A1
ಸುದ್ದಿಗಳು

ಹೋಟೆಲ್, ರೆಸ್ಟೋರೆಂಟ್‌ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ

ಅಕ್ರಮ ವ್ಯಾಪಾರ ವಿಧಾನ ಹಾಗೂ ಗ್ರಾಹಕ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಸಲುವಾಗಿ ಹೊರಡಿಸಲಾದ ಸಿಸಿಪಿಎ ಮಾರ್ಗಸೂಚಿಯಲ್ಲಿ ದೂರುಗಳನ್ನು ಸಲ್ಲಿಸಲು ಅನುವಾಗುವಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆಯನ್ನು ಕೂಡ ಒದಗಿಸಲಾಗಿದೆ.

Bar & Bench

ಹೋಟೆಲ್‌, ರೆಸ್ಟೋರೆಂಟ್‌ಗಳು ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ ಎಂಬ ಷರತ್ತಿರುವ ನೂತನ ಮಾರ್ಗಸೂಚಿಗಳನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೊರಡಿಸಿದೆ.

ಮಾರ್ಗಸೂಚಿಗಳ ವಿವರ ಹೀಗಿದೆ:

  • ಹೋಟೆಲ್‌, ರೆಸ್ಟೋರೆಂಟ್‌ಗಳು, ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ.

  • ಯಾವುದೇ ಇತರೆ ಹೆಸರಿನಿಂದಲೂ ಸೇವಾ ಶುಲ್ಕ ಸಂಗ್ರಹಿಸಬಾರದು.

  • ಗ್ರಾಹಕರು ಸೇವಾ ಶುಲ್ಕ ಪಾವತಿಸಬೇಕು ಎಂದು ಹೋಟೆಲ್‌ ಅಥವಾ ರೆಸ್ಟೋರೆಂಟ್‌ ಒತ್ತಾಯಿಸುವಂತಿಲ್ಲ. ಸೇವಾ ಶುಲ್ಕ ಎಂಬುದು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂಬ ವಿಚಾರವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸತಕ್ಕದ್ದು.

  • ಸೇವಾ ಶುಲ್ಕ ಸಂಗ್ರಹ ಆಧರಿಸಿ ಪ್ರವೇಶ ನಿರ್ಬಂಧ ಇಲ್ಲವೇ ಸೇವೆಗಳನ್ನು ಆಧರಿಸಿ ನಿಯಮಗಳನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ.

  • ಸೇವಾ ಶುಲ್ಕವನ್ನು ಆಹಾರದ ಬಿಲ್‌ನೊಂದಿಗೇ ಸೇರಿಸಿ ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸಂಗ್ರಹಿಸುವಂತಿಲ್ಲ.

ಅನ್ಯಾಯದ ವ್ಯಾಪಾರ ವಿಧಾನ ಹಾಗೂ ಗ್ರಾಹಕ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಸಲುವಾಗಿ ಹೊರಡಿಸಲಾದ ಸಿಸಿಪಿಎ ಮಾರ್ಗಸೂಚಿಯಲ್ಲಿ ದೂರುಗಳನ್ನು ಸಲ್ಲಿಸಲು ಅನುವಾಗುವಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್‌) ಸಂಖ್ಯೆಯನ್ನು ಕೂಡ ಒದಗಿಸಿದೆ.

ಗ್ರಾಹಕರು ಈ ಕೆಳಕಂಡ ದೂರವಾಣಿ ಸಂಖ್ಯೆ, ಜಾಲತಾಣ ಹಾಗೂ ಇಮೇಲ್‌ ವಿಳಾಸ ಬಳಸಿ ದೂರು ನೀಡಬಹುದು.

ಎನ್‌ಸಿಎಚ್‌ ಸಂಖ್ಯೆ: 1915
ಇ- ದಾಖಿಲ್‌ ಜಾಲತಾಣ: www.e-daakhil.nic.in.
ಸಿಸಿಪಿಎ ಇಮೇಲ್‌ ವಿಳಾಸ: com-ccpa@nic.in.