Church  Image for representative purpose
ಸುದ್ದಿಗಳು

ಅನುಮತಿ ಇಲ್ಲದೆ ಮನೆಗಳನ್ನು ಪ್ರಾರ್ಥನಾ ಮಂದಿರವಾಗಿ ಬಳಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ನೆರೆಹೊರೆಯವರಿಗೆ ಶಬ್ದ ಅಥವಾ ತೊಂದರೆ ಉಂಟುಮಾಡುವುದಿಲ್ಲ ಎಂದು ಒಪ್ಪಿಕೊಂಡರೆ ಸಾಲದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯಿಲ್ಲದೆ ಮನೆಗಳನ್ನು ಪ್ರಾರ್ಥನಾ ಮಂದಿರಗಳಾಗಿ ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ ಪಾದ್ರಿ ಎಲ್ ಜೋಸೆಫ್ ವಿಲ್ಸನ್ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].

ಟಿ ವಿಲ್ಸನ್ ಮತ್ತುಜಿಲ್ಲಾಧಿಕಾರಿ ಇನ್ನಿತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ತಾವೇ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾ. ಎನ್‌ ಆನಂದ್‌ ವೆಂಕಟೇಶ್, ಆಸ್ತಿಯನ್ನು ಪ್ರಾರ್ಥನಾ ಮಂದಿರವಾಗಿ ಬಳಸುವುದು ಹಕ್ಕು ಎಂದು ಹೇಳಲಾಗದು ಎಂಬುದಾಗಿ ತಿಳಿಸಿದರು.

"ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸಲು ಸಂಬಂಧಿತ ನಿಯಮಗಳ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ, ಅರ್ಜಿದಾರರು ಅನುಮತಿ ಪಡೆಯದೆ ಮನೆಗಳಲ್ಲಿ ಪ್ರಾರ್ಥನಾ ಸಭಾಂಗಣವಿದ್ದು, ಪ್ರಾಥನಾ ಸಭೆ ನಡೆಸುವ ಹಕ್ಕಿದೆ ಎನ್ನುವಂತಿಲ್ಲ" ಎಂದು ನ್ಯಾಯಾಲಯ ವಿವರಿಸಿತು.

ನೆರೆಹೊರೆಯವರಿಗೆ ಯಾವುದೇ ಶಬ್ದ ಅಥವಾ ತೊಂದರೆ ಉಂಟುಮಾಡುವುದಿಲ್ಲ ಎಂದು ಒಪ್ಪಿಕೊಂಡರೆ ಸಾಲದು, ಮನೆಯನ್ನು ಪ್ರಾರ್ಥನಾ ಸ್ಥಳವನ್ನಾಗಿ ಬದಲಿಸುವ ಮೂಲಕ ಪ್ರಾರ್ಥನಾ ಸಭೆಗಳನ್ನು ನಡೆಸಬಾರದು ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.

"ಧ್ವನಿವರ್ಧಕ ಮತ್ತು ಮೈಕ್ರೊಫೋನ್ ಬಳಸದೆ ಇರುವುದು ಸಮಸ್ಯೆಗೆ ಪರಿಹಾರವಲ್ಲ. ಅರ್ಜಿದಾರರು ಮನೆಯನ್ನು ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಿ ಪ್ರಾರ್ಥನಾ ಸಭೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬುದು ಇಲ್ಲಿ ಮುಖ್ಯ. ಅದಕ್ಕೆ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆಯಬೇಕು" ಎಂದು ಅದು ನುಡಿಯಿತು.

ಅರ್ಜಿದಾರರಾದ ವರ್ಡ್ ಆಫ್ ಗಾಡ್ ಮಿನಿಸ್ಟ್ರೀಸ್ ಟ್ರಸ್ಟ್‌ನ ರೂವಾರಿಯಾದ ಪಾದ್ರಿ ಎಲ್ ಜೋಸೆಫ್ ವಿಲ್ಸನ್ ತಮ್ಮ ಒಡೆತನದ ಆಸ್ತಿಯಲ್ಲಿ ನಿಯಮಿತವಾಗಿ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಈ ಬಗ್ಗೆ ಕೆಲ ದೂರುಗಳು ಬಂದಿದ್ದವು. ಈ ಮಧ್ಯೆ ತಮ್ಮದೇ ಆಸ್ತಿಯಲ್ಲಿ ಚರ್ಚ್‌ ನಿರ್ಮಿಸುವುದಕ್ಕಾಗಿ ಅನುಮತಿ ಪಡೆಯಲು ಅವರು ಮುಂದಾಗಿದ್ದರು.

 ಅವರ ಅರ್ಜಿ ತಿರಸ್ಕೃತವಾಗಿದ್ದರಿಂದ  ಪ್ರಾರ್ಥನಾ ಮಂದಿರ ಮುಚ್ಚುವಂತೆ ಅವರಿಗೆ ತಹಶೀಲ್ದಾರ್‌ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಪಾದ್ರಿ ವಿಲ್ಸನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಾರ್ಥನಾ ಸಭೆಗಳ ಬಗ್ಗೆ ನೆರೆಹೊರೆಯವರು ದೂರು ನೀಡಿದ್ದಾರೆ ಎಂಬ ಜಿಲ್ಲಾಧಿಕಾರಿ ಅವರ ವಾದವನ್ನು ಪರಿಗಣಿಸಿ, ಇದು ಈ ಹಿಂದೆ ವಿಚಾರಣೆ ನಡೆಸಿದ್ದ ಪ್ರಕರಣದಂತೆ ಪ್ರಸ್ತುತ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿತು.

"ಆಸ್ತಿಯನ್ನು ಪ್ರಾರ್ಥನಾ ಸಭೆಗಳನ್ನು ನಡೆಸಲು ಪ್ರಾರ್ಥನಾ ಮಂದಿರವಾಗಿ ಬಳಸಬಾರದು. ಅರ್ಜಿದಾರರು ಆಸ್ತಿಯನ್ನು ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಲು ಬಯಸಿದರೆ, ಅರ್ಜಿದಾರರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯುವಂತೆ ನಿರ್ದೇಶಿಸಲಾಗಿದೆ. ಅರ್ಜಿದಾರರು ಮತ್ತೊಮ್ಮೆ ಆಸ್ತಿಯನ್ನು ಪ್ರಾರ್ಥನಾ ಮಂದಿರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರೆ, ಕಾನೂನಿನ ಪ್ರಕಾರ ಮುಂದುವರಿಯಲು ಪ್ರತಿವಾದಿಗಳು ಮುಕ್ತವಾಗಿದ್ದಾರೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.