Kerala High Court 
ಸುದ್ದಿಗಳು

ಮಹಿಳಾ ಹಾಸ್ಟೆಲ್ ನಿರ್ಬಂಧಿಸುವ ಬದಲು ಪುರುಷರನ್ನು ಅಂಕೆಯಲ್ಲಿಡಿ, ತೊಂದರೆಯಾಗುತ್ತಿರುವುದು ಅವರಿಂದ: ಕೇರಳ ಹೈಕೋರ್ಟ್

ಕೇರಳ ಇನ್ನೂ ಪುರಾತನ ನಿಯಮಗಳಿಂದ ಮುಕ್ತವಾಗಿಲ್ಲ ಎಂದ ನ್ಯಾಯಮೂರ್ತಿಗಳು ಅಂತಹ ನಿರ್ಧಾರ ತೆಗೆದುಕೊಳ್ಳಲು ಹಳೆಯ ಕಾಲದವರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

Bar & Bench

ಶಿಕ್ಷಣ ಸಂಸ್ಥೆಗಳ ಮಹಿಳಾ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ರಾತ್ರಿ ಓಡಾಟವನ್ನು ನಿರ್ಬಂಧಿಸುವುದು ಅವರ ಸುರಕ್ಷತೆಗಾಗಿ ಎನ್ನುವುದಾದ ಪಕ್ಷದಲ್ಲಿ ಪುರುಷರನ್ನೇ ಬಂಧಿಸಿಡಬೇಕು ಎಂದು ಕೇರಳ ಹೈಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿತು [ಫಿಯೋನಾ ಜೋಸೆಫ್ ಇನ್ನಿತರರು ಮತ್ತು ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಮಹಿಳಾ ಹಾಸ್ಟೆಲ್‌ಗೆ ಕರ್ಫ್ಯೂ ವಿಧಿಸುವುದರಿಂದ ಯಾವುದೇ ಉಪಯೋಗವಿಲ್ಲ ಮತ್ತು ಮಹಿಳಾ ವಿದ್ಯಾರ್ಥಿನಿಯರ ಮೇಲಿನ ಅಪನಂಬಿಕೆಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

“ನೀವು ಪುರುಷರನ್ನು ಬಂಧಿಸಿಡಿ. ನಾನು (ಇದನ್ನು) ಏಕೆ ಹೇಳುತಿದ್ದೇನೆ ಎಂದರೆ ತೊಂದರೆ ಸೃಷ್ಟಿಸುವುದು ಅವರು. ರಾತ್ರಿ 8.00 ಗಂಟೆಯ ನಂತರ ಪುರುಷರಿಗೆ ಕರ್ಫ್ಯೂ ವಿಧಿಸಿ. ಹೆಂಗಸರು ಹೊರಗೆ ಓಡಾಡಿಕೊಂಡಿರಲಿ’’ ಎಂದು ನ್ಯಾಯಾಧೀಶರು ಹೇಳಿದರು.

ಕೇರಳ ಇನ್ನೂ ಪುರಾತನ ನಿಯಮಗಳಿಂದ ಮುಕ್ತವಾಗಿಲ್ಲ ಎಂದ ನ್ಯಾಯಮೂರ್ತಿಗಳು ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಹಳೆಯ ಕಾಲದವರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

"ನಾವು ಎಷ್ಟು ದಿನ ಎಂದು ನಮ್ಮ ವಿದ್ಯಾರ್ಥಿಗಳನ್ನು ಬಂಧಿಸಿ ಇಡಬಹುದು? ಯೋಚಿಸಿ, ಕೇರಳ ಪ್ರಬುದ್ಧವಾಗಿಲ್ಲ ಮತ್ತು ನಮ್ಮ ವಿದ್ಯಾರ್ಥಿಗಳನ್ನು ಬೀಗ ಹಾಕಿಡಬೇಕೆಂದು ಬಯಸುತ್ತದೆ. ಸಮಾಜ ಬಯಸುವುದಾದರೆ ಅದು ಹಾಗೆ ಇರಲಿ. ಬೇರೆ ತಲೆಮಾರಿನ ಮಂದಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಹೊಸ ಪೀಳಿಗೆ ಮೇಲೆ ಕಾನೂನು ವಿಧಿಸಲು ನಮಗೆ ಯಾವುದೇ ಹಕ್ಕಿಲ್ಲ” ಎಂದು ನ್ಯಾಯಾಲಯ ಹೇಳಿತು.

ವಿನಾಕಾರಣ ರಾತ್ರಿ 9.30ರ ನಂತರ ಉನ್ನತ ಶಿಕ್ಷಣ ಕಾಲೇಜುಗಳ ಹಾಸ್ಟೆಲ್‌  ಪ್ರವೇಶ ಮತ್ತು ನಿರ್ಗಮನಕ್ಕೆ ಕಡಿವಾಣ ಹಾಕಿ 2019ರಲ್ಲಿ ಹೊರಡಿಸಿದ್ದ ಸರ್ಕಾರಿ ಅಧಿಸೂಚನೆ ಪ್ರಶ್ನಿಸಿ ಎಂಬಿಬಿಎಸ್ ಓದುತ್ತಿದ್ದ ಐವರು ವಿದ್ಯಾರ್ಥಿನಿಯರು ಕೋರಿಕ್ಕೋಡ್‌ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮನೆಗಳಲ್ಲಿ ಎಲ್ಲಾ ಹತಾಶೆಯನ್ನೂ ಮಹಿಳೆಯರ ಮೇಲೆ ಹಾಕುತ್ತೇವೆ. ಮಹಿಳೆಯರೇ ಸದಾ ದಾಳಿಗೆ ತುತ್ತಾಗುತ್ತಾರೆ ಎಂದು ಅದು ಹೇಳಿತು.

ಮಹಿಳೆಯರು ಕೂಡ ಸಮಾಜದಲ್ಲಿ ಜೀವಿಸಬೇಕಿದೆ. ಸಂವಿಧಾನದ 19 ನೇ ವಿಧಿ ಆತ್ಯಂತಿಕವಾದುದಲ್ಲದೇ ಇರುವುದರಿಂದ ನಿರ್ಬಂಧ ಹೇರಲು ಯಾವುದೇ ಸಮಸ್ಯೆ ಇಲ್ಲ. ಆದರೆ ಅಂತಹ ನಿರ್ಬಂಧಗಳು ಪುರುಷ ಮತ್ತು ಮಹಿಳೆಯರೆಲ್ಲರಿಗೂ ಸಮನಾಗಿ ಅನ್ವಯವಾಗಬೇಕೇ ವಿನಾ ಒಂದು ಲಿಂಗಕ್ಕಲ್ಲ ಎಂದು ಪೀಠ ತಿಳಿಸಿತು.