Gujarat High Court
Gujarat High Court 
ಸುದ್ದಿಗಳು

ಒಪ್ಪಂದ ಮುಗಿದಿದ್ದರೂ ಮೋರ್ಬಿ ಸೇತುವೆ ನಿರ್ವಹಣೆಗೆ ಅನುಮತಿಸಿದ್ದು ಹೇಗೆ? ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಪ್ರಶ್ನೆ

Bar & Bench

ಖಾಸಗಿ ಗುತ್ತಿಗೆದಾರರೊಡನೆ ಈ ಮೊದಲ ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ಮೂರು ವರ್ಷಗಳವರೆಗೂ ಮೋರ್ಬಿ ತೂಗು ಸೇತುವೆಯ ನಿರ್ವಹಣೆಗೆ ಏಕೆ ಅನುಮತಿ ನೀಡಲಾಗಿತ್ತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಗುಜರಾತ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಒಪ್ಪಂದದ ವಿವರ ಇರುವ ಕಡತವನ್ನು ವಶಕ್ಕೆ ಪಡೆದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಸರ್ಕಾರಕ್ಕೆ ತಾಕೀತು ಮಾಡಿತು.

"ಯಾವ ಆಧಾರದ ಮೇಲೆ ಮೊದಲ ಒಪ್ಪಂದದ ಅವಧಿ ಮುಗಿದ ನಂತರ ಸೇತುವೆಯನ್ನು ಮೂರು ವರ್ಷಗಳ ಕಾಲ ಗುತ್ತಿಗೆದಾರರಿಗೆ ನಿರ್ವಹಣೆ ಮಾಡಲು ಅನುಮತಿ ನೀಡಲಾಯಿತು? ಈ ಎಲ್ಲಾ ಪ್ರಶ್ನೆಗಳ ವಿವರಗಳನ್ನು ಎರಡು ವಾರಗಳ ನಂತರ ನಡೆಯಲಿರುವ ಮುಂದಿನ ವಿಚಾರಣೆ ಹೊತ್ತಿಗೆ ಅಫಿಡವಿಟ್‌ನಲ್ಲಿ ಸಲ್ಲಿಸಬೇಕು" ಎಂದು ಅದು ಆದೇಶಿಸಿತು.

ಗುಜರಾತ್‌ನ ಮೋರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ʼಜುಲ್ಟು ಪುಲ್ʼ ಹೆಸರಿನ 141 ವರ್ಷದ ತೂಗು ಸೇತುವೆ ಖಾಸಗಿ ನಿರ್ವಾಹಕರಾದ ಒರೆವಾ ಗ್ರೂಪ್ ದುರಸ್ತಿ ಕಾಮಗಾರಿ ಬಳಿಕ ಅಂದರೆ ಅಕ್ಟೋಬರ್ 30ರಂದು ಕುಸಿದುಬಿದ್ದು ನೂರಾರು ಜನ ಸಾವನ್ನಪ್ಪಿದ್ದರು. ಸಾರ್ವಜನಿಕರ ಓಡಾಟಕ್ಕೆ ಮುಕ್ತವಾದ ನಾಲ್ಕೇ ದಿನಗಳಲ್ಲಿ ಸೇತುವೆ ಕುಸಿದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ), ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪಕ್ಷಕಾರರನ್ನಾಗಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.

ಸರ್ಕಾರ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದ ನ್ಯಾಯಾಲಯ ಘಟನೆಯ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸೂಚಿಸಿತ್ತು.