Supreme Court, Waqf Amendment Act 
ಸುದ್ದಿಗಳು

ವಕ್ಫ್‌ ತಿದ್ದುಪಡಿ ಕಾಯಿದೆ: ನ್ಯಾಯಾಲಯದಲ್ಲಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕೇಂದ್ರ ನೀಡಿರುವ ಸಮರ್ಥನೆಗಳೇನು?

ಹಿಂದೂ ದತ್ತಿಗಳು ಅಥವಾ ಇತರ ದತ್ತಿಗಳು ಮತ್ತು ಶಾಸನಗಳು ಆಯಾ ಸಮುದಾಯಕ್ಕೆ ಮಾತ್ರ ಅನ್ವಯಿಸುತ್ತವೆ. ಇತರ ಸಮುದಾಯಗಳ ಸದಸ್ಯರೊಂದಿಗೆ ಈ ದತ್ತಿಗಳ ಸಂವಹನ, ವ್ಯವಹಾರವು ಕಡಿಮೆ ಅಥವಾ ಯಾವುದೇ ರೀತಿಯಲ್ಲಿ ಇರುವುದಿಲ್ಲ ಎಂದಿರುವ ಕೇಂದ್ರ.

Bar & Bench

ಖಾಸಗಿ ಮತ್ತು ಸರ್ಕಾರಿ ಆಸ್ತಿಗಳನ್ನು ಅತಿಕ್ರಮಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿರುವ ವಕ್ಫ್ ನಿಬಂಧನೆಗಳ ದುರುಪಯೋಗವನ್ನು ತಡೆಯಲು ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಅನ್ನು ತರಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಹೊಸ ಕಾನೂನನ್ನು ಪ್ರಶ್ನಿಸುವ ಅರ್ಜಿಗಳಿಗೆ ಲಿಖಿತ ಪ್ರತಿಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಕೇಂದ್ರ ಸರ್ಕಾರವು, ವಕ್ಫ್ ಕಾಯ್ದೆಗೆ 2013 ರಲ್ಲಿ ಹಿಂದಿನ ತಿದ್ದುಪಡಿಯನ್ನು ತಂದ ನಂತರ, "ಔಕಾಫ್ ಪ್ರದೇಶ" ದಲ್ಲಿ ಶೇಕಡಾ 116 ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಿದೆ.

"ವಕ್ಫ್ ಆಸ್ತಿಗಳಲ್ಲಿ ಶೇಕಡಾ 116 ರಷ್ಟು ಹೆಚ್ಚಳ ಉಂಟಾಗಿರುವುದು 1995 ರ ಕಾಯ್ದೆಯ ಶಾಸನಾತ್ಮಕ ವಿನ್ಯಾಸವನ್ನು ಗಂಭೀರವಾಗಿ ನೋಡುವ [ನಿರ್ದಿಷ್ಟವಾಗಿ 2013ರ ತಿದ್ದುಪಡಿಗಳಿಂದಾಗಿ ಉಂಟಾಗಿರುವ ಪರಿಣಾಮದ ಬಗ್ಗೆ] ಅಗತ್ಯವನ್ನು ಉಂಟುಮಾಡಿದೆ. ವಿಶೇಷವಾಗಿ ಭೂಕಬಳಿಕೆ ಹಾಗೂ ಖಾಸಗಿ ಭೂಮಿಗಳು, ಸರ್ಕಾರಿ ಭೂಮಿಗಳು ಇತ್ಯಾದಿಗಳ ಮೇಲಿನ ಅತಿಕ್ರಮಣದ ಗಂಭೀರ ದೂರುಗಳನ್ನು ದೇಶಾದ್ಯಂತ ಸಂಸತ್ತಿಗೆ ಚುನಾಯಿತರಾಗಿ ಬರುವ ಜನಪ್ರತಿನಿಧಿಗಳು ನಿರಂತರವಾಗಿ ಸ್ವೀಕರಿಸುತ್ತಿದ್ದಾರೆ. ಸಂಸತ್ತಿನ ಭಾಗವಾಗಿರುವ ಇವರು ಜನರ ಇಚ್ಛೆಯ ಅನುಸಾರ ಶಾಸನಗಳನ್ನು ಮಾಡುತ್ತಾರೆ," ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ.

ಬಳಕೆಯಿಂದಾದ ವಕ್ಫ್

'ಬಳಕೆಯಿಂದಾದ ವಕ್ಫ್' ಎಂಬ ಪರಿಕಲ್ಪನೆಯನ್ನು ರದ್ದುಗೊಳಿಸುವುದನ್ನು ಕೇಂದ್ರವು ಸಮರ್ಥಿಸುತ್ತಾ, 1923 ರಿಂದ ಎಲ್ಲಾ ರೀತಿಯ ವಕ್ಫ್‌ಗಳಿಗೆ ಕಡ್ಡಾಯ ನೋಂದಣಿ ಪದ್ಧತಿ ಇದ್ದರೂ, ವ್ಯಕ್ತಿಗಳು ಅಥವಾ ಸಂಸ್ಥೆಗಳು ಖಾಸಗಿ ಭೂಮಿಗಳು ಮತ್ತು ಸರ್ಕಾರಿ ಭೂಮಿಯನ್ನು ವಕ್ಫ್ ಎಂದು ಹೇಳಿಕೊಳ್ಳುತ್ತಿದ್ದರು. ಇದು ವೈಯಕ್ತಿಕ ನಾಗರಿಕರ ಅಮೂಲ್ಯ ಆಸ್ತಿ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೆ, ಸಾರ್ವಜನಿಕ ಆಸ್ತಿಗಳ ಮೇಲಿನ ಅನಧಿಕೃತ ಹಕ್ಕುಗಳನ್ನು ಕಸಿದುಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದೆ.

"'ಬಳಕೆಯಿಂದಾದ ವಕ್ಫ್' ಎಂಬ ಪರಿಕಲ್ಪನೆಯ ಅಸ್ತಿತ್ವದ ಹೊರತಾಗಿಯೂ, ಶಾಸನಗಳ ನಿಯಂತ್ರಕ ನಿಬಂಧನೆಗಳು ಉದ್ದೇಶಿತ ಉದ್ದೇಶಗಳನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಮುಂದೆ ನೋಂದಣಿ ಅಥವಾ ಸ್ವಯಂ ಘೋಷಣೆಯ ಅಗತ್ಯವನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ, ಕನಿಷ್ಠ 1923 ರಿಂದ ಎಲ್ಲಾ ರೀತಿಯ ವಕ್ಫ್‌ಗಳ ಮೇಲೆ ನೋಂದಣಿ ಅವಶ್ಯಕತೆಗಳನ್ನು ಜಾರಿಗೊಳಿಸಲು ಮತ್ತು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವ ಸ್ಪಷ್ಟ ಮತ್ತು ಕಡ್ಡಾಯವಾದ ಶಾಸನಾತ್ಮಕ ವ್ಯಾಪ್ತಿಯಿದೆ" ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ವಕ್ಫ್‌ನ ವ್ಯಾಖ್ಯಾನದಿಂದ "ಬಳಕೆದಾರರಿಂದ ವಕ್ಫ್" ಅನ್ನು ಹೊರಗಿಡುವುದು ದೇವರಿಗೆ ಆಸ್ತಿಯನ್ನು ಅರ್ಪಿಸುವ ಹಕ್ಕನ್ನು ಮೊಟಕುಗೊಳಿಸುವುದಿಲ್ಲ ಆದರೆ ಶಾಸನಬದ್ಧ ಅವಶ್ಯಕತೆಗಳಿಗೆ ಅನುಗುಣವಾಗಿ ಸಮರ್ಪಣೆಯ ರೂಪವನ್ನು ನಿಯಂತ್ರಿಸುತ್ತದೆ ಎಂದು ಕೇಂದ್ರ ಹೇಳಿದೆ.

ಒಳಗೊಳ್ಳುವಿಕೆಯ ಉದ್ದೇಶದಿಂದ ಅನ್ಯ ಧರ್ಮೀಯ ಸದಸ್ಯರ ನೇಮಕ

ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸದಸ್ಯರನ್ನಾಗಿಸುವ ಕುರಿತಾದ ಆಕ್ಷೇಪಣೆಗಳಿಗೂ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಕೇಂದ್ರ ವಕ್ಫ್ ಮಂಡಳಿ (ಇದು ಕೇವಲ ಸಲಹಾ ಸಂಸ್ಥೆ) ಮತ್ತು ವಕ್ಫ್ ಮಂಡಳಿ (ಜಾತ್ಯತೀತ ಚಟುವಟಿಕೆಗಳನ್ನು ಮಾತ್ರ ಮೇಲ್ವಿಚಾರಣೆ ಮಾಡುತ್ತದೆ) ಸಂಯೋಜನೆಯಲ್ಲಿನ ಬದಲಾವಣೆಗಳು ವಿಧಿ 26 ರ ಅಡಿಯಲ್ಲಿ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸುವುದಿಲ್ಲ ಎಂದು ಅದು ಹೇಳಿದೆ.

ವಕ್ಫ್‌ ಸಮಿತಿ ಮತ್ತು ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರು "ಅತ್ಯಂತ ಸಣ್ಣ ಪ್ರಮಾಣದಲ್ಲಿದ್ದು ಅಲ್ಪಸಂಖ್ಯಾತರಾಗಿರುತ್ತಾರೆ" ಎಂದು ಸರ್ಕಾರವು ಹೇಳಿದೆ. ಈ ಸದಸ್ಯರ ಉಪಸ್ಥಿತಿಯು ಸಂಸ್ಥೆಗಳಿಗೆ ಒಳಗೊಳ್ಳುವಿಕೆಯನ್ನು ತರುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಹೇಳಿದೆ. "ವಕ್ಫ್ ಆಡಳಿತದ ಜಾತ್ಯತೀತ ಕಾರ್ಯವ್ಯಾಪ್ತಿಯು ಮುಸ್ಲಿಮೇತರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸಬೇಕಾಗುತ್ತದೆ. ಇವರು ಒಂದೋ ಫಲಾನುಭವಿಗಳಾಗಿರುತ್ತಾರೆ, ಇಲ್ಲವೇ, ಬಾಧಿತ ಪಕ್ಷಕಾರು ಅಥವಾ ಪರಿಣಾಮಗಳನ್ನು ಎದುರಿಸುತ್ತಿರುವ ಪಕ್ಷಕಾರರಾಗಿರುತ್ತಾರೆ" ಎಂದು ಕೇಂದ್ರ ತನ್ನ ಉತ್ತರದಲ್ಲಿ ತಿಳಿಸಿದೆ.

ಅಲ್ಲದೆ, ಇತರೆ ಧರ್ಮದ ದತ್ತಿಗಳು, ಮಂಡಳಿಗಳ ವಿಚಾರದಲ್ಲಿ ಕೇಂದ್ರವು ಏಕೆ ವಿಭಿನ್ನ ಧೋರಣೆ ಅನಸುರಿಸುತ್ತಿದೆ, ಅಲ್ಲೇಕೆ ಅನ್ಯ ಧರ್ಮೀಯರ ನೇಮಕವಿಲ್ಲ? ಎನ್ನುವ ಪ್ರಶ್ನೆಗಳಿಗೂ ಕೇಂದ್ರವು ಉತ್ತರಿಸಿದೆ. ಹಿಂದೂ ದತ್ತಿಗಳು ಅಥವಾ ಇತರ ದತ್ತಿಗಳು ಮತ್ತು ಶಾಸನಗಳು ಆಯಾ ಸಮುದಾಯಕ್ಕೆ ಮಾತ್ರ ಅನ್ವಯಿಸುತ್ತವೆ ಮತ್ತು ಇವುಗಳು ಇತರ ಸಮುದಾಯಗಳ ಸದಸ್ಯರೊಂದಿಗೆ ಈ ದತ್ತಿಗಳ ಸಂವಹನ, ವ್ಯವಹಾರವು ಕಡಿಮೆ ಅಥವಾ ಯಾವುದೇ ರೀತಿಯಲ್ಲಿ ಇರುವುದಿಲ್ಲ ಎಂದು ಉತ್ತರದಲ್ಲಿ ಹೇಳಲಾಗಿದೆ.