ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ, ಮಹೇಶ್ ಶೆಟ್ಟಿ ತಿಮರೋಡಿ ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ, ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಸರ್ಕಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಪ್ರತಿಪಾದಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು “ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 59ರ ಪ್ರಕಾರ ಗಡಿಪಾರು ಆದೇಶ ಹೊರಡಿಸಿದ 30 ದಿನಗಳ ಒಳಗೆ ಬಾದಿತ ವ್ಯಕ್ತಿಗೆ ಆ ಆದೇಶ ಪ್ರಶ್ನಿಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಅರ್ಜಿದಾರರು ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ” ಎಂದರು.
ತಿಮರೋಡಿ ಪರ ವಕೀಲರು “ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಗುರುವಾರ ಅಲ್ಲಿ ವಿಚಾರಣೆ ನಡೆಯಲಿದೆ. ಆದ್ದರಿಂದ, ಈ ಅರ್ಜಿಯ ವಿಚಾರಣೆ ಮುಂದೂಡಬೇಕು” ಎಂದು ಪೀಠಕ್ಕೆ ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ನಿರೀಕ್ಷಣಾ ಜಾಮೀನು ಅರ್ಜಿ ಕುರಿತಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಏನಾಗಲಿದೆ ಕಾದು ನೋಡೋಣ. ನೀವೂ ಸಹ (ಅರ್ಜಿದಾರರು) ಸೆಕ್ಷನ್ 59ರ ಪ್ರಕಾರ ಮೊದಲು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿ, ನಂತರ ಇಲ್ಲಿಗೆ ಬನ್ನಿ. ಯಾವುದೇ ಅಡ್ಡದಾರಿ ಬಳಸಬೇಡಿ ಎಂದು ಮೌಖಿಕವಾಗಿ ಸೂಚಿಸಿತಲ್ಲದೆ, ವಿಚಾರಣೆಯನ್ನು ಸೋಮವಾರಕ್ಕೆ (ಅಕ್ಟೋಬರ್ 13) ಮುಂದೂಡಿತು.
ಈ ವೇಳೆ ತಿಮರೋಡಿ ಪರ ವಕೀಲರು, ಅರ್ಜಿಯ ಮುಂದಿನ ವಿಚಾರಣೆವರೆಗೆ ಮಧ್ಯಂತರ ಆದೇಶ ವಿಸ್ತರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರರ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಅರ್ಜಿದಾರರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದ್ದು, ಈಗಾಗಲೇ ಅವರು ತಲೆ ಮರೆಸಿಕೊಂಡಿದ್ದಾರೆ. ಹೀಗಿರುವಾಗ, ಮಧ್ಯಂತರ ಆದೇಶ ವಿಸ್ತರಿಸುವ ಪ್ರಶ್ನೆಯೇ ಎದುರಾಗುವುದಿಲ್ಲ ಎಂದರು.
ಆಗ ಪೀಠವು ಅರ್ಜಿದಾರರು ತಲೆಮರೆಸಿಕೊಂಡಿದ್ದಾರೆ ಎಂದಾದರೆ, ಅಲ್ಲಿಗೆ ಅವರ ಗಡಿಪಾರು ಆದೇಶದ ಉದ್ದೇಶ ಈಡೇರಿದಂತಾಯಿತಲ್ಲವೇ ಎಂದು ಲಘುಧಾಟಿಯಲ್ಲಿ ನುಡಿಯಿತು. ಅಂತಿಮವಾಗಿ, ಗಡಿಪಾರು ಆದೇಶ ಸಂಬಂಧ ಆತುರದ ಕ್ರಮಕ್ಕೆ ಮುಂದಾಗದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿದ ಪೀಠವು ಅಕ್ಟೋಬರ್ 12ರ ಮಧ್ಯಾಹ್ನ 2.30ಕ್ಕೆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಿತು.