ಸುದ್ದಿಗಳು

ಪ್ರಾಣಿಗಳಿಗೆ ಧರ್ಮ ಇದ್ದಿದ್ದರೆ ಅವು ಮನುಷ್ಯರನ್ನು ಸೈತಾನರಂತೆ ಕಾಣುತ್ತಿದ್ದವು: ನ್ಯಾ. ಎಂ ಎಂ ಸುಂದರೇಶ್

ಮಾನವ-ವನ್ಯಜೀವಿ ಸಂಘರ್ಷದ ಕುರಿತು ನಾಲ್ಸಾ ಮತ್ತು ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತಿರುವನಂತಪುರದಲ್ಲಿ ಜಂಟಿಯಾಗಿ ಶನಿವಾರ ಆರಂಭಿಸಿದ್ದ ಸಮಾವೇಶ ಇಂದು ಸಮಾರೋಪಗೊಳ್ಳಲಿದೆ.

Bar & Bench

ಪ್ರಾಣಿಗಳಿಗೆ ಧರ್ಮ ಇದ್ದಿದ್ದರೆ ಅವು ಮನುಷ್ಯರನ್ನು ಸೈತಾನರಂತೆ ಪರಿಗಣಿಸುತ್ತಿದ್ದವು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ವಿಷಾದ ವ್ಯಕ್ತಪಡಿಸಿದರು.

ಮಾನವ-ವನ್ಯಜೀವಿ ಸಂಘರ್ಷದ ಕುರಿತು ನಾಲ್ಸಾ ಮತ್ತು ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತಿರುವನಂತಪುರದಲ್ಲಿ ಜಂಟಿಯಾಗಿ ಶನಿವಾರ ಚಾಲನೆ ನೀಡಿದ ಸಮಾವೇಶದಲ್ಲಿ ಅವರು ಮಾತನಾಡಿದರು. ಇಂದು ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ಅರಣ್ಯ ನಾಶ ಹಾಗೂ ಮಾನವ ಕೇಂದ್ರಿತ ನೀತಿಗಳಿಂದಾಗಿ ವನ್ಯಜೀವಿಗಳೊಂದಿಗೆ ಮಾನವ ಸಂಘರ್ಷ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Justice MM Sundresh
ಪ್ರಾಣಿಗಳಿಗೆ ಧರ್ಮ ಇದ್ದಿದ್ದರೆ ಅವು ಮನುಷ್ಯರನ್ನು ಸೈತಾನರಂತೆ ಪರಿಗಣಿಸುತ್ತಿದ್ದವು.
ನ್ಯಾ. ಎಂ ಎಂ ಸುಂದರೇಶ್

ಈ ಕುರಿತಂತೆ ವಾಟ್ಸಾಪ್‌ ಸಂದೇಶವೊಂದನ್ನು ಓದಿದ ಅವರು ಪ್ರಾಣಿಗಳಿಗೆ ಧರ್ಮ ಇದ್ದಿದ್ದರೆ ಅವು ಮನುಷ್ಯರನ್ನು ಸೈತಾನರಂತೆ ಪರಿಗಣಿಸುತ್ತಿದ್ದವು ಎಂದರು.

ಇದೇ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಕರ್ನಾಟಕದ ಮಂಗಳೂರಿನಲ್ಲಿ ವರದಿಯಾದ ಘಟನೆಯೊಂದನ್ನು ಉಲ್ಲೇಖಿಸಿದರು.

Justice BV Nagarathna

"ಮಂಗಳೂರು ಬಳಿಯ ತೋಟದ ಮನೆಯೊಂದರಲ್ಲಿ ಚಿರತೆ ಮತ್ತು ನಾಯಿ ದಾರಿ ತಪ್ಪಿ ಶೌಚಾಲಯಕ್ಕೆ ನುಗ್ಗಿದವು. ಮಾಲೀಕರಿಗೆ ಇದರ ಅರಿವಿರಲಿಲ್ಲ ಮತ್ತು ಎಂದಿನಂತೆ ರಾತ್ರಿ ಶೌಚಾಲಯಕ್ಕೆ ಬೀಗ ಹಾಕಿ ಮಲಗಲು ಹೋದರು. ಬೆಳಿಗ್ಗೆ ಶೌಚಾಲಯದ ಬಾಗಿಲು ತೆರೆದಾಗ, ಆಶ್ಚರ್ಯಕರವಾಗಿ, ಚಿರತೆ ಮತ್ತು ನಾಯಿ ಎರಡೂ ಹೊರಬಂದವು. ಇದರ ಅರ್ಥವೇನು? ಈ ಘಟನೆ, ಪ್ರಾಣಿಗಳು ಸಹ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುತ್ತವೆ.  ಅವು ಅನೇಕ ರೀತಿಯಲ್ಲಿ ಪರಿಸ್ಥಿತಿಯನ್ನು ಅರಿತುಕೊಳ್ಳುವ ಭಾವನಾತ್ಮಕ ಜೀವಿಗಳಾಗಿವೆ ಎಂದು ತೋರಿಸುತ್ತದೆ. ಎರಡೂ ಸೆರೆಯಲ್ಲಿರುವುದ ತಿಳಿದಿರುವ ಕಾರಣಕ್ಕೇ ಚಿರತೆ ನಾಯಿಯನ್ನು ತಿಂದುಹಾಕಲಿಲ್ಲ" ಎಂದು ನ್ಯಾಯಮೂರ್ತಿ ನಾಗರತ್ನ ವಿವರಿಸಿದರು.

ಭಾರತದಲ್ಲಿ ಹಿಂದಿನಿಂದಲೂ ಪ್ರಕೃತಿಯೊಂದಿಗೆ ಸಹಬಾಳ್ವೆ ಇದ್ದಿತ್ತಾದರೂ ಇಂದಿನ ದಿನಗಳಲ್ಲಿ ಮಾನವ ಕೇಂದ್ರಿತ ದೃಷ್ಟಿಕೋನ ಬಲವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂವಿಧಾನದ 51(ಎ)(ಜಿ) ವಿಧಿಯಡಿಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕೆಂಬ ಮೂಲಭೂತ ಕರ್ತವ್ಯವನ್ನು ನಿರ್ಲಕ್ಷಿಸಲಾಗಿದೆ ಎಂದರು.

Justice Vikram Nath

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಮತ್ತು ಅವುಗಳನ್ನು ಆಶ್ರಯ ಕೇಂದ್ರಗಳಿಂದ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್‌ ಮತ್ತೊಂದು ಪೀಠ ಆಗಸ್ಟ್‌ 11ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಆ ಘಟನೆಯನ್ನು ಹಾಸ್ಯದ ಎಳೆಯೊಂದಿಗೆ ಈ ವೇಳೆ ಪ್ರಸ್ತಾಪಿಸಿದರು.

ನಾನು ಮಾಡಿದ ಅಲ್ಪ ಸ್ವಲ್ಪ ಕೆಲಸದಿಂದ ಕಾನೂನು ವಲಯದಲ್ಲಿ ಮಾತ್ರ ಪರಿಚಿತರಾಗಿದ್ದೆ. ಆದರೆ, ಬೀದಿ ನಾಯಿಗಳ ಪ್ರಕರಣ ನನ್ನನ್ನು ಭಾರತದಲ್ಲಷ್ಟೇ ಅಲ್ಲ, ದೇಶದ ಹೊರಗೂ ನನ್ನನ್ನು ಪ್ರಸಿದ್ಧನನ್ನಾಗಿಸಿತು. ಇದಕ್ಕಾಗಿ ನಾನು ಧನ್ಯನಾಗಿದ್ದೇನೆ. ಈ ಪ್ರಕರಣದ ವಿಚಾರಣೆಯನ್ನು ನನಗೆ ವಹಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಕೃತಜ್ಞನಾಗಿದ್ದೇನೆ. ನಾಯಿ ಪ್ರಿಯರಲ್ಲದೆ, ನಾಯಿಗಳು ಸಹ ನನಗೆ ಆಶೀರ್ವಾದ ಮತ್ತು ಶುಭ ಹಾರೈಸುತ್ತಿವೆ” ಎಂದು ನಗೆ ಚಟಾಕಿ ಹಾರಿಸಿದರು.  

 ಇದೇ ವೇಳೆ ಮಾತನಾಡಿದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಮಾನವ–ವನ್ಯಜೀವಿ ಸಂಘರ್ಷ ಪರಿಹರಿಸಲು ಸಂಘರ್ಷ ತಪ್ಪಿಸುವಿಕೆ, ಸಂಘರ್ಷ ನಿರ್ವಹಣೆ ಮತ್ತು ಸಂಘರ್ಷ ಪರಿಹಾರ ಎಂಬ ಮೂರು ಹಂತಗಳ ನೀತಿ ರೂಪಿಸಬೇಕು ಎಂದರು.

 ಕೇರಳ ಕಾನೂನು ಸಚಿವ ಪಿ ರಾಜೀವ್ , ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್, ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು.