Madras High Court 
ಸುದ್ದಿಗಳು

ಕುಟುಂಬಕ್ಕಾಗಿ ದುಡಿಯುವ ಗೃಹಿಣಿಗೆ ಪತಿ ಖರೀದಿಸಿದ ಆಸ್ತಿಯಲ್ಲಿ ಸಮಪಾಲು: ಮದ್ರಾಸ್ ಹೈಕೋರ್ಟ್

Bar & Bench

ಗೃಹಿಣಿಯು ಮನೆ ನಿರ್ವಹಿಸಿ, ತನ್ನ ಸ್ವಂತ ಕನಸುಗಳನ್ನೆಲ್ಲಾ ತ್ಯಾಗ ಮಾಡಿ, ಪತಿಯು ಹೊರಗೆ ಹೋಗಿ ದುಡಿಯಲು, ಕುಟುಂಬ ಆಸ್ತಿ ಸಂಪಾದಿಸುವಂತಾಗಲು ಸರಿಸಮನಾಗಿ ಕೊಡುಗೆ ನೀಡುತ್ತಾಳೆ. ಹೀಗಾಗಿ ಪತಿ ತನ್ನ ಸ್ವಂತ ಹೆಸರಿನಲ್ಲಿ ಸಂಪಾದಿಸಿದ ಎಲ್ಲಾ ಆಸ್ತಿಯಲ್ಲಿ ಅರ್ಧದಷ್ಟು ಪಾಲು ಪಡೆಯಲು ಅರ್ಹಳು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ.

ಪತ್ನಿಯು ಮನೆಗೆ ನೇರವಾಗಿ ಅಥವಾ ಪರೋಕ್ಷವಾಗಿ ನೀಡಿದ ಕೊಡುಗೆಗಳಿಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಭಾರತದಲ್ಲಿ ಇದುವರೆಗೆ ಜಾರಿಯಾಗಿಲ್ಲ. ಆದರೆ, ನ್ಯಾಯಾಲಯಗಳು ಅಂತಹ ಕೊಡುಗೆಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸಬಲ್ಲವು ಎಂದು ಜೂನ್ 21ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ ತಿಳಿಸಿದರು.

“ತಮ್ಮ ಮನೆಗೆಲಸ ನಿರ್ವಹಿಸುವ ಮೂಲಕ ಕುಟುಂಬದ ಆಸ್ತಿ ಸಂಪಾದನೆಗೆ ಪತ್ನಿಯರು ಕೊಡುಗೆ ನೀಡಿ ಆ ಮೂಲಕ ತಮ್ಮ ಗಂಡಂದಿರನ್ನು ಲಾಭದಾಯಕ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಮಾಡುವುದನ್ನು ನ್ಯಾಯಾಲಯ ಗಂಡ ಅಥವಾ ಹೆಂಡತಿಯ ಹೆಸರಿನಲ್ಲಿರುವ ಆಸ್ತಿ ಹಕ್ಕುಗಳನ್ನು ನಿರ್ಧರಿಸುವಾಗ ನಿರ್ದಿಷ್ಟವಾಗಿ ಪರಿಗಣಿಸುತ್ತದೆ. ನಿಸ್ಸಂಶಯವಾಗಿ, ಮನೆಯನ್ನು ನೋಡಿಕೊಳ್ಳುವ ಮತ್ತು ದಶಕಗಳ ಕಾಲ ಕುಟುಂಬವನ್ನು ನೋಡಿಕೊಳ್ಳುವ ಸಂಗಾತಿಯು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಮದುವೆಯಾದ ಮೇಲೆ, ತನ್ನ ಗಂಡ ಮತ್ತು ಮಕ್ಕಳ ಆರೈಕೆಗಾಗಿ ಅವಳು ತನ್ನ ವೇತನದ ಕೆಲಸವನ್ನು ತ್ಯಜಿಸಿದರೆ, ಅದರ ಪರಿಣಾಮವಾಗಿ ತನ್ನದು ಎಂದು ಕರೆಯಲಾಗದ ಯಾವುದೂ ಆಕೆಯ ಪಾಲಿಗೆ  ಇಲ್ಲದೇ ಹೋಗುವುದು ಸಮರ್ಥಿಸಲು ಸಾಧ್ಯವಾಗದಂತಹ ಕಷ್ಟವಾಗಿಬಿಡುತ್ತದೆ” ಎಂಬುದಾಗಿ ಪೀಠ ವಿವರಿಸಿದೆ.

ಹೀಗಾಗಿ, ಮೃತ ಪತಿ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಪಾಲು ಕೋರಿ ಕಂಸಲಾ ಅಮ್ಮಾಳ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳು  ಪುರಸ್ಕರಿಸಿದರು. ಹೈಕೋರ್ಟ್‌ ಐದು ಆಸ್ತಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿತು. ಅದರಲ್ಲಿ ಎರಡು ಆಸ್ತಿಗಳನ್ನು ಆಕೆಯ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವಾಗ ಗಳಿಸಿದ ಉಳಿತಾಯದ ಹಣದಲ್ಲಿ ಸಂಪಾದಿಸಿದ್ದು. ಇನ್ನೊಂದು ಅಮ್ಮಾಳ್‌ ಅವರ ಹೆಸರಿನಲ್ಲಿ ಮೃತ ಪತಿ ಖರೀದಿಸಿದ ಜಮೀನಾಗಿತ್ತು. ಅಲ್ಲದೆ ಕೆಲ ವಸ್ತ್ರಾಭರಣಗಳನ್ನು ಅಮ್ಮಾಳ್‌ ಅವರ ಹೆಸರಿನಲ್ಲಿ ಬ್ಯಾಂಕ್‌ ಲಾಕರ್‌ನಲ್ಲಿ ಇರಿಸಲಾಗಿತ್ತು.

ಆಸ್ತಿಯಲ್ಲಿನ ಅಮ್ಮಾಳ್‌ ಪಾಲನ್ನು ಆರಂಭದಲ್ಲಿ ಪತಿ ಮತ್ತು ಆತ ಮೃತಪಟ್ಟ ಬಳಿಕ ಆಕೆಯ ಮಕ್ಕಳು ಪ್ರಶ್ನಿಸಿದ್ದರು. ಐದು ಆಸ್ತಿಗಳಲ್ಲಿ ಮೂರರಲ್ಲಿ ಸಮಪಾಲು ನೀಡಬೇಕೆಂಬ ಅಮ್ಮಾಳ್‌ ಅವರ ಬೇಡಿಕೆಯನ್ನು 2015ರಲ್ಲಿ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.

ಆಸ್ತಿಯನ್ನು ಪತಿ ತನ್ನ ಸ್ವಂತ ಉಳಿತಾಯದ ಹಣದಿಂದ ಸಂಪಾದಿಸಿದ್ದರೂ ಅಮ್ಮಾಳ್‌ ಶೇ 50ರಷ್ಟು ಪಾಲು ಪಡೆಯಲು ಅರ್ಹರು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಎರಡು ಬ್ಯಾಂಕ್‌ ಲಾಕರ್‌ಗಳಲ್ಲಿರುವ ವಸ್ತ್ರಾಭರಣಗಳನ್ನು ಮೃತ ಪತಿ ಅಮ್ಮಾಳ್‌ ಅವರಿಗೆ ಉಡುಗೊರೆಯಾಗಿ ಖರೀದಿಸಿದ್ದು ಅದರಿಂದ ಅವು ಆಕೆಗಷ್ಟೇ ಸೇರಿವೆ ಎಂದು ಅದು ಹೇಳಿದೆ.