ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹನಿ ಟ್ರ್ಯಾಪ್ ವಿವಾದಕ್ಕೆ ತಳುಕು ಹಾಕಿ ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದ ಸೈಬರ್ ಅಪರಾಧ ಪ್ರಕರಣದಲ್ಲಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಧೀಶರಾದ ಶಂಕರಪ್ಪ ನಿಬಣ್ಣ ಕಲ್ಕಣಿ ಅವರು ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದು, ಅವರ ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಲೇವಾರಿಯಾಗುವವರೆಗೆ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ಆದೇಶಿಸಿದ್ದಾರೆ.
ಕರ್ನಾಟಕ ಹನಿ ಟ್ರ್ಯಾಪ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೊಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಇದಾಗಿದ್ದು, ಸೆಪ್ಟೆಂಬರ್ 27ರಂದು ಕರ್ನಾಟಕ ಹನಿ ಟ್ರ್ಯಾಪ್ ನೆಕ್ಸಸ್ ಪಾರ್ಟ್ 1 ಹಾಗೂ ಅಕ್ಟೋಬರ್ 2ರಂದು ಪ್ರಸಾರವಾದ ಲೈವ್: ಬಿಗ್ಗೆಸ್ಟ್ ಸಿಡಿ ಬ್ಲಾಸ್ಟ್ ಇನ್ ಕರ್ನಾಟಕ ಪಾಲಿಟಿಕ್ಸ್? ಎಂಬ ವಿಡಿಯೊಗಳನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ವಿಡಿಯೊಗಳಲ್ಲಿ ರಹಸ್ಯವಾಗಿ ಮಹಿಳೆಯೊಬ್ಬರಿಂದ ಧ್ವನಿಮುದ್ರಿಸಲಾಗಿದೆ. ಈ ವಿಡಿಯೊಗಳ ಪ್ರಸಾರದಿಂದ ತಮ್ಮ ಘನತೆ, ಪ್ರತಿಷ್ಠೆ ಹಾಗೂ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ದೂರುದಾರ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಆದರೆ, ತಾವು ಸಂಬಂಧಿತ ಯೂಟ್ಯೂಬ್ ಚಾನೆಲ್‌ನ ಮಾಲೀಕರಾಗಲಿ, ವಿಡಿಯೊಗಳ ಸೃಷ್ಟಿಕರ್ತರಾಗಲಿ ಅಥವಾ ನಿರ್ವಾಹಕರಾಗಲಿ ಅಲ್ಲ ಎಂದು ರಾಕೇಶ್ ಶೆಟ್ಟಿ ವಾದಿಸಿದ್ದಾರೆ. ವಿಡಿಯೊಗಳ ಧ್ವನಿಮುದ್ರಣ, ಸಂಪಾದನೆ, ಅಪ್‌ಲೋಡ್ ಅಥವಾ ಪ್ರಸಾರದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ, ದೂರು ಅಥವಾ ಎಫ್‌ಐಆರ್‌ನಲ್ಲಿ ತಮ್ಮ ಹೆಸರೇ ಉಲ್ಲೇಖವಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
ಸುಲಿಗೆ, ನಕಲಿ ದಾಖಲೆ ಸೃಷ್ಟಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ನಿಬಂಧನೆಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದರೂ, ಈ ಅಪರಾಧಗಳಲ್ಲಿ ತಮ್ಮ ಪಾತ್ರವನ್ನು ಸಾಬೀತುಪಡಿಸುವ ನಿರ್ದಿಷ್ಟ ಆರೋಪಗಳಿಲ್ಲ ಎಂದು ರಾಕೇಶ್ ಶೆಟ್ಟಿ ವಾದಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿನ ಕಾರ್ಯವಿಧಾನದ ಲೋಪಗಳ ಬಗ್ಗೆಯೂ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ರೀತಿ ಹಾಗೂ ಪೊಲೀಸ್ ಠಾಣೆಯಲ್ಲಿ ತಮ್ಮನ್ನು ಇರಿಸಿಕೊಂಡಿದ್ದ ಸಂದರ್ಭಗಳ ಕುರಿತು ರಾಕೇಶ್ ಶೆಟ್ಟಿ ಪ್ರಶ್ನೆ ಎತ್ತಿದ್ದಾರೆ.
ರಾಕೇಶ್ ಶೆಟ್ಟಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಅವರನ್ನು ಬಂಧಿಸಿದಲ್ಲಿ, ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬ ಜಾಮೀನುದಾರರನ್ನು ಒದಗಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ರಾಕೇಶ್ ತನಿಖಾಧಿಕಾರಿಯೊಂದಿಗೆ ಸಹಕರಿಸಬೇಕು ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುವುದು ಅಥವಾ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವುದನ್ನು ಮಾಡಬಾರದು ಎಂದು ನಿರ್ದೇಶಿಸಲಾಗಿದೆ.
ನಿರೀಕ್ಷಣಾ ಜಾಮೀನು ಪಡೆಯಲು ವಿಫಲವಾದಲ್ಲಿ ನ್ಯಾಯಾಲಯಕ್ಕೆ ಶರಣಾಗಬೇಕು ಎಂದೂ ಆದೇಶಿಸಲಾಗಿದೆ.
ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಸಿದ್ದರಾಮಯ್ಯ ಅವರನ್ನು ಹನಿ ಟ್ರ್ಯಾಪ್ ಜಾಲ, ಬ್ಲ್ಯಾಕ್‌ಮೇಲ್ ಆರೋಪಗಳು ಹಾಗೂ ಅವರ ಮುಖ್ಯಮಂತ್ರಿ ಅಧಿಕಾರಾವಧಿಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳಿಗೆ ಜೋಡಿಸಿ ವಿಡಿಯೊಗಳು ಮತ್ತು ಆನ್‌ಲೈನ್ ಪ್ರಕಟಣೆಗಳನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ಬೆಳವಣಿಗೆ ನಡೆದಿದೆ.
ಈ ಸಂಬಂಧ ಅಕ್ಟೋಬರ್ 13ರಂದು ಬೆಂಗಳೂರಿನ ನ್ಯಾಯಾಲಯವು ಪ್ರತ್ಯೇಕ ಸಿವಿಲ್ ದಾವೆಯಲ್ಲಿ 42 ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಹಾಗೂ ಇತರ ಪ್ರತಿವಾದಿಗಳು ಸಿದ್ದರಾಮಯ್ಯ ಅವರನ್ನು ವಿವಾದಕ್ಕೆ ತಗುಲು ಹಾಕುವ ವಿಡಿಯೊಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಹೊರಡಿಸಿತ್ತು.
ಆದರೆ, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ಪ್ರಕಟಣೆಗಳ ಉದ್ದೇಶ ತಮ್ಮ ಪ್ರತಿಷ್ಠೆ ಮತ್ತು ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವುದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.