ಅನುಭವಿ ಪೈಲಟ್ ಒಬ್ಬರು ಜೊತೆಗಿದ್ದರೆ ಮಾತ್ರ ಎಚ್‌ಐವಿ ಸೋಂಕಿತ ಪೈಲಟ್ ವಾಣಿಜ್ಯ ವೈಮಾನಿಕ ಹಾರಾಟ ನಡೆಸಲು ಅರ್ಹರು ಎಂದು ತಾನು ಪ್ರಮಾಣೀಕರಿಸಿರುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ತೀಚೆಗೆ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ [ತಮ್ಮ ತಂದೆಯ ಮುಖೇನ ಎಕ್ಸ್‌ವೈಝಡ್ ಮತ್ತು ಡಿಜಿಸಿಎ]. ಆದರೆ, ಈ ನಿರ್ಧಾರದಿಂದ ಅತೃಪ್ತರಾದ ಪೈಲಟ್, ಡಿಜಿಸಿಎ ನಿರ್ಧಾರವನ್ನು ಪ್ರಶ್ನಿಸಿ ಹೊಸ ಅರ್ಜಿಯನ್ನು ಸಲ್ಲಿಸಲು ತಮ್ಮ ಮನವಿಯನ್ನು ಹಿಂಪಡೆದರು.
"ಅರ್ಜಿದಾರರಿಗೆ ನೀಡಲಾದ ಹೊಸ ಪ್ರಮಾಣೀಕರಣದ ಬಗ್ಗೆ ಯಾವುದೇ ದೂರು ಇದ್ದರೆ, ಕಾನೂನಿನಲ್ಲಿ ಅನುಮತಿಸಬಹುದಾದುದಂತೆ ಪ್ರಶ್ನಿಸುವುದು ಅರ್ಜಿದಾರರಿಗೆ ಬಿಟ್ಟ ವಿಷಯ" ಎಂದು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಮತ್ತು ಅದ್ವೈತ್ ಎಂ ಸೇಥ್ನಾ ಅವರ ಪೀಠವು ಮಾರ್ಚ್ 18 ರಂದು ನೀಡಿದ ಆದೇಶದಲ್ಲಿ ಹೇಳಿದ್ದು, ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಿತು.
ಅಮೆರಿಕದಲ್ಲಿ ವಾಸಿಸುತ್ತಿದ್ದ ವಾಣಿಜ್ಯ ಪೈಲಟ್ ಆಗಿದ್ದ ಅರ್ಜಿದಾರರು 2020ರ ನವೆಂಬರ್‌ನಲ್ಲಿ ಭಾರತದಲ್ಲಿ ವಾಣಿಜ್ಯ ಪೈಲಟ್ ಆಗಿ ಕಾರ್ಯನಿರ್ವಹಿಸಲು ಪ್ರಮಾಣೀಕರಣಕ್ಕೆ ಅಗತ್ಯವಿರುವ ಡಿಜಿಸಿಎ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. 2021ರ ನವೆಂಬರ್ ವೇಳೆಗೆ ಅವರು ಇದಕ್ಕೆ ಅಗತ್ಯವಾದ ಡಿಜಿಸಿಎ ಲಿಖಿತ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ್ದರು.
ನಂತರದ ಹಂತದಲ್ಲಿ ಅರ್ಜಿದಾರರು 2021ರ ಅಕ್ಟೋಬರ್ 11 ರಂದು ನಾನಾವತಿ ಆಸ್ಪತ್ರೆಯಲ್ಲಿ ಕಡ್ಡಾಯ ಡಿಜಿಸಿಎ ಕ್ಲಾಸ್ 1 ವೈದ್ಯಕೀಯ ಪರೀಕ್ಷೆಗೆ ಒಳಗಾದರು, ಅಲ್ಲಿ ಅವರಿಗೆ ಅಕ್ಟೋಬರ್ 14, 2021 ರಂದು ಎಚ್‌ಐವಿ ಇರುವುದು ಪತ್ತೆಯಾಯಿತು.
ಸೋಂಕು ದೃಢಪಟ್ಟ ನಂತರ, ನಾನಾವತಿ ಆಸ್ಪತ್ರೆ ಅಕ್ಟೋಬರ್ 21, 2021ರಂದು 'ತಾತ್ಕಾಲಿಕ ಹಾರಾಟಕ್ಕೆ ಅನರ್ಹ' ಪ್ರಮಾಣಪತ್ರವನ್ನು ನೀಡಿತು. ಡಿಸೆಂಬರ್ 3, 2021 ರಂದು, ಡಿಜಿಸಿಎ ಹೆಚ್ಚುವರಿ ರಕ್ತ ಪರೀಕ್ಷಾ ವರದಿಗಳನ್ನು ಕೋರಿತು. ನಂತರ, ಡಿಸೆಂಬರ್ 10, 2021 ರಂದು ಅರ್ಜಿದಾರರ ಎಚ್‌ಐವಿ ಪಾಸಿಟಿವ್ ಸ್ಥಿತಿಯಿಂದಾಗಿ ಡಿಜಿಸಿಎ ಅವರನ್ನು "ಆರಂಭಿಕ ವೈದ್ಯಕೀಯ ಮೌಲ್ಯಮಾಪನಳ ಅನ್ವಯ ವರ್ಗ 1 ವೈಮಾನಿಕ ಹಾರಾಟಕ್ಕೆ ಅನರ್ಹ" ಎಂದು ಘೋಷಿಸಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಅರ್ಜಿದಾರರು ಡಿಜಿಸಿಎಯ ನೀತಿಯ ಕುರಿತು ಸ್ಪಷ್ಟೀಕರಣವನ್ನು ಕೋರಿ ಮಾಹಿತಿ ಹಕ್ಕು ಅಡಿ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಡಿಜಿಸಿಎಯು ಎಚ್‌ಐವಿ ದೃಢಪಟ್ಟಿರುವ ಹಾಲಿ ಸೇವೆಯಲ್ಲಿರುವ ಪೈಲಟ್‌ಗಳಿಗೆ ಒಂದು ನೀತಿ ಜಾರಿಯಲ್ಲಿದೆ, ಆದರೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಎದುರಿಸುವವರಿಗೆ ಅಂತಹ ಯಾವುದೇ ನೀತಿ ಇಲ್ಲ ಎಂದು ತಿಳಿಸಿತ್ತು.
ಇದು ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಕಾರಣವಾಯಿತು. ಮಾರ್ಚ್ 9, 2022 ರಂದು ಅವರನ್ನು ಮರು ಪರೀಕ್ಷೆಗೆ ಕರೆಯಲಾಯಿತು. ಪರಿಣಾಮವಾಗಿ, ಮೇ 24, 2022 ರಂದು, ಡಿಜಿಸಿಎ ಅರ್ಜಿದಾರರು "ಪಿ2 (ಸಹ ಪೈಲಟ್) ಆಗಿ ಮಾತ್ರ ಹಾರಲು ಅರ್ಹರು" ಎಂದು ಪರಿಗಣಿಸಿ ಅಂತಿಮ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಿತ್ತು.
ಈ ನಿರ್ಧಾರವನ್ನು ಪ್ರಶ್ನಿಸಿ, ಅರ್ಜಿದಾರರು ತಮ್ಮ ತಂದೆಯ ಮೂಲಕ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಡಿಜಿಸಿಎ ನಿರ್ಧಾರವು ತಾರತಮ್ಯದಿಂದ ಕೂಡಿದೆ ಮತ್ತು ತನ್ನ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 18, 2024 ರಂದು ನೀಡಿದ ತನ್ನ ಉತ್ತರದಲ್ಲಿ ಡಿಜಿಸಿಎ ಪ್ರಮಾಣಪತ್ರವನ್ನು ಸಮರ್ಥಿಸಿಕೊಂಡಿದೆ ಮತ್ತು ಅರ್ಜಿದಾರರು ಪಡೆಯುತ್ತಿರುವ ಆಂಟಿ-ರೆಟ್ರೋವೈರಲ್ ಥೆರಪಿ (ಎಆರ್‌ಟಿ) ಯ ಸಂಭಾವ್ಯ ಅಡ್ಡಪರಿಣಾಮಗಳು ಮತ್ತು ರೋಗದ ಪ್ರಗತಿಯ ಅನಿರೀಕ್ಷಿತ ಸ್ವರೂಪದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಸೋಂಕಿನ ಈ ಹಂತದಲ್ಲಿ ಮೇಲ್ವಿಚಾರಣೆಯ ಅಗತ್ಯತೆ ಇರುವುದು ಅರ್ಜಿದಾರರು ಪ್ರಮುಖ ಪೈಲಟ್ ಉಸ್ತುವಾರಿಯಲ್ಲಿ ಮಾತ್ರ ಹಾರಲು ಯೋಗ್ಯ ಎಂದು ಘೋಷಿಸುವ ನಿರ್ಧಾರವನ್ನು ಸಮರ್ಥಿಸುತ್ತದೆ ಎಂದು ಡಿಜಿಸಿಎ ವಾದಿಸಿತು. "ರೋಗದ ಪ್ರಗತಿಯ ಪರಿಣಾಮಗಳು, ಎಆರ್‌ಟಿಯ ಅನಿರೀಕ್ಷಿತ ಅಡ್ಡಪರಿಣಾಮಗಳು ಮತ್ತು ಆಗಾಗ್ಗೆ ಮೇಲ್ವಿಚಾರಣೆಯ ನಿರ್ಬಂಧಗಳನ್ನು ಪರಿಗಣಿಸಿ, ಅರ್ಹ, ಅನುಭವಿ ಪೈಲಟ್‌ನೊಂದಿಗೆ ಪೈಲಟ್ ಇನ್ ಕಮಾಂಡ್ ಆಗಿ ಹಾರಲು ಅವರು ಯೋಗ್ಯರು" ಎಂದು ಡಿಜಿಸಿಎ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿತ್ತು.
ಆದರೆ, ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಅರ್ಜಿದಾರರು, ವೈಮಾನಿಕ ಹಾರಾಟದ ವೇಳೆ ಅವರೊಂದಿಗೆ ಅನುಭವಿ ಸಹ-ಪೈಲಟ್ ಇರಬೇಕಾದ ಅಗತ್ಯವು ಅವರ ಉದ್ಯೋಗಾವಕಾಶಗಳನ್ನು ತೀವ್ರವಾಗಿ ಮಿತಿಗೊಳಿಸುತ್ತದೆ ಎಂದು ವಾದಿಸಿದ್ದರು. ಅಂತಿಮವಾಗಿ ಡಿಜಿಸಿಎ ಉತ್ತರದಿಂದ ಅತೃಪ್ತರಾದ ಅವರು ಹೊಸದಾಗಿ ಅರ್ಜಿ ಸಲ್ಲಿಸಲು ಪ್ರಸಕ್ತ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದರು.