರಿ ಹೋದ ಬಳಿಕ ತಾನೊಬ್ಬನೇ ಕುಟುಂಬದ ಜೀವಂತ ಪುರುಷ ಸದಸ್ಯನಾಗಿದ್ದೇನೆ ಎಂಬುದು ಮೇಲ್ಮನವಿದಾರರ ವಾದವಾಗಿತ್ತು. ತನ್ನ ಪೂರ್ವಜರ ಉಯಿಲಿನ ಪ್ರಕಾರ ತಾನೇ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದು ಆಸ್ತಿಗೆ ತಾನೊಬ್ಬನೇ ಒಡೆಯನಾಗಬೇಕು. ಹೀಗಾಗಿ ಪ್ರತಿವಾದಿ ಯಾವುದೇ ಕಾನೂನು ಹಕ್ಕು ಮತ್ತು ವಿವೇಚನೆ ಇಲ್ಲದೆ ಅಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು.

ಆದರೆ ಪ್ರತಿವಾದಿ ತಾನು ಆಸ್ತಿಯಿಂದ ಬರುತ್ತಿರುವ ಆದಾಯದಲ್ಲಿ ಜೀವನಾಂಶ ಪಡೆಯುತ್ತಿದ್ದೇನೆ. ಸೆಕ್ಷನ್ 14(1)ರ ಪ್ರಕಾರ ವ್ಯಾಜ್ಯದಲ್ಲಿರುವ ಆಸ್ತಿ ಮೇಲೆ ತನಗಿದ್ದ ಸೀಮಿತ ಹಕ್ಕನ್ನು ಸಂಪೂರ್ಣ ಮಾಲೀಕತ್ವವಾಗಿ ವಿಸ್ತರಿಸಬೇಕು ಎಂದು ಕೋರಿದ್ದರು. ಅಲ್ಲದೆ ಮೇಲ್ಮನವಿದಾರರ ಪರವಾಗಿ ಬರೆಯಲಾಗಿದೆ ಎನ್ನಲಾದ ಉಯಿಲಿನ ದಾಖಲೆ ಇಲ್ಲ. ಅದಕ್ಕೆ ಸಂಬಂಧಿಸಿದ ಪುರಾವೆಗಳೂ ಇಲ್ಲ ಎಂದು ವಾದ ಮಂಡಿಸಲಾಗಿತ್ತು.

ಮೇಲ್ಮನವಿದಾರನ ಪರವಾಗಿ ಈ ಹಿಂದೆ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಈ ಆದೇಶ ರದ್ದುಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್‌ ಆಸ್ತಿಯ ಜೀವನಾಂಶದ ಬದಲು ಪ್ರತಿವಾದಿ ಆಸ್ತಿ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದಾಳೆ ಎಂದಿತ್ತು. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ಮುಂದಿದ್ದ ಪ್ರಮುಖ ಪ್ರಶ್ನೆಯೆಂದರೆ, ಜೀವನಾಂಶ ಪಡೆಯುವ ಹಕ್ಕಿನ ಬದಲಿಗೆ ಪ್ರಶ್ನೆಯಲ್ಲಿರುವ ಆಸ್ತಿಯ ಸಂಪೂರ್ಣ ಮಾಲೀಕತ್ವವನ್ನು ಪ್ರತಿವಾದಿಗೆ ನೀಡಬೇಕೆ ಮತ್ತು ಸೆಕ್ಷನ್ 14(1)ರ ಕಾರಣಕ್ಕೆ ಅಂತಹ ಸೀಮಿತ ಮಾಲೀಕತ್ವದ ಹಕ್ಕನ್ನು ಸಂಪೂರ್ಣ ಮಾಲೀಕತ್ವವಾಗಿ ಸಾಧಿಸಬಹುದೇ ಎಂಬುದಾಗಿತ್ತು.

ಸೆಕ್ಷನ್ 14 (1) ನಲ್ಲಿ ಬಳಸಲಾದ "ಹೊಂದಿರುವ" ಮತ್ತು "ಸ್ವಾಧೀನಪಡಿಸಿಕೊಂಡ" ಪದಗಳು ಅರ್ಥ ವೈಶಾಲ್ಯ ಹೊಂದಿದ್ದು ಆಸ್ತಿ ಹೊಂದುವ ಸ್ಥಿತಿಯನ್ನು ಒಳಗೊಂಡಿವೆ ಎಂದು ನ್ಯಾಯಾಲಯ ನಿರ್ಧರಿಸಿತು. ಅದರಂತೆ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು.